Friday, September 20, 2024

ಪ್ರಾಯೋಗಿಕ ಆವೃತ್ತಿ

ಅಳಿವಿನಂಚಿನ ಜಾನಪದ ಕಲೆ ಕಲಿತು, ಬೆಳೆಸಿರಿ: ಶಾಸಕ ದಿನೇಶ್ ಗೂಳಿಗೌಡ

ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಯುವಕರು ಕಲಿತು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಈ ಮೂಲಕ ಕಲೆಯನ್ನು ಬೆಳೆಸಬೇಕು ಎಂದು ಶಾಸಕ ದಿನೇಶ ಗೂಳಿಗೌಡ ಅವರು ಯುವ ಜನತೆಗೆ ಕರೆ ನೀಡಿದರು.

ಮೇಲುಕೋಟೆ ಚಲುವನಾರಾಯಣ ಸ್ವಾಮಿ ರಥಸಪ್ತಮಿ ಉತ್ಸವದ ರಾಜ್ಯಮಟ್ಟದ ಜಾನಪದ ಕಲಾ ಮೇಳದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ “ಸ್ಥಾನಿಕಂ ನಾಗರಾಜ ಅಯ್ಯಂಗಾರ್‌ ಸಾಂಸ್ಕೃತಿಕ ವೇದಿಕೆ”ಯಿಂದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಥಸಪ್ತಮಿ ಜಾನಪದ ರಸಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ಜಾನಪದ ಸಂಸ್ಕೃತಿ, ಹಾಡುಗಾರಿಕೆಯನ್ನು ಕಲಿತು, ಬಾಯಿಂದ ಬಾಯಿಗೆ ವಿಸ್ತರಿಸಿ, ಮುಂದಿನ ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಗ್ರಾಮೀಣ ಸೊಗಡನ್ನು, ಸೊಬಗನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕ ದಿನೇಶ್‌ ಗೂಳಿಗೌಡ ಕರೆ ನೀಡಿದರು.

ಇಂದಿನ ವಿದ್ಯಾರ್ಥಿಗಳು ಫೇಸ್‌ಬುಕ್‌, ವಾಟ್ಸಾಪ್, ಇನ್ಸ್ಟಾಗ್ರಾಂನಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನಾನು ಕಿವಿಮಾತೊಂದನ್ನು ಹೇಳಬಯಸುತ್ತೇನೆ. ನಮ್ಮ ಸಂಸ್ಕೃತಿ, ಕಲೆಗಳ ಕಲಿಕೆಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಿ. ಹಾಡುಗಾರಿಕೆ, ಜಾನಪದ ಕಲೆಗಳನ್ನು ಕಲಿಯಲು ಆಸಕ್ತಿ ಬೆಳೆಸಿಕೊಳ್ಳಿ. ಅವುಗಳು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿವೆ. ಭವಿಷ್ಯದಲ್ಲಿ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇವು ಖಂಡಿತ ಸಹಕಾರಿಯಾಗಿರಲಿದೆ. ಈ ನಿಟ್ಟಿನಲ್ಲಿ ಪೂಜ್ಯ ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ನಮ್ಮ-ನಿಮ್ಮೆಲ್ಲರ ಮೇಲೆ ಇರಲಿ ಎಂದರು.

ಹಬ್ಬಗಳು ಪ್ರತಿ ವರ್ಷ ಬರುತ್ತವೆ, ಹೋಗುತ್ತವೆ. ಆದರೆ, ಎಲ್ಲ ಹಬ್ಬಗಳ ಆಚರಣೆಯ ಹಿಂದೆ ಮಹತ್ತರವಾದ ಅರ್ಥವನ್ನು ನಮ್ಮ ಪೂರ್ವಜರು ಕಲ್ಪಿಸಿದ್ದಾರೆ. ಧಾರ್ಮಿಕ ದಿನಗಳು ಬಹಳ ಪವಿತ್ರವಾದವು. ಪ್ರಕೃತಿ, ಸೂರ್ಯ,ಚಂದ್ರ, ಆಕಾಶ ಇವೆಲ್ಲವುಗಳ ಆರಾಧಕರು ನಾವು. ಭೂಮಿಯ ಮೇಲೆ ಇರುವ ಸಕಲ ಜೀವ ರಾಶಿಗಳೂ ಭಗವಂತನ ಪ್ರೇರಣೆಯಿಂದಲೇ ಬದುಕುತ್ತಿವೆ. ಮುಂದಿನ ವರ್ಷ ನಾಡಿಗೆ ಒಳ್ಳೆಯ ಮಳೆ, ಬೆಳೆ ಆಗಲಿ. ಈ ನಿಟ್ಟಿನಲ್ಲಿ ರೈತಾಪಿ ವರ್ಗಕ್ಕೆ ಭಗವಂತ ಆಶೀರ್ವಾದ ಮಾಡಬೇಕು ಎಂದು ಪ್ರಾರ್ಥಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!