ಹೇಮಾವತಿ ನದಿಯ ತಪ್ಪಲಿನಲ್ಲಿರುವ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವವು ರಥಸಪ್ತಮಿಯ ದಿನವಾದ ಶನಿವಾರ ಸಡಗರ ಸಂಭ್ರಮದಿಂದ ನಡೆಯಿತು.
ಸಾವಿರಾರು ಭಕ್ತಾಧಿಗಳು ಸಮ್ಮುಖದಲ್ಲಿ ಸಚಿವ ಡಾ.ನಾರಾಯಣಗೌಡ ಮತ್ತು ತಹಸೀಲ್ದಾರ್ ಎಂ.ವಿ.ರೂಪಾ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ನಾರಾಯಣಗೌಡ, ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸುವುದರಿಂದ ಸ್ನೇಹ ಸಹಬಾಳ್ವೆಯು ಹೆಚ್ಚಾಗುವ ಮೂಲಕ ನೆಮ್ಮದಿಯ ಜೀವನಕ್ಕೆ ನಾಂದಿಯಾಗಲಿದೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಹಬ್ಬ ಹರಿದಿನ, ಜಾತ್ರೆ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ತಹಶೀಲ್ದಾರ್ ಎಂ.ವಿ.ರೂಪ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ಬ್ರಹ್ಮರಥೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಬಂಡಿಹೊಳೆ ಗ್ರಾ.ಪಂ. ಅಧ್ಯಕ್ಷ ಸುನಿಲ್, ಗ್ರೇಡ್ 2 ತಹಸೀಲ್ದಾರ್ ವಿಶಾಲ್ ಅಹಮದ್, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜನ್, ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ, ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ ಕೆ.ಜಿ.ತಮ್ಮಣ್ಣ, ರಾಜ ಸ್ವನಿರೀಕ್ಷಕಿ ಚಂದ್ರಕಲಾ, ಗ್ರಾಮ ಲೆಕ್ಕಾಧಿಕಾರಿ ಪೂಜಾ, ಸ್ಪೂರ್ತಿ, ಸುನಿಲ್, ಮಂಡ್ಯ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕಿಕ್ಕೇರಿ .ಜಿ.ತಮ್ಮಣ್ಣ, ಮುಖಂಡರಾದ ಬಂಡಿಹೊಳೆ ಅಶೋಕ್, ಕಾಯಿ ಮಂಜೇಗೌಡ, ಗದ್ದೆಹೊಸೂರು ಮಂಜೇಗೌಡ, ರಾಮೇಗೌಡ, ಕುಪ್ಪಹಳ್ಳಿ ಶೇಷಾದ್ರಿ, ಲಕ್ಷ್ಮೀಪುರ ಕುಮಾರಸ್ವಾಮಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ್ದರು.
ಜಾನಪದ ಕಲಾತಂಡಗಳ ರಂಗು
ರಥೋತ್ಸವದ ಸಂಭ್ರಮಕ್ಕೆ ಜಾನಪದ ಕಲಾತಂಡಗಳು ವಿಶೇಷ ರಂಗು ತಂದವು, ವೀರಭದ್ರ ನೃತ್ಯ, ಪೂಜಾ, ಪಟಕುಣಿತ ಹಾಗೂ ಡೊಳ್ಳು ಕುಣಿತವು ನೆರೆದಿದ್ದ ಭಕ್ತರನ್ನು ಆಕರ್ಷಿಸಿತು. ಹೇಮಗಿರಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀರಂಗನಾಥಸ್ವಾಮಿಯ ದರ್ಶನವನ್ನು ಭಕ್ತರು ಪಡೆದರು.
ಫೆಬ್ರವರಿಯಲ್ಲಿ ತೆಪ್ಪೋತ್ಸವ
ಹೇಮಗಿರಿ ಬೆಟ್ಟದ ತಪ್ಪಲಿನಲ್ಲಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಫೆಬ್ರವರಿ 1 ರಂದು ರಾತ್ರಿ 8 ಗಂಟೆಗೆ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ಉತ್ಸವಮೂರ್ತಿಗಳ ತೆಪ್ಪೋತ್ಸವವು ಸಡಗರ ಸಂಭ್ರಮದಿಂದ ನಡೆಯಲಿದ್ದು, ಈ ತೆಪ್ಪೋತ್ಸವ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಎಂದು ತಹಶೀಲ್ದಾರ್ ಎಂ.ವಿ.ರೂಪಾ ಮನವಿ ಮಾಡಿದರು.
ವೃತ್ತ ನಿರೀಕ್ಷಕ ದೀಪಕ್, ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಸಬ್ ಇನ್ಸ್ ಪೆಕ್ಟರ್ ಬಸವರಾಜು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.
ನಿಷೇಧವಿದ್ದರೂ ನಡೆದ ದನಗಳ ಜಾತ್ರೆ
ಈ ಬಾರಿ ರಾಸುಗಳ ಜಾತ್ರೆಯನ್ನು ಕೆ.ಆರ್.ಪೇಟೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತವು ನಿಷೇಧಿಸಿದ್ದರೂ ರೈತರು ಸಾವಿರಾರು ಸಂಖ್ಯೆಯಲ್ಲಿ ರಾಸುಗಳನ್ನು ಕರೆತಂದು ಸಾಂಪ್ರದಾಯಿಕ ದನಗಳ ಜಾತ್ರೆಯನ್ನು ನಡೆಸಿದರು.
ಆದರೂ ಪ್ರತಿ ವರ್ಷದಂತೆ ಹೆಚ್ಚಿನ ಮಟ್ಟದಲ್ಲಿ ರಾಸುಗಳು ಆಗಮಿಸದ ಹಿನ್ನೆಲೆಯಲ್ಲಿ ಜಾತ್ರೆಯ ರಂಗು ಕಡಿಮೆಯಾಗಿತ್ತು.




