ಶ್ರೀರಂಗಪಟ್ಟಣ ಪಟ್ಟಣ ತಾಲ್ಲೂಕು ಬೆಳಗೊಳ ಗ್ರಾಮದ ಬಾರ್ ಬಳಿ ನಿಂತಿದ್ದ ರವಿ ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಶ್ರೀರಂಗಪಟ್ಟಣ 3ನೇ ಸತ್ರ ನ್ಯಾಯಾಲಯವು ಜೀವಿತಾವಧಿ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳಗೊಳ ಗ್ರಾಮದ ಶರತ್ ಕುಬೇರ ಅಲಿಯಾಸ್ ಅಪ್ಪಿ ಜೀವಾವಧಿ ಶಿಕ್ಷೆಗೆ ಗುರಿಯಾದವನು.
ಏನಿದು ಘಟನೆ ?
ಜುಲೈ 27, 2022 ರಂದು ರಾತ್ರಿ 08-45 ಗಂಟೆಯ ಸಮಯದಲ್ಲಿ ಶ್ರೀರಂಗಪಟ್ಟಣ ಪಟ್ಟಣ ತಾಲ್ಲೂಕು ಬೆಳಗೊಳ ಗ್ರಾಮದ ಸವಿತ ವೈನ್ಸ್ಟೋರ್ ಮುಂಭಾಗ ನಿಂತಿದ್ದ ರವಿ ಬಿ.ವಿ. ಬಿನ್ ಲೇಟ್ ವೆಂಕಟೇಶ್ (30) ಎಂಬಾತನ ಮೇಲೆ ಶರತ್ ಕುಬೇರ ಅಲಿಯಾಸ್ ಅಪ್ಪಿ ಎಂಬುವವನು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಓಡಿ ಹೋಗಿದ್ದ. ರವಿಯನ್ನು ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.
ಈ ಬಗ್ಗೆ ಮೃತನ ತಮ್ಮ ಚಂದ್ರು ಎಂಬುವರು ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಕೆ.ಆರ್.ಸಾಗರ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಸಿಪಿಐ ಯೋಗೇಶ್ ಡಿ. ಅವರು ಹಾಗೂ ಟಿ.ಎಂ. ಪುನೀತ್ ಅವರು ತನಿಖೆಯನ್ನು ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣವು ಶ್ರೀರಂಗಪಟ್ಟಣದ 3ನೇ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಧೀಶರಾದ ಜೋಸ್ನಾರವರು ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಪ್ರಮಲ್ಲ ಮತ್ತು ನಾಜೀಮಾ ವಾದ ಮಂಡಿಸಿದ್ದರು.
ತನಿಖಾ ತಂಡದಲ್ಲಿ ಕೆ.ಆರ್.ಸಾಗರ ಠಾಣೆಯ ಪಿ.ಎಸ್.ಐ ಲಿಂಗರಾಜು ಹಾಗೂ ಎ.ಎಸ್.ಐ ಸತೀಶ್, ಸಿ.ಹೆಚ್.ಸಿ ಯವರಾದ ಯಧುರಾಜ್, ಶ್ರೀಧರ್, ಮಂಜುನಾಥ್, ಸಿಪಿಸಿಯವರಾದ ಪ್ರಭುಸ್ವಾಮಿ, ಅರುಣ ಅವರಿದ್ದರು. ಆರೋಪಿಯನ್ನು ಪತ್ತೆ ಮಾಡಿ ಶಿಕ್ಷೆಯಾಗಲು ಶ್ರಮಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತರಲು ಕೆ.ಆರ್.ಸಾಗರ ಸಿ.ಪಿ.ಐ ವಿವೇಕಾನಂದ, ಪಿ.ಎಸ್.ಐ ಗಳಾದ ಲಿಂಗರಾಜು, ರಮೇಶ್ ಕರಕೀಕಟ್ಟಿಯವರು ಸಿಬ್ಬಂದಿಯೊಂದಿಗೆ ಶ್ರಮ ವಹಿಸಿದ್ದರು.
ಕೆ.ಆರ್.ಸಾಗರ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂಧಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.




