ಬಿಜೆಪಿ ಜೊತೆ ಸೇರಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಯನ್ನು ತಡೆದಿದ್ದೇ ಚಲುವರಾಯಸ್ವಾಮಿ ಮತ್ತವರ ಕಂಪನಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದಲ್ಲಿ ₹10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ ಚಲುವರಾಯಸ್ವಾಮಿ ಮತ್ತವರ ಟೀಮ್ ಬಿಜೆಪಿ ಜೊತೆ ಸೇರಿ ಅಭಿವೃದ್ಧಿ ಆಗದಂತೆ ತಡೆದರು. ಚಲುವರಾಯಸ್ವಾಮಿ ಮತ್ತವರ ಕಂಪನಿ ಪ್ಲಾನ್ ಮಾಡಿ ಡಿ.ಕೆ.ಶಿವಕುಮಾರ್ ಅವರು ಹೇಳಿದರೂ ಕೇಳದೆ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ಸುಮಲತಾ ಅವರನ್ನು ಗೆಲ್ಲಿಸಿದರು. ಅವರಿಂದಲೇ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಕೆಲಸ ಮಾಡಿದ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಈಗ ಗೊತ್ತಾಗಿದೆ, ನಾವೆಲ್ಲ ತಪ್ಪು ಮಾಡಿದ್ದೇವೆ ಎಂದು. ಆಶ್ಚರ್ಯಕರ ಸಂಗತಿ ಎಂದರೆ, ಸುಮಲತಾ ಪರ ಕೆಲಸ ಮಾಡಿದ ಕಾಂಗ್ರೆಸ್ ಸದಸ್ಯರನ್ನೇ ಅವರ ಜೊತೆ ಕಾಣಿಸಿಕೊಂಡರೆ ಸಸ್ಪೆಂಡ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಗೆದ್ದಿದ್ದರೆ ಜಿಲ್ಲೆಯ ಅಭಿವೃದ್ಧಿ ಆಗುತ್ತಿತ್ತು. ಆದರೆ ಅವರನ್ನು ಸೋಲಿಸಿ ಜಿಲ್ಲೆಯ ಅಭಿವೃದ್ಧಿ ಆಗದಂತೆ ತಡೆದಿರುವುದೇ ಚಲುವರಾಯಸ್ವಾಮಿ ಮತ್ತು ಕಂಪನಿ ಎಂದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದರು.
ರಹಸ್ಯ ಸಭೆ
ಚಲುವರಾಯಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರು ಮೈಸೂರಿನ ತೋಟದ ಮನೆಯಲ್ಲಿ ರಹಸ್ಯವಾಗಿ ಭೇಟಿ ಮಾಡುವ ವಿಚಾರವೂ ಜನರಿಗೆ ಗೊತ್ತಾಗಿದೆ. ಚಲುವರಾಯಸ್ವಾಮಿ ಅವರಿಗೆ ರಾಜಕೀಯ ಅಧಿಕಾರ ಕೊಟ್ಟು ಸಾರಿಗೆ ಮಂತ್ರಿ ಮಾಡಿ ಪ್ರಭಾವಿ ರಾಜಕಾರಣಿಯಾಗಿ ರೂಪಿಸಿದ್ದ ಜೆಡಿಎಸ್ ಪಕ್ಷಕ್ಕೆ ಅವರು ನಿಷ್ಠೆಯಿಂದ ಇರಬೇಕಿತ್ತು. ಆದರೆ ಹಣಕ್ಕಾಗಿ ಅವರು ಮತ್ತು ರಮೇಶ್ ಬಾಬು ಪಕ್ಷಕ್ಕೆ ಮೋಸ ಮಾಡಿ ಕಾಂಗ್ರೆಸ್ ಸೇರಿದರು.ಅವರು ಅಧಿಕಾರ ನೀಡಿದ ಜೆಡಿಎಸ್ ಪಕ್ಷಕ್ಕೆ ನಿಷ್ಟರಾಗಲಿಲ್ಲ. ಹೋಗಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಿ ಎಂದ ಕಾಂಗ್ರೆಸ್ ಪಕ್ಷಕ್ಕೂ ನಿಷ್ಟರಾಗಲಿಲ್ಲ ಎಂದು ಹರಿಹಾಯ್ದರು.
ಈಗ ರಮೇಶ್ ಬಾಬು ಅವರೇ ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ. ಅದೊಂದು ದರಿದ್ರ ಪಕ್ಷ, ದಯಮಾಡಿ ಕ್ಷಮಿಸಿ ಎಂದು ಹೋದ ಕಡೆಯಲೆಲ್ಲ ಜೆಡಿಎಸ್ ಮುಖಂಡರ ಬಳಿ ಹೇಳುತ್ತಿದ್ದಾರೆ. ನಿಮಗೆ ಕಾಂಗ್ರೆಸ್ ಪಕ್ಷದ ಮೇಲು ಗೌರವ ಇಲ್ಲ ಎಂಬುದನ್ನು ಜನ ಗಮನಿಸುತ್ತಿದ್ದಾರೆ ಎಂದರು.
ಯಾರು ಉಳಿದಿಲ್ಲ
ರಾಜ್ಯ ರಾಜಕಾರಣಕ್ಕೆ ಸುಮಲತಾ ಬಂದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸುಮಲತಾ ಬಿಜೆಪಿ ಸೇರ್ಪಡೆಯಾದರೂ ಯಾವುದೇ ಸಮಸ್ಯೆ ಇಲ್ಲ. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸುಮಲತಾ ಬಂದರೆ ಬರಲಿ, ಸುಮಲತಾ ನಂಬಿ ರಾಜಕಾರಣ ಮಾಡಿದವರು ಯಾರು ಉಳಿದಿಲ್ಲ. ಹಾಗಾದರೆ ಇಂಡುವಾಳು ಸಚ್ಚಿದಾನಂದನಿಗೂ ಗ್ರಹಚಾರ ಬಂತು ಎಂದು ವ್ಯಂಗ್ಯವಾಡಿದರು.
ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಅಭ್ಯರ್ಥಿಯಾದರೆ ನನಗೂ ಸಂತೋಷ.ಅಂಬರೀಶ್ ಅವರಿಗೆ ಕ್ಷೇತ್ರದ ಜನರು ಯಾವ ರೀತಿ ಪ್ರೀತಿ ತೋತಿಸಿದ್ದಾರೆ ಎಂಬುದು ಗೊತ್ತಿದೆ. ಸುಮಲತಾ ಶ್ರೀರಂಗಪಟ್ಟಣಕ್ಕೆ ಬರಲಿ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಇಂಡವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಸದಸ್ಯ ರಮೇಶ್ ರಾಜು, ಮುಖಂಡರಾದ ಎಸ್. ಟಿ. ಸಿದ್ದೇಗೌಡ, ಹನುಮಂತು, ತಿಮ್ಮೇಗೌಡ, ಎಸ್.ಎನ್. ಯೋಗೇಶ್, ಎಸ್. ಎಲ್. ಶಿವಣ್ಣ, ಕರೀಗೌಡ, ಗುತ್ತಿಗೆದಾರರಾದ ರವಿಕುಮಾರ್, ಯತಿರಾಜು, ನವೀನ್ ಕುಮಾರ್, ರೈತ ಮುಖಂಡರಾದ ಸಿದ್ದೇಗೌಡ ಇಂಡುವಾಳು ಚಂದ್ರಶೇಖರ್, ಸಿಮೆಂಟ್ ಸಿದ್ದೇಗೌಡ ಮತ್ತಿತರರಿದ್ದರು.




