Tuesday, November 24, 2026

ಪ್ರಾಯೋಗಿಕ ಆವೃತ್ತಿ

ತೀವ್ರ ಹೃದಯಾಘಾತದಿಂದ ಖ್ಯಾತ ನಟ ನಾನಾ ಪಾಟೇಕರ್ ನಿಧನ

ಗೋವಾ: ಭಾರತೀಯ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್(75) ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಂದು ಮುಂಜಾನೆ ಪಣಜಿಯಲ್ಲಿ ನಿಧನರಾಗಿದ್ದಾರೆ.

ಗೋವಾದ ಡೋನಾಪೌಲಾದಲ್ಲಿರುವ ಅವರ ನಿವಾಸದಲ್ಲಿ ಬೆಳಗಿನ ಜಾವ 5.45 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

ಅವರ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು ಎಂದು ಘೋಷಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಲ್ಕರ್ , ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ CPR ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ . ಈ ಸಂಬಂಧ ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

ನಾನಾ ಪಾಟೇಕರ್ ಅವರು ಹಲವು ದಶಕಗಳ ಕಾಲ ಚಿತ್ರರಂಗ, ರಂಗಭೂಮಿ ಮತ್ತು ದೂರದರ್ಶನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಪ್ರಭಾವಶಾಲಿ ಪರದೆ ಮೇಲಿನ ಉಪಸ್ಥಿತಿ, ತೀಕ್ಷ್ಣ ಸಂಭಾಷಣೆ ಹೇಳುವ ಶೈಲಿ ಹಾಗೂ ಸಂಕೀರ್ಣ ಪಾತ್ರಗಳನ್ನು ಅತ್ಯಂತ ಸಂಯಮದಿಂದ ನಿರ್ವಹಿಸುವ ಸಾಮರ್ಥ್ಯದಿಂದ ಅವರು ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗದ ಅತ್ಯಂತ ಗೌರವಾನ್ವಿತ ಹಾಗೂ ವಿಭಿನ್ನ ಶೈಲಿಯ ನಟರಲ್ಲಿ ಒಬ್ಬರಾಗಿದ್ದರು. 1951ರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವನಾಥ ಪಾಟೇಕರ್ ಎಂಬ ಹೆಸರಿನಲ್ಲಿ ಜನಿಸಿದ ನಾನಾ ಪಾಟೇಕರ್ ಅವರು 1970ರ ದಶಕದ ಕೊನೆಯಲ್ಲಿ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದರು.

‘ಗಮನ್’ ಅವರ ಚೊಚ್ಚಲ ಚಿತ್ರವಾಗಿತ್ತು. ನಂತರ ಒಂದರ ಹಿಂದೆ ಒಂದರಂತೆ ಗಮನಾರ್ಹ ಅಭಿನಯ ನೀಡುವ ಮೂಲಕ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದರು.

‘ಪರಿಂದಾ’, ‘ಪ್ರಹಾರ್’, ‘ಅಂಗಾರ್’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಯಶವಂತ್’, ‘ಅಬ್ ತಕ್ ಛಪ್ಪನ್’, ‘ಅಪಹರಣ’, ‘ವೆಲ್‌ಕಮ್’ ಮತ್ತು ‘ನಟಸಮ್ರಾಟ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ನಟನೆಯು ಮೆಚ್ಚುಗೆಗೆ ಪಾತ್ರವಾಯಿತು.

ಅವರ ಅಭಿನಯವು ಸಾಂಪ್ರದಾಯಿಕ ನಾಯಕ ಅಥವಾ ಖಳನಾಯಕನ ಪಾತ್ರಗಳ ಮಿತಿಯನ್ನು ಮೀರಿ ಸಾಗುತ್ತಿತ್ತು ಮತ್ತು ಪ್ರೇಕ್ಷಕರನ್ನು ಕಥಾ ಪ್ರಪಂಚಕ್ಕೆ ಕೊಂಡೊಯ್ಯುವ ಅನುಭವವನ್ನು ನೀಡುತ್ತಿತ್ತು.

ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. 1989ರಲ್ಲಿ ‘ಪರಿಂದಾ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ಅವರು , 1994ರಲ್ಲಿ ‘ಕ್ರಾಂತಿವೀರ್’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ನಂತರ 1996ರಲ್ಲಿ ‘ಅಗ್ನಿಸಾಕ್ಷಿ’ ಚಿತ್ರದ ಅಭಿನಯಕ್ಕಾಗಿ ಮತ್ತೊಮ್ಮೆ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು.

ಚಿತ್ರರಂಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ