Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ| ವಿಶೇಷ ಜಂಟಿ ಅಧಿವೇಶನ ಕರೆಯಲು ಆಗ್ರಹ

ಮಂಡ್ಯ ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಧರಣಿಯ ಹೋರಾಟ 45ನೇ ದಿನಕ್ಕೆ ಕಾಲಿಟ್ಟಿದ್ದು, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಸರ್ಕಾರವು ಕೂಡಲೇ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಕರೆಯಬೇಕು, ಅಧಿವೇಶನದಲ್ಲಿ ಕಾವೇರಿ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ಕಾವೇರಿ ವಿಚಾರವನ್ನು ಆಳುವ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ, ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುನ್ನಡೆಯಲು ಮುಂದಾಗಿಲ್ಲ, ಹೋರಾಟಗಾರರ ಜೊತೆಗೆ ಮಾತುಕತೆ ನಡೆಸುತ್ತಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು, ಆದರೆ ಪ್ರಧಾನಿಯವರನ್ನ ಭೇಟಿಯಾಗಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ, ಕೇಂದ್ರ ಸರ್ಕಾರ ಸಹ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ಕಿಡಿಕಾರಿದರು.

ಕಾವೇರಿ ಚಳವಳಿಯನ್ನು ತೀವ್ರ ಗೊಳಿಸಲು ನಿರ್ಧಾರ ಮಾಡಿದ್ದೇವೆ. ಅ 2 ರಿಂದ ಒಂದೊಂದು ಗ್ರಾಮ ಪಂಚಾಯತಿ ಪ್ರಾಪ್ತಿಯ ರೈತರು ಹಾಗೂ ನೂರಾರು ಜನತೆ ಭಾಗವಹಿಸಲಿದ್ದು ಇವರ ಜೊತೆಗೆ ಮಂಡ್ಯ ನಗರದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದರು.

ರೈತಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡಪರ ಸಂಘಟನೆಯ ನಾರಾಯಣ್, ಕೋಮಲ ನೇತೃತ್ವ ವಹಿಸಿದ್ದರು.

ಸಂತೋಷ್ ಹೆಗಡೆ ಬಳಿಗೆ ನಿಯೋಗ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ರೈತರ ಮತ್ತು ಕರ್ನಾಟಕದ ಹಿತಕಾಯಲು ಕಾನೂನು ಅಭಿಪ್ರಾಯ ಸಂಗ್ರಹ ಮಾಡಲು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮುಂದಾಗಿದ್ದು, ಈ ಬಗ್ಗೆ ಅಭಿಪ್ರಾಯ ಪಡೆಯಲು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಭೇಟಿಯಾಗಲು ಐವರ ನಿಯೋಗ ಬೆಂಗಳೂರಿಗೆ ತೆರಳಿದೆ.

ಈ ನಿಯೋಗದಲ್ಲಿ ಪ್ರೊ.ಕೆ.ಸಿ.ಬಸವರಾಜ್, ಕೆ ಬೋರಯ್ಯ, ಮಾಜಿ ಶಾಸಕ ಕೆ.ಟಿ ಶ್ರೀಕಂಠೇಗೌಡ, ಕನ್ನಡ ಸೇನೆ ಮಂಜುನಾಥ್, ರೈತ ಸಂಘದ ಬೋರೇಗೌಡ ಮತ್ತಿತರರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!