Friday, September 20, 2024

ಪ್ರಾಯೋಗಿಕ ಆವೃತ್ತಿ

ತಪ್ಪಿತಸ್ಥ ದರ್ಶನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿವೆಯೇ ಮೀಡಿಯಾಗಳು?

ಮಾಚಯ್ಯ ಎಂ ಹಿಪ್ಪರಗಿ

ನಟ ದರ್ಶನ್ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಗೆಳತಿ ಪವಿತ್ರಾ ಗೌಡಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ರೇಣುಕಾಸ್ವಾಮಿಯನ್ನು ವ್ಯವಸ್ಥಿತವಾಗಿ ಅಪಹರಿಸಿ, ಬೆಂಗಳೂರಿಗೆ ಕರೆತಂದು, ಹಲ್ಲೆ ಮಾಡಿದ ಘಟನೆ ಸಾವಿನಲ್ಲಿ ಅಂತ್ಯವಾಗಿದ್ದು, ಕೊಲೆಯ ಆರೋಪ ಈಗ ದರ್ಶನ್‌ ಮತ್ತು ಸಹವರ್ತಿಗಳಿಗೆ ಸುತ್ತಿಕೊಂಡಿದೆ.

ಪೊಲೀಸರು ತನಿಖೆ ಶುರು ಮಾಡಿದ್ದಾರೆ. ನಟ ದರ್ಶನ್ ಸೇರಿ, ಹದಿಮೂರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂಥಾ ಕ್ರೈಮ್ ಪ್ರಕರಣಗಳಲ್ಲಿ ನೇರ ಇನ್ವಾಲ್ವ್‌ಮೆಂಟ್ ಅಥವಾ ಗಂಭೀರ ಪಾತ್ರ ಇಲ್ಲದೇ ಹೋದರೆ, ದರ್ಶನ್ ಥರಹದ ಪ್ರಭಾವಿ ನಟನನ್ನು ಪೊಲೀಸರು ಸುಖಾಸುಮ್ಮನೆ ಅರೆಸ್ಟ್ ಮಾಡಲ್ಲ. ಹಾಗಾಗಿ ದರ್ಶನ್ ಅವರ ಬಂಧನವಾಗಿದೆ ಎಂದರೆ, ಈ ಕೊಲೆಯಲ್ಲಿ ಅವರ ಇನ್ವಾಲ್ವ್‌ಮೆಂಟ್ ಇರಬಹುದು ಅಂತ ನಾವು ಅಂದಾಜಿಸಬಹುದು. ಆದರೆ ಆ ಇನ್ವಾಲ್ವ್‌ಮೆಂಟ್, ಕೊಲೆಗೆ ಎಷ್ಟರ ಮಟ್ಟಿಗೆ ಮೊಟಿವೇಟ್ ಮಾಡಿತ್ತು ಮತ್ತು ದರ್ಶನ್ ಅವರು ಎಷ್ಟು ಇಂಟೆಂಟ್‌ಫುಲ್ ಆಗಿ ಕೊಲೆಯನ್ನು ನಿರೀಕ್ಷೆ ಮಾಡಿದ್ದರು ಅಥವಾ ಅವರ ಎಣಿಕೆಯನ್ನು ಮೀರಿ ಅಚಾತುರ್ಯದಿಂದ ಈ ಕೊಲೆ ನಡೆದುಹೋಗಿದೆಯಾ? ಎಂಬ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ನಂತರ ನಿಖರವಾದ ಉತ್ತರಗಳು ಬರಲಿವೆ. ಅದೇನೆ ಇರಲಿ, ಒಬ್ಬ ವ್ಯಕ್ತಿಯನ್ನು ಅಪಹರಿಸುವ, ಹಿಂಸಿಸುವ, ಕೊಲೆ ಮಾಡುವಂತಹ ಕಾನೂನುಬಾಹಿರ ಕ್ರಮಕ್ಕೆ ದರ್ಶನ್ ಮತ್ತವರ ಸ್ನೇಹಿತರು ಕೈಹಾಕಿದ್ದು ತಪ್ಪು. ಈ ಕ್ಷಣಕ್ಕೆ ಇಷ್ಟು ಮಾತ್ರ ನಾವು ಹೇಳಬಹುದು. ಇನ್ನುಳಿದದ್ದು ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಬಿಟ್ಟದ್ದು.

ಆದರೆ ದರ್ಶನ್ ಪ್ರಕರಣವನ್ನು ಮೀಡಿಯಾಗಳು ಪ್ರೊಜೆಕ್ಟ್ ಮಾಡುತ್ತಿರುವ ತೀಕ್ಷ್ಣತೆಯನ್ನು ನೋಡಿದರೆ, ಸುದ್ದಿಯನ್ನು ಬಿತ್ತರಿಸುವುದಕ್ಕಿಂತ ಅಥವಾ ಸುದ್ದಿಯನ್ನು ಸೆನ್ಸೇಷನಲೈಸ್ ಮಾಡೋದಕ್ಕಿಂತಲೂ ಮಿಗಿಲಾದ ಅಜೆಂಡಾ ಇರುವಂತೆ ಕಾಣುತ್ತೆ. ನಟ ದರ್ಶನ್ ಇಂತದ್ದೊಂದು ಪ್ರಕರಣದಲ್ಲಿ ಭಾಗಿಯಾಗಿ ನಮ್ಮ ಕೈಗೆ ಸಿಕ್ಕಿಹಾಕಿಕೊಳ್ಳಬೇಕು ಎಂದು ತುಂಬಾ ದಿನಗಳಿಂದ ಕಾದಿದ್ದ ತವಕ ಮೀಡಿಯಾಗಳ ವರದಿಗಾರಿಕೆಯಲ್ಲಿ ಇಣುಕುತ್ತಿದೆ. ಮೀಡಿಯಾಗಳು, ನಿರ್ದಿಷ್ಟವಾಗಿ ನ್ಯೂಸ್ ಚಾನೆಲ್ ಗಳು ಮತ್ತು ದರ್ಶನ್ ನಡುವಿನ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ಆ ಇತಿಹಾಸವೇ ಇವತ್ತು ಮೀಡಿಯಾಗಳು ದರ್ಶನ್ ಪ್ರಕರಣವನ್ನು biased ಆಗಿ ನೋಡಲು, ದರ್ಶನ್ ಮೇಲಿನ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಪ್ರೇರಣೆ ನೀಡ್ತಾ ಇದೆಯಾ? ಅಥವಾ ಒಂದು ರಾಜಕೀಯ ಪಕ್ಷದ ಪರವಾಗಿ inclination ಹೊಂದಿರುವ ಮೀಡಿಯಾಗಳಿಗೆ, ದರ್ಶನ್ ಗುರುತಿಸಿಕೊಳ್ಳುತ್ತಿರುವ ಪೊಲಿಟಿಕಲ್ ಐಡೆಂಟಿಟಿ ಈ ರೀತಿಯ biased ವರದಿಗಾರಿಕೆಗೆ ಕಾರಣವಾಗ್ತಿದೆಯಾ? ಅಥವಾ ಇದೆಲ್ಲವನ್ನು ಮೀರಿ, ಜಾತಿ ಎನ್ನುವ social dimension ಇಲ್ಲಿ ಕೆಲ್ಸ ಮಾಡ್ತಾ ಇದೆಯಾ?

ಈ ಕ್ಷಣಕ್ಕೆ ಇದನ್ನೆಲ್ಲ ಚರ್ಚೆ ಮಾಡೋದು ಎಷ್ಟರಮಟ್ಟಿಗೆ ಸಮಂಜಸ ಅಂತ ಕೆಲವರಿಗೆ ಅನ್ನಿಸಬಹುದು. ಆದ್ರೆ ಟ್ರೆಂಡ್ ಜೊತೆಗೆ ಹರಿದು ಹೋಗೋದು ತುಂಬಾ ಸುಲಭ. ಅದಕ್ಕೆ ನಮ್ಮಿಂದ extra effort ಬೇಕಾಗುವುದಿಲ್ಲ. ಪ್ರತಿ ಘಟನೆಗೆ, ನಾವು ಕಾಣುವ ಪ್ರಧಾನ ಆಯಾಮದ ಜೊತೆಗೆ ಇನ್ನೊಂದಷ್ಟು ಪರ್ಯಾಯ ಆಯಾಮಗಳೂ ಇರುತ್ತವೆ. ಅವು ಸರಿಯೋ ತಪ್ಪೋ ಎನ್ನುವುದಕ್ಕಿಂತ, ನಮ್ಮಲ್ಲಿನ ವಿಚಾರ ಸ್ಪಷ್ಟತೆಗಾಗಿ ಆ ಆಯಾಮಗಳಿಂದಲೂ ಘಟನೆಯನ್ನು ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ. ದರ್ಶನ್ ಒಳಗೊಂಡ ಈ ಪ್ರಕರಣದಲ್ಲಿ ಮೀಡಿಯಾಗಳ ಅತ್ಯುತ್ಸಾಹಕ್ಕೆ ಇಂತದ್ದೊಂದು ಆಯಾಮ ಇರಬಹುದಾದ ಸಾಧ್ಯತೆ ಇದೆ.

ಆಪಾದಿತ ಸ್ಥಾನದಲ್ಲಿರುವ ನಟನನ್ನು ಸರಿತಪ್ಪಿನ ಓರೆಗೆ ಹಚ್ಚುವುದಕ್ಕಿಂತ ಹೆಚ್ಚಾಗಿ, ಮೀಡಿಯಾಗಳನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಲು ಘಟನೆಯನ್ನು ನಾವು ಈ ಆಯಾಮದಿಂದಲೂ ನೋಡಬೇಕೆನಿಸುತ್ತಿದೆ. ಯಾಕೆ, ನಾವು ಈ ಪ್ರಕರಣದಲ್ಲಿ ಮೀಡಿಯಾ ಟ್ರಯಲ್ ಅನ್ನು ಪ್ಯಾರಲೆಲ್ ಆಂಗಲ್ ನಿಂದ ನೋಡಬೇಕಾಗಿದೆ ಅಂದ್ರೆ, ನಮ್ಮ ಮಾಧ್ಯಮಗಳು ಇವತ್ತು ತಮ್ಮ ವೃತ್ತಿಪರತೆ ಉಳಿಸಿಕೊಂಡಿಲ್ಲ. ನಿಷ್ಪಕ್ಷಪಾತವಾಗಿ ವರದಿ ಮಾಡುವ ವೃತ್ತಿ ಧರ್ಮ ಕಾಪಾಡಿಕೊಂಡಿಲ್ಲ. ಪತ್ರಕರ್ತರಾದವರಿಗೆ ಯಾವತ್ತಿಗೂ ಪತ್ರಿಕಾಧರ್ಮವೇ ಸಿದ್ದಾಂತವಾಗಿರಬೇಕು. ಜನಪರ ಮೌಲ್ಯಗಳೇ ಆಶಯಗಳಾಗಿರಬೇಕು. ಆದ್ರೆ ಇವತ್ತು ನಮ್ಮ ಬಹುಪಾಲು ಮಾಧ್ಯಮ ಸಂಸ್ಥೆಗಳು ಒಂದು ನಿರ್ದಿಷ್ಟ ರಾಜಕೀಯ ಸಿದ್ದಾಂತಕ್ಕೆ ಮಾರುಹೋದಂತೆ ವರ್ತಿಸುತ್ತಿವೆ. ಯಾವುದೇ ವಿಚಾರದಲ್ಲೂ, ಲಾಭ-ನಷ್ಟವನ್ನು ತೂಗುವ ಸೆಲೆಕ್ಟಿವ್ ಜರ್ನಲಿಸಂ ಅನುಸರಿಸ್ತಾ ಇವೆ. ಆ ಕಾರಣಕ್ಕೆ ಮೀಡಿಯಾಗಳ ಪ್ರೊಪೊಗ್ಯಾಂಡವನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಲು ನಾವು ಈ ಪ್ರಕರಣವನ್ನು ಒಂದು ಲಿಟ್ಮಸ್ ಪೇಪರ್ ಆಗಿ ಬಳಸಬಹುದು.

ಈಗ ಮುಖ್ಯ ಸಂಗತಿಗೆ ಮರಳೋಣ. ಮೇಲ್ನೋಟಕ್ಕೆ ದರ್ಶನ್ ತಪ್ಪು ಮಾಡಿರೋದು ಕಂಡುಬರ್‍ತಾ ಇರೋದ್ರಿಂದ ಆ ನಟನನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಲಕ್ಷಾಂತರ ಅಭಿಮಾನಿಗಳು, ಯಾವ ನಿರೀಕ್ಷೆಯೂ ಇಲ್ಲದೆ ಮುಗ್ಧ ಮನಸ್ಸಿನಿಂದ ಆರಾಧಿಸಿ, ಅಭಿಮಾನಿಸುವ ಸ್ಟಾರ್ ಗಿರಿಯ ನಟರು ತಮಗಿರುವ ಸಾಮಾಜಿಕ ಹೊಣೆಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರ ವೃತ್ತಿಬದುಕಿಗಷ್ಟೇ ಅಲ್ಲ, ಒಟ್ಟಾರೆ ಅವರ ವ್ಯಕ್ತಿತ್ವಕ್ಕೆ ಒಂದು ತೂಕವನ್ನು ತಂದುಕೊಡುವುದೇ ಅವರು ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು.

ನಟ ದರ್ಶನ್ ಅವರ ಆರಂಭದ ಬದುಕು ತೀರಾ ಕಷ್ಟದಿಂದ ಕೂಡಿದ್ದರೂ, ಅವರೊಳಗಿದ್ದ ಪ್ರತಿಭೆಯ ಕಾರಣಕ್ಕೆ ದೊಡ್ಡ ಸ್ಟಾರ್ ನಟನಾಗುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಾ ಹೋದಂತೆಯೇ, ವೈಯಕ್ತಿಕ ಜೀವನದಲ್ಲಿ ಅವರು ವಿವಾದಗಳಿಗೆ ಗುರಿಯಾಗುತ್ತಾ ಬಂದರು. ತೆರೆ ಮೇಲಿನ ದರ್ಶನ್ ಗೂ, ನಿಜ ಬದುಕಿನ ದರ್ಶನ್ ಗೂ ವ್ಯತ್ಯಾಸಗಳು ಕಾಣಲಾರಂಭಿಸಿದವು. ದೊಡ್ಡ ಅಭಿಮಾನಿ ಸಮೂಹವನ್ನು ಹೊಂದಿದ ನಟ, ತಾನು ಅಭಿನಯಿಸುವ ಪಾತ್ರಗಳ ಮೂಲಕ ಮಾತ್ರವಲ್ಲದೆ, ತನ್ನ ಬದುಕಿನ ಮೂಲಕವೂ ಮಾದರಿಯಾಗಿರಬೇಕು ಎಂದು ಈ ಸಮಾಜ ಅಪೇಕ್ಷಿಸುತ್ತದೆ. ಅಂತಹ ಅಪೇಕ್ಷೆಗಳನ್ನು ನಟ ದರ್ಶನ್ ಗಂಭೀರವಾಗಿ ಸ್ವೀಕರಿಸಿದಂತೆ ಕಾಣಲಿಲ್ಲ.

ಇತ್ತೀಚಿನ ಅವರ ಯಶಸ್ವಿ ಕಾಟೇರಾ ಸಿನಿಮಾವನ್ನೇ ತೆಗೆದುಕೊಳ್ಳೋಣ. ಹಿಂಸೆ, ವೈಷಮ್ಯಗಳನ್ನು ಕೊನೆಗಾಣಿಸಬೇಕೆಂದು ನೀಡುವ ಅವರ ಆ ಪಾತ್ರದ ಸಂದೇಶಕ್ಕೂ, ಈಗ ಅವರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಹತ್ಯೆಯಂತಹ ಕೃತ್ಯಕ್ಕೂ ತದ್ವಿರುದ್ಧ ಸಂಬಂಧ. ಪ್ರತಿಭೆಯ ಕಾರಣಕ್ಕೆ ನಟನಾಗಿ ಯಶಸ್ವಿಯಾಗಿರುವ ದರ್ಶನ್, ಸಾರ್ವಜನಿಕ ಜೀವನದ ವಿಚಾರದಲ್ಲಿ ಎಡವಿ, ಅನುಕರಣೀಯ ವ್ಯಕ್ತಿಯಾಗಬಹುದಾದ ಅವಕಾಶ ಕಳೆದುಕೊಂಡಿದ್ದಾರೆ. ಬಡತನದ ನೋವುಗಳಿಂದ ರೂಪುಗೊಂಡ ದರ್ಶನ್ ತರಹದ ನಟ ಹೀಗೆ ಎಡವಬಾರದಿತ್ತು. ಅವರನ್ನು ಆರಾಧಿಸುತ್ತಿರುವ ಅಭಿಮಾನಿಗಳಿಗೂ ಹೇಳಬಹುದಾದ ಒಂದು ಮಾತೆಂದರೆ, ತೆರೆ ಮೇಲಿನ ನಟನಾಗಿ ನೀವು ದರ್ಶನ್ ನಟನೆಯನ್ನು ಎಷ್ಟು ಬೇಕಾದರೂ ಅಭಿಮಾನಿಸಿ, ಆದರೆ ತೆರೆ ಹಿಂದಿನ ಅವರ ವ್ಯಕ್ತಿತ್ವ ನಿಮಗೆ ಆದರ್ಶವಾಗದಿರಲಿ…

ಆದ್ರೆ ಅದೇ ನೆಪವನ್ನು ಇಟ್ಟುಕೊಂಡು ಮಾಧ್ಯಮ ತನ್ನ ವೃತ್ತಿಧರ್ಮವನ್ನು ಮರೆತಂತೆ, ವೈಯಕ್ತಿಕ ಜಿದ್ದಿಗೆ ಬಿದ್ದಂತೆ ವರ್ತಿಸ್ತಾ ಇರೋದನ್ನು ನಾವು ಪ್ರಶ್ನೆ ಮಾಡದೆ ಹೋದಲ್ಲಿ ನಮ್ಮ ಹೊಣೆಗಾರಿಕೆ ಪರಿಪೂರ್ಣವಾದಂತಾಗುವುದಿಲ್ಲ.

ಹೌದು, ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ತರಹದ ನಟ ಇಂತಹ ಕ್ರೈಮ್ ನಲ್ಲಿ ಭಾಗಿಯಾಗಿ ಅರೆಸ್ಟ್ ಆದಾಗ, ಮಾಧ್ಯಮಗಳು ಅದನ್ನು ಸೆನ್ಸೇಷನಲ್ ಸುದ್ದಿಯಾಗಿಯೇ ನೋಡುತ್ತವೆ ಮತ್ತು ಹಾಗೆಯೇ ಬಿತ್ತರಿಸುತ್ತವೆ. ಇವತ್ತಿನ ಟಿ ಆರ್ ಪಿ ಕಾಂಪಿಟೇಷನ್ ಯುಗದಲ್ಲಿ ಇದನ್ನು ತಪ್ಪು ಅಂತ ಹೇಳ್ಲಿಕ್ಕೆ ಆಗಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಇಂಥಾ ಸುದ್ದಿಗಾಗಿ ವೀಕ್ಷಕರು ಎದುರು ನೋಡ್ತಾ ಇರ್‍ತಾರೆ ಅಂದಾಗ, ಮೀಡಿಯಾಗಳು ಕೂಡಾ ಈ ಸುದ್ದಿಯ ಸುತ್ತಲೇ ತಮ್ಮ ಮ್ಯಾಕ್ಸಿಮಮ್ ಸಮಯವನ್ನು ಮೀಸಲಿಡಬೇಕಾಗುತ್ತೆ. ಮ್ಯಾಕ್ಸಿಮಮ್ ಕವರೇಜ್ ನೀಡಬೇಕಾಗುತ್ತೆ. ಪ್ರೈಮ್ ಟೈಮ್, ಪ್ಯಾನೆಲ್ ಡಿಬೇಟ್, ನ್ಯೂಸ್ ಬುಲೆಟಿನ್, ಬ್ರೇಕಿಂಗ್ ನ್ಯೂಸ್ ಎಲ್ಲವೂ ಇದರ ಸುತ್ತಲೇ ಇರೋದು ಸಹಜ. ಇದನ್ನು ಬೇಕಾದ್ರೆ ನಾವು need of the hour ಅಂತ ಅನ್ನಬಹುದು. ಆದ್ರೆ ಹೀಗೆ ವರದಿ ಮಾಡುವಾಗ ಪತ್ರಕರ್ತರ ಅಥವಾ ಮಾಧ್ಯಮ ಸಂಸ್ಥೆಯ ವೈಯಕ್ತಿಕ ಜಿದ್ದು ಮುನ್ನೆಲೆಗೆ ಇಣುಕುಬಾರದು. ಆದರೆ ದರ್ಶನ್ ವಿಚಾರದಲ್ಲಿ ಮೀಡಿಯಾಗಳ ವರದಿಗಾರಿಕೆಯಲ್ಲಿ ಕಾಣುತ್ತಿರುವುದು ಮಾತ್ರ ಅದೇ ಜಿದ್ದಿನ ರಣೋತ್ಸಾಹ.

ಇದಕ್ಕೆ ಕಾರಣಗಳನ್ನು ಹೀಗೆ ನೋಡಬಹುದು ಅನ್ನಿಸುತ್ತೆ..

ಮೊದಲನೆಯದ್ದು ಮೀಡಿಯಾ ಜೊತೆ ದರ್ಶನ್ ನಡೆಸಿಕೊಂಡು ಬಂದಿರೋ ಸಂಘರ್ಷ. ಸಾಮಾನ್ಯವಾಗಿ ಸಿನಿಮಾ ನಟರೆಂದರೆ ಅವರಿಗೆ ಪಬ್ಲಿಸಿಟಿ ತುಂಬಾ ಮುಖ್ಯ. ಅವರಿಗಲ್ಲದಿದ್ದರೂ ಅವರ ಸಿನಿಮಾಗಳಿಗೆ ಪಬ್ಲಿಸಿಟಿ ಬೇಕೆ ಬೇಕು. ಆ ಕಾರಣಕ್ಕೆ ಮೀಡಿಯಾಗಳ ಜೊತೆ ಸಿನಿನಟರು ತುಂಬಾ ಸಾಫ್ಟ್‌ ಆಗಿರಲು ಯತ್ನಿಸ್ತಾರೆ. ಆದ್ರೆ ದರ್ಶನ್ ಇದಕ್ಕೆ ತದ್ವಿರುದ್ಧ. ಅವರನ್ನು ಆವರಿಸಿದ್ದ ಯಶಸ್ಸಿನ ಅಮಲಿನ ಕಾರಣಕ್ಕೋ, ಅಥವಾ ಅವರನ್ನು ಸುತ್ತುವರೆದಿದ್ದ ಗುಂಪಿನ ಹುಂಬತನದಿಂದಲೋ ಮೀಡಿಯಾಗಳ ಜೊತೆ ಸಂಘರ್ಷ ನಡೆಸುತ್ತಲೇ ಬಂದರು. 2021ರಲ್ಲಿ ವೈರಲ್ ಆಗಿದ್ದ ದರ್ಶನ್ ಧ್ವನಿಯಿದ್ದ ಆಡಿಯೋ ಕೂಡಾ ಇಂತದ್ದರಲ್ಲಿ ಒಂದು. ಅದರಲ್ಲಿ ದರ್ಶನ್, ಯಾರದೋ ವ್ಯಕ್ತಿಯ ಕುರಿತು ಮಾತನಾಡ್ತಾ, ಮೀಡಿಯಾಗಳ ಬಗ್ಗೆ ತುಂಬಾ ಹಗುರವಾಗಿ ಮಾತಾಡಿದ್ದರು. ಅದು ತೀರಾ ಪರ್ಸನಲ್ ಮಾತುಕತೆಯಾಗಿದ್ದರೂ, ಯಾರೋ ಕಿಡಿಗೇಡಿಗಳು ಅದನ್ನು ವೈರಲ್ ಮಾಡಿದ್ದರು. ಪರಿಣಾಮವಾಗಿ ಮೀಡಿಯಾದವರು ದರ್ಶನ್ ಮೇಲೆ ಕಿಡಿಕಾರಿದರು, ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ದರ್ಶನ್ ಕ್ಷಮೆಗೆ ನಿರಾಕರಿಸಿದ ಕಾರಣ, ಇನ್ನು ಮುಂದೆ ದರ್ಶನ್ ಸುದ್ದಿಗಳನ್ನು ಬಿತ್ತರಿಸೋಲ್ಲ, ಅವರ ಸಿನಿಮಾಗಳಿಗೆ ಪ್ರಚಾರ ನೀಡೊಲ್ಲ ಎಂಬ ಅಘೋಷಿತ ಬಹಿಷ್ಕಾರದ ಒಪ್ಪಂದಕ್ಕೆ ಮೀಡಿಯಾಗಳು ಬಂದವು. ಎರಡು ವರ್ಷಗಳ ಕಾಲ ಈ ಅಘೋಷಿತ ಬಹಿಷ್ಕಾರ ಚಾಲ್ತಿಯಲ್ಲಿತ್ತು.

ಇದಕ್ಕೆ ಸೆಡ್ಡು ಹೊಡೆಯುವಂತೆ ದರ್ಶನ್, ತಮ್ಮದೇ ಅಭಿಮಾನಿಗಳ ಸಮೂಹದ ಮೂಲಕ ಸೋಷಿಯಲ್ ಮೀಡಿಯಾ ನೆಟ್ ವರ್ಕ್‌ ಕಟ್ಟಿ, ಆ ಮೂಲಕ ತಮ್ಮ ಸಿನಿಮಾಗಳಿಗೆ ಪ್ರಚಾರ ಕೊಟ್ಟುಕೊಳ್ಳುವ ಸಾಹಸಕ್ಕೂ ಮುಂದಾದರು. ಇದು ಮೀಡಿಯಾಗಳ ಸಿಟ್ಟನ್ನು ಮತ್ತಷ್ಟು ನೆತ್ತಿಗೇರಿಸಿತು. ಅವರ ಕ್ರಾಂತಿ ಸಿನಿಮಾವನ್ನು ಪ್ರಮೋಟ್ ಮಾಡಿದ್ದೇ ಅವರು ಕಟ್ಟಿದ್ದ ಸೋಷಿಯಲ್‌ ಮೀಡಿಯಾ ಫ್ಲ್ಯಾಟ್ ಫಾರ್ಮ್‌ಗಳು. ಅದೇನಾಯ್ತೋ ಏನೋ, ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ನಿರ್ಮಾಪಕ ಮತ್ತು ದರ್ಶನ್ ಆಪ್ತ ರಾಕ್‌ಲೈನ್‌ ವೆಂಕಟೇಶ್ ಅವರು ಎಡಿಟರ್‍ಸ್ ಗಿಲ್ಡ್‌ ಜೊತೆ ಮಾತುಕತೆ ನಡೆಸಿ, ಆ ಬಹಿಷ್ಕಾರಕ್ಕೆ ಮಂಗಳ ಹಾಡಿದರು. ದರ್ಶನ್ ಕೂಡಾ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಆದರೂ ಸತತ ಎರಡು ವರ್ಷಗಳ ಕಾಲ ತಮ್ಮ ಪೆಟ್ಟಿಗೆ ಬಗ್ಗದೆ, ಸೋಷಿಯಲ್ ಮೀಡಿಯಾ ಮೂಲಕ ತಮಗೇ ಪರ್ಯಾಯ ಫ್ಲ್ಯಾಟ್ ಫಾರ್ಮ್ ಕಟ್ಟಲು ಮುಂದಾಗಿದ್ದ ದರ್ಶನ್ ಬಗ್ಗೆ ಮೀಡಿಯಾಗಳಿಗೆ, ಅದರಲ್ಲು ಕೆಲವು ಪತ್ರಕರ್ತರು, ಸಂಪಾದಕರಿಗೆ ಸಿಟ್ಟು ಇದ್ದೇ ಇತ್ತು. ದರ್ಶನ್ ಗೆ ಸಂಬಂಧಿಸಿದ ಯಾವುದೇ ವಿವಾದವಿದ್ದರೂ, ಅದನ್ನು ವಿಸ್ತೃತವಾಗಿ ಪ್ರೊಪೊಗೇಟ್ ಮಾಡಿ ತಮ್ಮ ಈ ಸಿಟ್ಟು ತೀರಿಸಿಕೊಳ್ಳುತ್ತಿದ್ದರು. ಈಗ ಈ ಕೊಲೆ ಪ್ರಕರಣದಲ್ಲಿ ತಮ್ಮ ಆ ಸಿಟ್ಟನ್ನು ಬಡ್ಡಿ ಸಮೇತ ತೀರಿಸಿಕೊಳ್ಳುತ್ತಿದ್ದಾರಾ? ಎಂಬ ಅನುಮಾನ ಕಾಡಲು ಇದು ಮುಖ್ಯ ಕಾರಣ.

ಇದರ ಹೊರತಾಗಿ, ಮೀಡಿಯಾಗಳು ದರ್ಶನ್ ಅವರ ಮೇಲೆ ಜಿದ್ದು ತೀರಿಸಿಕೊಳ್ಳಲು ಈ ಪ್ರಕರಣ ಬಳಸಿಕೊಳ್ಳುತ್ತಿವೆಯಾ ಅನ್ನಿಸಲು ಇನ್ನೂ ಎರಡು ಕಾರಣಗಳಿವೆ. ಅವೆರೆಡೂ ತುಸು ಪೊಲಿಟಿಕಲಿ ಕನೆಕ್ಟ್ ಆದಂತವು.

ಇವತ್ತಿನ ನಮ್ಮ ಕನ್ನಡ ಮೀಡಿಯಾಗಳ, ಮುಖ್ಯವಾಗಿ ನ್ಯೂಸ್ ಚಾನೆಲ್‌ಗಳ ಪೊಲಿಟಿಕಲ್ ಓರಿಯೆಂಟೇಷನ್ ಯಾವ ಕಡೆಗೆ ಸೆಳೆತ ಹೊಂದಿದೆ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ದರ್ಶನ್, ಇದಕ್ಕೆ ವಿರುದ್ಧವಾದ ಪೊಲಿಟಿಕಲ್ ಒಲವು ತೋರುತ್ತಾ ಬಂದವರು. ತಮ್ಮ ಪೊಲಿಟಿಕಲ್ ಸ್ಟ್ಯಾಂಡ್‌ಗೆ ವಿರುದ್ಧವಾದ ಯಾರನ್ನೇ ಆಗಲಿ, ಶತ್ರುವೆಂದು ಪರಿಗಣಿಸಿ, ಅವರನ್ನು ಸಾರ್ವಜನಿಕವಾಗಿ ಸೈಡ್‌ಲೈನ್‌ ಮಾಡಲು ನಮ್ಮ ಮೇನ್‌ ಸ್ಟ್ರೀಮ್ ಮೀಡಿಯಾಗಳು ಎಷ್ಟು ಉತ್ಸಾಹ ಮತ್ತು ಆಸಕ್ತಿ ತೋರುತ್ತವೆ ಅನ್ನೋದನ್ನು ನಾವು ನೋಡ್ತಲೇ ಬಂದಿದೀವಿ. ದರ್ಶನ್ ಅವರ ಇತ್ತೀಚಿನ ಕಾಟೇರ ಸಿನಿಮಾದಲ್ಲಿ ದೇವರಾಜು ಅರಸು ಕಾಲದ ಉಳುವವನೇ ಭೂಮಿಯ ಒಡೆಯ ಎಂಬ ಜನಪ್ರಿಯ ಯೋಜನೆಯನ್ನು ಜನರಿಗೆ ಮರುನೆನಪಿಸುವ ಕೆಲಸ ಮಾಡಲಾಗಿತ್ತು. ನಮ್ಮ ಮೀಡಿಯಾದ ಆಯಕಟ್ಟಿನ ಜಾಗದಲ್ಲಿ ಕೂತವರ ಸಾಮಾಜಿಕ ಹಿನ್ನೆಲೆಯನ್ನು ಗಮನಿಸಿದರೆ, ಅವರೆಲ್ಲ ಬಡವರ ವಿರೋಧಿ ಮನಸ್ಥಿತಿಯ ಹಾಗೂ ಉಳುವವನೇ ಭೂ ಒಡೆಯ ಕಾಯ್ದೆಯ ವಿರುದ್ಧ ಅಭಿಪ್ರಾಯವಿರುವ ಸಮುದಾಯದವರು. ಅದೇ ಈ ಜಿದ್ದಿಗೆ ಕಾರಣವಲ್ಲದಿದ್ದರೂ, ಅದೂ ಒಂದು ಕಾರಣವಾಗಿರಬಹುದೇ?

ಅಲ್ಲದೇ, ಆ ಸಿನಿಮಾದಲ್ಲಿ ಜಾತಿ ವ್ಯವಸ್ಥೆಯ ಕ್ರೌರ್ಯವನ್ನೂ ಪ್ರಶ್ನೆ ಮಾಡುವಂತೆ ಚಿತ್ರಕಥೆಯನ್ನು ರೂಪಿಸಲಾಗಿತ್ತು. ನಿರ್ದಿಷ್ಟವಾಗಿ ತಮ್ಮನ್ನು ತಾವು ಶ್ರೇಷ್ಠ ಎಂದು ಕಲ್ಪಿಸಿಕೊಂಡ ಸಮುದಾಯವೊಂದರ ಜಾತಿಗ್ರಸ್ಥ ಸಣ್ಣತನಗಳನ್ನು ತಿವಿದು ಚುರುಕು ಮುಟ್ಟಿಸಲಾಗಿತ್ತು. ನೇರವಾಗಿ ತಮ್ಮ ಆಕ್ರೋಶ ಕಾರಿಕೊಳ್ಳದೆ ಹೋದರೂ, ಒಳಗಿಂದೊಳಗೇ ಆ ಸಮುದಾಯ ಕಾಟೇರ ಸಿನಿಮಾದ ಕಾರಣಕ್ಕೆ ದರ್ಶನ್ ವಿರುದ್ಧ ಕೆರಳಿತ್ತು ಎನ್ನಬಹುದು. Interestingly, ಇವತ್ತು ನಮ್ಮ ಮೀಡಿಯಾ ಹೌಸ್‌ಗಳ key ಹುದ್ದೆಗಳಲ್ಲಿ ಠಳಾಯಿಸಿರುವವರು ಮತ್ತು ನ್ಯೂಸ್ ಗಳ ನೆರೇಟಿವಿಟಿಯನ್ನು ಡಿಸೈಡ್ ಮಾಡುತ್ತಿರುವವರು ಬಹುತೇಕ ಅದೇ ಸಮಯದಾಯಕ್ಕೆ ಸೇರಿದವರು. ಇದು ಕೂಡಾ ದರ್ಶನ್ ಮೇಲೆ ಮೀಡಿಯಾದವರು ಇಷ್ಟು ಜಿದ್ದಿಗೆ ಬೀಳಲು ಕಾರಣವಿರಬಹುದೇ?

ದರ್ಶನ್ ಮಾಡಿರುವ ತಪ್ಪು ಅಕ್ಷಮ್ಯ. ಆ ತಪ್ಪನ್ನು ಯಾವುದೇ ಆಯಾಮದಿಂದ ಸಮರ್ಥಿಸಿಕೊಳ್ಳುವುದಾಗಲಿ ಅಥವಾ ನಿರಾಕರಿಸುವುದಾಗಲಿ ಮಾಡುವುದು ಕೂಡಾ ಅಕ್ಷಮ್ಯ. ಜೊತೆಗೆ ಈ ಸೆನ್ಸೇಷನಲ್ ಸುದ್ದಿಯನ್ನು ಜನರ ಮುಂದಿಡಬೇಕಾದ್ದು ಕೂಡಾ ಮೀಡಿಯಾಗಳ ಕರ್ತವ್ಯ. ಆ ಪತ್ರಿಕಾ ಸ್ವಾತಂತ್ಯ್ರಕ್ಕೆ ಯಾರೂ ಅಡ್ಡಿಯಾಗಬಾರದು. ಹಾಗೊಮ್ಮೆ ಅಡ್ಡಿಯಾದ್ರೆ, ಅದು ಕೂಡಾ ಅಪರಾಧ ಅನ್ನಿಸಿಕೊಳ್ಳುತ್ತೆ. Mean while, ಮಾಧ್ಯಮಗಳು ಕೂಡಾ ಯಾವುದೇ ಪೂರ್ವಗ್ರಹವಿಲ್ಲದೆ ಇಂಥಾ ಸುದ್ದಿಗಳನ್ನು ವರದಿ ಮಾಡಬೇಕಾಗುತ್ತೆ ಹಾಗೂ ತಾವು ನಡೆಸುವ ವಿಶ್ಲೇಷಣೆಯಲ್ಲಿ ಮೀಡಿಯಾ ಟ್ರಯಲ್ ಧಾಟಿಯನ್ನು ಬದಿಗಿರಿಸಬೇಕಾಗುತ್ತೆ. ಪತ್ರಕರ್ತರಾದವರು `ಕತ್ತೆ ಬಾಲ ಕುದ್ರೆ ಜುಟ್ಟು’ಎಂದು ನಿರ್ಭೀತಿಯಿಂದ ಮಾಡುವ ವರದಿಗಾರಿಕೆ, ವಿಶ್ಲೇಷಣೆಗೆ ಬೆಲೆ ಬರುವುದೇ, ಅವರ ಪತ್ರಿಕೋದ್ಯಮದಲ್ಲಿ ನಿಷ್ಪಕ್ಷಪಾತತೆ ಇದ್ದಾಗ. ಇಲ್ಲವಾದಲ್ಲಿ ಅಂತಹ ನಿರ್ಭೀತತೆ ವರದಿಗಾರಿಕೆ ಎನಿಸಿಕೊಳ್ಳುವುದಿಲ್ಲ, ಅವಕಾಶವಾದ ಎನಿಸಿಕೊಳ್ಳುತ್ತೆ. ದರ್ಶನ್ ಪ್ರಕರಣದಲ್ಲಿ ಮೀಡಿಯಾಗಳು ತೋರುತ್ತಿರುವ ವರದಿಗಾರಿಕೆಯ ಸೆಡವು ನೋಡಿದಾಗ ಈ ಎಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!