Thursday, September 19, 2024

ಪ್ರಾಯೋಗಿಕ ಆವೃತ್ತಿ

ರಸ್ತೆ ಗುಂಡಿಗಳ ಮುಚ್ಚಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಜೆಡಿಎಸ್ ವಕ್ತಾರ

ಮಂಡ್ಯ ನಗರದಲ್ಲಿ ಬಲಿ ಪಡೆಯಲು ಸಿದ್ಧವಾಗಿ ನಿಂತಿರುವ ಅಪಾಯಕಾರಿ ರಸ್ತೆ ಗುಂಡಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮುಚ್ಚಿಸುವ ಮೂಲಕ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿಯಾಗಿ ನಾಲ್ಕು ದಿನಗಳು ಕಳೆದರೂ ನಗರಸಭೆಯಾಗಲಿ,ಲೋಕೋಪಯೋಗಿ ಇಲಾಖೆಯಾಗಲಿ ಗುಂಡಿ ಮುಚ್ಚಿಸದೆ ಕಾಲಾಹರಣ ಮಾಡುತ್ತಿದ್ದ ಹಿನ್ನಲೆಯಲ್ಲಿ ಇಂದು ಮುದ್ದನಘಟ್ಟ ಮಹಾಲಿಂಗೇಗೌಡರು ತಮ್ಮ ಖರ್ಚಿನಲ್ಲಿ ಗುಂಡಿ ಮುಚ್ಚಿಸುವ ಮೂಲಕ ಮಾದರಿಯಾದರು.

ಇಂದು ಐದು ಟಿಪ್ಪರ್ ಲಾರಿಗಳಲ್ಲಿ ವೆಟ್ ಮಿಕ್ಸ್ ತಂದು ನಗರದ ಕಾರೆಮನೆ ಗೇಟ್, ಹೊಳಲು ಸರ್ಕಲ್, ಗುತ್ತಲು ರಸ್ತೆ,100 ಅಡಿ ರಸ್ತೆ ಹೊಸಹಳ್ಳಿ ವೃತ್ತ, ಸಂಜಯ ಸರ್ಕಲ್ ರೈಲ್ವೆ ಬ್ರಿಡ್ಜ್ ಮೊದಲಾದ ಕಡೆ ವೆಟ್ ಮಿಕ್ಸ್ ನಿಂದ ರಸ್ತೆ ಗುಂಡಿ ಮುಚ್ಚಿಸುವ ಮೂಲಕ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವೇ ಮುಂದೆ ನಿಂತು ಮಾಡಿಸಿ ಜನರ ವಿಶ್ವಾಸ ಗಳಿಸಿದ್ದಲ್ಲದೆ, ಜನರಿಂದ ತೆರಿಗೆ ಸಂಗ್ರಹಿಸುವ ನಗರಸಭೆ,ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ಸಾತನೂರು ಗ್ರಾಮದ ನರಸಯ್ಯ ಮತ್ತು ಸರೋಜಮ್ಮ ದಂಪತಿಗಳ ಸುಪುತ್ರ,ಈ ದೇಶಕ್ಕಾಗಿ ಸೇವೆ ಮಾಡಿದ, ಹೋರಾಟ ಮಾಡಿದ ವೀರಯೋಧ ಕುಮಾರ್ ಅವರು ಕಾರೆಮನೆ ಗೇಟ್ ಬಳಿ ಇರುವ ಅಪಾಯಕಾರಿ ರಸ್ತೆ ಗುಂಡಿಯಲ್ಲಿ ಅಪಘಾತಕ್ಕೀಡಾಗಿ ಲಾರಿ ಚಕ್ರದಡಿ ಸಿಲುಕಿ ಮೃತಪಟ್ಟ ವಿಚಾರ ಭಾವನಾತ್ಮಕವಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿತು ಎಂದರು.

ವೀರ ಯೋಧನ ಸಾವಿಗೆ ಸರ್ಕಾರದ ನಿರ್ಲಕ್ಷವೇ ಕಾರಣ.ಕುಮಾರ್ ಅವರು ಪೋಲಿಸ್ ಇಲಾಖೆಗೆ ಆಯ್ಕೆಯಾಗಿ ಇನ್ನು ಸಾರ್ವಜನಿಕ ಸೇವೆ ಮಾಡಲು ಬಯಸಿದ್ದವರು, ಆದರೆ ರಸ್ತೆ ಗುಂಡಿ ಅವರ ಬಲಿ ಪಡೆಯಿತು. ಈ ಹಿನ್ನಲೆಯಲ್ಲಿ ವಿಷಯವಾಗಿ ನಾನು ಸರ್ಕಾರ ಹಾಗೂ ಅಧಿಕಾರಿಗಳನ್ನು ಉಗ್ರವಾಗಿ ಖಂಡಿಸುತ್ತೇನೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೃತ ಯೋಧನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮೃತ ಯೋಧನ ಸ್ಥಿತಿ ನಮ್ಮ ರೈತರಿಗೆ, ಸಾರ್ವಜನಿಕರಿಗೆ ಬರಬಾರದು. ಈಗಾಗಲೇ ಹಲವಾರು ಜನ ಅಪಾಯಕಾರಿ ಮೃತ್ಯು ಗುಂಡಿಗಳಲ್ಲಿ ಬಿದ್ದು ಅರೆ ಜೀವ ,ಪ್ರಾಣ ಕಳೆದುಕೊಂಡ ಸಾಕಷ್ಟು ನಿದರ್ಶನಗಳಿವೆ. ಆದ್ದರಿಂದ ಇಂಥ ಘಟನೆಗಳು ಮತ್ತೆ ನಡೆಯಬಾರದೆಂದು ನಾನು ಮೃತ ಯೋಧ ಕುಮಾರ್ ಅವರ ಸಾವು ಸರ್ಕಾರಕ್ಕೆ ಒಂದು ಪಾಠವಾಗಬೇಕು, ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆ ಆಗಬೇಕೆಂದು ತಿಳಿಸಿದರು.
ಇಂಥ ಅಪಾಯಕಾರಿ ರಸ್ತೆ ಗುಂಡಿಗಳಿಗೆ ಯಾರೊಬ್ಬರೂ ಬಲಿಯಾಗಬಾರದೆಂದು ನಗರದಾದ್ಯಂತ ಇರುವ ಅಪಾಯಕಾರಿ ರಸ್ತೆ ಗುಂಡಿಗಳನ್ನು ವೆಟ್ ಮಿಕ್ಸ್ ಹಾಕಿ ಮುಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯಾದ್ಯಂತ ರಸ್ತೆ ಗುಂಡಿಗಳ ಮೃತ್ಯು ಕೂಪಕ್ಕೆ ಬಿದ್ದು ನೂರಾರು ಜನರು ಬಲಿಯಾಗಿದ್ದಾರೆ. ರಾಜ್ಯ ಸರ್ಕಾರದ ದುರಾಡಳಿತವನ್ನು ಸಾರ್ವಜನಿಕರು ಖಂಡಿಸಿ ರಾಜ್ಯಾದ್ಯಂತ ರಸ್ತೆ ರಿಪೇರಿ ಮಾಡಿಸಿ, ಪ್ರಾಣ ಉಳಿಸಿ ಅಭಿಯಾನವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!