ಪಾಂಡವಪುರ ತಾಲೂಕಿನ ಚಿಕ್ಕಾಯಿರಹಳ್ಳಿ-ನಾರ್ತ್ ಬ್ಯಾಂಕ್ ಹಾಗೂ ಹೊನಗನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕೈಗೆತ್ತಿಗೊಂಡಿರುವ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡದ ಕಾಲನಿಯಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ಉದ್ದ 433 ಮೀಟರ್ ಹಾಗೂ ಕಾಂಕ್ರೀಟ್ ರಸ್ತೆ ಉದ್ದ 740 ಮೀಟರ್ವರೆಗೆ ಕಾಮಗಾರಿಯನ್ನು ಕೈ ಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಚಿಕ್ಕಾಯಿರಹಳ್ಳಿ-ನಾರ್ತ್ ಬ್ಯಾಂಕ್ ಗ್ರಾಮದ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ 99ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ಉದ್ದ 425 ಮೀಟರ್ ಹಾಗೂ ಕಾಂಕ್ರೀಟ್ ರಸ್ತೆ ಉದ್ದ 738 ಮೀಟರ್ ವರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಈ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಹೊನಗಾನಹಳ್ಳಿ, ಕಾವೇರಿ ನೀರಾವರಿ ನಿಗಮ ಎಇಇ ಯೋಗೇಶ್, ಎಇ ಉಮೇಶ್, ಪಿಡಿಒಗಳಾದ ಮಹೇಶ್,ಪಿ.ಸಿ.ಕುಮಾರ್, ಗುತ್ತಿಗೆದಾರರಾದ ಧನಂಜಯ ಎ.ಆರ್, ರಮೇಶ್ ಎ.ಎಸ್, ರೈತಸಂಘ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.




