ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ದಸರಾ ದಿನದಂದು ಮೈಸೂರಿನ ನಾಲ್ಕು ದಿಕ್ಕುಗಳಲ್ಲೂ ರೈತರು, ಕೃಷಿ ಪರಿಕರಗಳೊಂದಿಗೆ ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆಂದು ರಾಜ್ಯ ರೈತಸಂಘದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ನಿರ್ಣಯ ಕೈಗೊಳ್ಳಲಾಗಿದೆ.

ಮೊದಲನೆಯದಾಗಿ, ಕಳೆದ ಜು.11ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಸಭೆಯ ಮಾತುಕತೆಯನ್ನು ಒಂದು ವಾರದೊಳಗೆ ಕಬ್ಬು ಬೆಳೆದವರಿಗೆ ನ್ಯಾಯ ಒದಗಿಸುವುದಾಗಿ ಮಾತು ಕೊಟ್ಟಿದ್ದ ಮುಖ್ಯಮಂತ್ರಿಗಳು ತಮ್ಮ ಮಾತನ್ನು ಉಳಿಸಿಕೊಳ್ಳದೆ ತಪ್ಪಿದ್ದು, ಅವರ ವರ್ತನೆಯನ್ನು ಸಮಾವೇಶ ತೀವ್ರವಾಗಿ ಖಂಡಿಸಿದೆ, ಟನ್ ಕಬ್ಬಿಗೆ 4500 ರೂ.ನಿಗದಿ ಮಾಡಿ ಹಳೆಯ ಬಾಕಿ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಂಬಾಡಿ ಜಲಾಶಯದ ಸುತ್ತಮುತ್ತ 20 ಕಿ.ಮೀ.ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಿ ಕನ್ನಂಬಾಡಿ ಅಣೆಕಟ್ಟೆ ಉಳಿಸಬೇಕು. ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ಸರಬರಾಜನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಕೈ ಬಿಡಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಬಾರದು.
ಭಾಗ್ಯ ಜ್ಯೋತಿ,ಕುಠೀರ ಜ್ಯೋತಿಯಡಿ ಬಲವಂತವಾಗಿ ವಿದ್ಯುತ್ ಬಾಕಿ ವಸೂಲಿ ಮಾಡಲು ಬಲತ್ಕಾರವಾಗಿ ಮುಂದಾಗಿರುವುದನ್ನು ಕೈ ಬಿಡಬೇಕು. ಗೃಹ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಆಹಾರ ಪದಾರ್ಥಗಳ ಮೇಲೆ ಹಾಗೂ ಬೆಲ್ಲಕ್ಕೆ ವಿಧಿಸಿರುವ ಜಿಎಸ್ಟಿಯನ್ನು ಕೈ ಬಿಡಬೇಕು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಸಂರಕ್ಷಣಾ ಕಾಯ್ದೆ ರದ್ದುಪಡಿಸಬೇಕು. ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತರ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಶಾಸನ ಬದ್ಧ ಗೊಳಿಸಬೇಕು.
ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹೊಸ ನೇಮಕಾತಿ ಮಾಡಲು ಸರ್ಕಾರ ಅವಕಾಶ ಕೊಡಬಾರದು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದಿದ್ದಾರೆ.
ಹೇಮಾವತಿ ಎಡದಂಡೆ ನಾಲೆ ಆಧುನೀಕರಣದಲ್ಲಿ ನಡೆದಿರುವ 500 ಕೋಟಿ ರೂ. ಅವ್ಯವಹಾರವನ್ನು ಸಿಬಿಐಗೆ ಒಪ್ಪಿಸಬೇಕು. ಸಮಾನ ಶಿಕ್ಷಣ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಬೇಕು. ಎಂಬುದು ಸೇರಿದಂತೆ ಒಟ್ಟು 20 ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಮಾವೇಶ ನಿರ್ಣಯ ಕೈಗೊಂಡಿದೆ.




