Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹಾಗೂ ಆತನ ಬೆಂಬಲಿಗರನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ರೈತಸಂಘ (ರೈತಬಣ) ಕಾರ್ಯಕರ್ತರು ನಗರದಲ್ಲಿ
ಬೃಹತ್ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಎಎಸ್ಪಿ ವೇಣುಗೋಪಾಲ್ ಅವರಿಗೆ ತಾಲೂಕು ದಂಡಾಧಿಕಾರಿ ಕುಂಇ ಅಹ್ಮದ್ ಅವರ ಬಳಿ ಲಂಚ ಕೇಳಿದ ಕೆ.ಆರ್.ರವೀಂದ್ರನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ತೆರಳಿ ಅಲ್ಲಿಯೂ ಕೆಲ ಕಾಲ ಧರಣಿ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರ ಮನವಿ ಸಲ್ಲಿಸಿ ಗೂಂಡಾ ಕಾಯ್ದೆಯಡಿ ಆರ್ ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಹಾಗೂ ಆತನ ಸಹಚರರನ್ನು ಬಂಧಿಸುವಂತೆ ಮನವಿ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಅವರು ಮಾತನಾಡಿ, ಕಲ್ಲಹಳ್ಳಿಯ ಆರ್ ಟಿಐ ಕಾರ್ಯಕರ್ತ ರವೀಂದ್ರ ತನ್ನ ಸಹಚರರ ಗಾಂಗ್ ಕಟ್ಟಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಭೂ ಮಾಫಿಯಾ ದಲ್ಲಾಳಿಗಳ ಜತೆ ಶಾಮೀಲಾಗಿ, ಆರ್ ಟಿಐ ಕಾಯ್ದೆ ದುರ್ಬಳಕೆ ಮಾಡಿಕೊಂಡು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿ ವರ್ಗದವರನ್ನು ಬೆದರಿಸುತ್ತಾ ಮಾಧ್ಯಮಗಳಲ್ಲಿ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದಾನೆಂದು ಕಿಡಿಕಾರಿದರು.

ಮುಡಾ ಸೇರಿದಂತೆ ಸರ್ಕಾರದ ಇಲಾಖೆಯ ಹಲವಾರು ಕಡತಗಳು ರವೀಂದ್ರನ ಮನೆಯಲ್ಲಿದೆ. ಸರ್ಕಾರಿ ಇಲಾಖೆಗೆ ಸೇರಿದ ಕಡತಗಳು ಹೇಗೆ ಇವನ ಕೈ ಸೇರಿದೆ. ಇದನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾದಲ್ಲಿ ಇನ್ನೂ ನಮ್ಮಂತಹ ಸಾಮಾನ್ಯ ಜನರಿಗೆ ಎಂತಹ ಸ್ಥಿತಿ ಬರಲಿದೆ ಎಂಬುದನ್ನೂ ಊಹಿಸಲು ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಸತ್ಯಾನಂದ ಎಂಬಾತ ಆರೋಪಿಗಳ ಜತೆ ಸಂಪರ್ಕವಿರಿಸಿಕೊಂಡಿದ್ದಾರೆ. ಜತೆಗೆ ಆರೋಪಿಗಳ ಪರವಾಗಿ ಪೋಲಿಸ್ ಠಾಣೆಗೆ ಹೋಗಲು ಕಾರಣವೇನು? ಎಂದು ಪ್ರಶ್ನಿಸಿದ ಇ.ಎನ್.ಕೃಷ್ಣೇಗೌಡ ಅವರು, ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಗೂಂಡಾ ಕಾಯ್ದೆ ಅಡಿಯಲ್ಲಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವೆಂಕಟಗಿರಿಯಯ್ಯ ಹೆಮ್ಮಿಗೆ ಚಂದ್ರಶೇಖರ್, ಪಿ.ಎಂ.ರವಿಕುಮಾರ್,ಆರ್.ರಾಜಶೇಖರ, ಹಿರೇಮರಳಿ ಸಿ.ಲಿಂಗರಾಜು, ಎಚ್.ಸಿ.ರಾಜೇಶ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!