Friday, November 20, 2026

ಪ್ರಾಯೋಗಿಕ ಆವೃತ್ತಿ

ಓಟಕ್ಕೂ ಸೈ… ಓದಿಗೂ ಸೈ… ಎನ್ನುವ ಬಹುಮುಖ ಗ್ರಾಮೀಣ ಪ್ರತಿಭೆ ಸಿಂಚನಾ

✍️ ಉಷಾರಾಣಿ, ದೈಹಿಕ ಶಿಕ್ಷಣ ಶಿಕ್ಷಕರು 

ಕ್ರೀಡೆಯಾಗಲಿ, ಸಾಂಸ್ಕೃತಿಕ ಚಟುವಟಿಕೆಗಳಾಗಿ ಅಥವಾ ಪಠ್ಯ ಚಟುವಟಿಕೆಗಳೆ ಆಗಲಿ ಯಾವಾಗಲೂ ಮುಂದಿರುವ ಗ್ರಾಮೀಣ ಪ್ರತಿಭೆ ಎಂದರೆ ಆಕೆ ಸಿಂಚನಾ.

ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ರೈತಾಪಿ ಕುಟುಂಬದ ರವಿ ಮತ್ತು ಸುನೀತಾ ದಂಪತಿಗಳ ಪುತ್ರಿಯಾದ ಈಕೆ, ಮೊದಲು ಮಂಡ್ಯದ ವಿಮಲಾ ಕಾನ್ವೆಂಟಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರ ಪ್ರೌಢಶಾಲಾ ಶಿಕ್ಷಣಕ್ಕಾಗಿ ಬೇಲೂರಿನ ಸರ್ಕಾರಿ ಪ್ರೌಢಶಾಲೆಗೆ ಸೇರಿದರು. ಸದಾ ಉತ್ಸಾಹದ ಬುಗ್ಗೆಯಾಗಿರುವ ಸಿಂಚನಾಳ ಪ್ರತಿಭೆ ಅರಳುವುದಕ್ಕೆ ಈ ಶಾಲೆಯ ವಾತಾವರಣ, ಶಿಕ್ಷಕ ವರ್ಗದವರ ನಿರಂತರ ಪ್ರೋತ್ಸಾಹ ಚಿಮ್ಮು ಹಲಗೆಯಾಯಿತು.

ಆಟೋಟದಲ್ಲೂ ಸದಾ ಮುಂದು….

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರೋಟರಿ ಸಂಸ್ಥೆ ವತಿಯಿಂದ ಇತ್ತಿಚೇಗೆ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ 100 ಮೀ ಓಟ, 200 ಮೀ ಓಟ, ಉದ್ದ ಜಿಗಿತ, ಗುಂಡು ಎಸೆತ, 4×100ಮೀ ರಿಲೇ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಜೂಡೋ ಹೀಗೆ ಎಲ್ಲ ಆಟೋಟ ಸ್ಪರ್ಧೆಗಳಲ್ಲೂ ಭಾಗವಹಿಸಿ ತಮ್ಮ ಮಿಂಚಿನ ಸಂಚಾರದಿಂದ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಈ ಮೂಲಕ ಶಾಲೆಗಷ್ಟೆ ಅಲ್ಲದೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಷ್ಟೆ ಅಲ್ಲದೇ ವೈಯಕ್ತಿಕ ಪ್ರಶಸ್ತಿಯನ್ನೂ ತನ್ನ ಮುಡಿಗೇರಿಸಿಕೊಂಡು ‘ವರ್ಷದ ವೇಗದ ಓಟಗಾರ್ತಿ’ ಎಂಬ ಬಿರುದನ್ನು ಪಡೆದಿದ್ದಾರೆ.

ರಾಜ್ಯ ಮಟ್ಟಕ್ಕೆ ಆಯ್ಕೆ 

ಜೂಡೋ ಕ್ರೀಡೆಯಲ್ಲಿ ವಿಶೇಷ ಪರಿಣಿತಿ ಇರುವ ಸಿಂಚನಾ, ರಾಜ್ಯಮಟ್ಟದವರೆಗೆ ಸ್ಪರ್ಧೆ ಮಾಡಿ ಅಲ್ಲಿಯೂ ಬಹುಮಾನವನ್ನು ಗಿಟ್ಟಿಸಿಕೊಂಡಿರುವುದು ಅತ್ಯಂತ ಅಭಿಮಾನದ ವಿಷಯ. ಬಹುಮುಖಿ ಪ್ರತಿಭಾವಂತೆಯಾದ ಈಕೆ ಕ್ರೀಡೆಯಲ್ಲಿ ಮಾತ್ರವಲ್ಲದೆ ವ್ಯಾಸಂಗದಲ್ಲಿಯೂ ಸದಾ ಮುಂದು. ಇದರ ಜೊತೆ ಜೊತೆಗೆ ಶಾಲಾ ನಾಟಕಗಳಲ್ಲಿ ಮತ್ತು ಕರ್ನಾಟಕ ಸಂಘ ಮಂಡ್ಯ ಆಯೋಜಿಸಿದ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಂದ  ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ರಂಗಭೂಮಿಯಲ್ಲೂ ಸೈ ಎನಿಸಿಕೊಂಡ ಪ್ರತಿಭೆ 

ಈ ಅಭಿನಯಿಸಿದ ನಾಟಕಗಳೆಂದರೆ ‘ಕರ್ಣಾವಸಾನ, ಮೂಡಲಪಾಯ ಯಕ್ಷಗಾನದಲ್ಲಿ ಶಲ್ಯನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ‘ಪಾದುಕಾ ಕಿರೀಟಿ’ ನಾಟಕದಲ್ಲಿ ಸಖಿಯ ಪಾತ್ರದಲ್ಲೂ, ವಾಲಿ-ಸುಗ್ರೀವರ ಕಾಳಗದಲ್ಲಿ ತೆರೆ ಹಿಡಿಯುವ ಪಾತ್ರದಲ್ಲೂ ಕಾಣಿಸಿಕೊಂಡ ಸಿಂಚನಾ ತನಗೆ ದೊರೆತ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವುದು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಕಾರಣವಾಗಿದೆ. ಈ ಬಾರಿಯ ಶ್ರೀರಂಗಪಟ್ಟಣದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಜನಪದ ನೃತ್ಯ ಪ್ರದರ್ಶನ ನೀಡಿಯೂ ಗಮನ ಸೆಳೆದಿದ್ದಾರೆ. ಭಾರತ ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಸಿಂಚನಾ ತನ್ನ ಸಂಸ್ಕಾರ, ಸಂಸ್ಕೃತಿ ಪ್ರಿಯ ಗುಣಗಳಿಂದ ಶಾಲೆಯ ಶಿಸ್ತಿನ ಹಾಗೂ ಮಾದರಿ ವಿದ್ಯಾರ್ಥಿನಿಯಾಗಿ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಅಪ್ಪಟ ಗ್ರಾಮೀಣ ಪ್ರತಿಭೆಯಾದ ಸಿಂಚನಾ ಆಗಸ್ಟ್ 23, 2007ರಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಈಕೆ, ಈಗ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇಂತಹ ಬಹುಮುಖ ಪ್ರತಿಭೆಯನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಎತ್ತರಕ್ಕೆ ಬೆಳೆದು ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ.

ಬಹುಮುಖ ಪ್ರತಿಭೆ ಎಂದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಸಿಂಚನಾ ಬಿ.ಆರ್. ಪ್ರಸ್ತುತ ಬೇಲೂರು ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಂದು ನಡೆದ 74 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕ್ರೀಡಾ ಧ್ರುವತಾರೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ