ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರಿಗೆ ಮಂಡ್ಯದಲ್ಲಿ ಶೀಘ್ರದಲ್ಲೇ ವಿಜೃಂಭಣೆಯಿಂದ ಅಂಬೇಡ್ಕರ್ ಭವನ ಅಥವಾ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ತಿಳಿಸಿದರು.
ಮಂಡ್ಯನಗರದ ಹರಿಪ್ರಿಯ ಹೋಟೆಲ್ ನ ಚಾಣಕ್ಯ ಸಭಾಂಗಣದಲ್ಲಿ ದಿವ್ಯ ಚೇತನ ಎಸ್.ಎಂ.ಕೃಷ್ಣ ಸಂಸ್ಮರಣ ವೇದಿಕೆ ವತಿಯಿಂದ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಒಕ್ಕೊರಲಿನಿಂದ ಕೋರ್ ಕಮಿಟಿ ಮಾಡಿದ್ದಾರೆ. ಮುಂದೆ ಕಮಿಟಿಯವರು ತೀರ್ಮಾನ ಮಾಡಿ ಮುಂದಿನ ರೂಪುರೇಷೆ ಮಾಡಲು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮಂಡ್ಯದ ಪುಣ್ಯ ಭೂಮಿಯಲ್ಲಿ ಜನಿಸಿ ನಾಡಿನ ಅದ್ವಿತೀಯ ನಾಯಕರಾಗಿ ಬೆಳೆದು, ವಿಶ್ವಮಾನ್ಯ ರಾಗಿ ಮನ್ನಣೆ ಗಳಿಸಿ ಭೌತಿಕವಾಗಿ ನಮ್ಮನಗಲಿದ ಅಮರ ಚೇತನ ಎಸ್.ಎಂ.ಕೃಷ್ಣ ರವರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ ದಿವಂಗತ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಎಸ್.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದ ನಾಯಕರು ಸಜ್ಜನಿಕೆಗೆ ಹೆಸರುವಾಸಿಯಾದವರು ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ರಾಜಕಾರಣ ಹಾಗೂ ಸಮಾಜ ಸೇವೆಗಳ ಬಗ್ಗೆ ದಾಖಲೆಯಾಗಿರುವಷ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಆಗಿಲ್ಲ, ಮಂಡ್ಯ ಜಿಲ್ಲೆಯಲ್ಲಿ ಇರುವಷ್ಟು ಪ್ರಶಸ್ತಿಗಳು ಎಲ್ಲೂ ಇಲ್ಲ ಎಂದು ಹೇಳಿದರು.
ವಕೀಲ ಟಿ.ಎಸ್.ಸತ್ಯಾನಂದ ಮಾತನಾಡಿ ಮಂಡ್ಯದಲ್ಲಿ ಎಸ್.ಎಮ್. ಕೃಷ್ಣ ಅವರಿಗೆ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ಮಾಡಲು ಹಲವಾರು ಪ್ರಮುಖರ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದಿನಾಂಕ ನಿಗಧಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರ ನೇತೃತ್ವದಲ್ಲಿ ಶೀಘ್ರವಾಗಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ಆಗಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ. ತಿಮ್ಮೇಗೌಡ, ಡಾ.ಬಿ.ಆರ್ ರವಿಕಾಂತೇಗೌಡ, ಪ್ರೊ.ಬಿ.ಶಿವಲಿಂಗಯ್ಯ, ಕೆ.ಟಿ. ಶ್ರೀಕಂಠೇಗೌಡ,ಎ.ಸಿ.ರಮೇಶ್ ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಜಿ.ಟಿ.ವೀರಪ್ಪ, ಹಾಲಹಳ್ಳಿ ರಾಮಲಿಂಗಯ್ಯ, ಬಿ.ಸಿ.ಶಿವಾನಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು




