Saturday, September 14, 2024

ಪ್ರಾಯೋಗಿಕ ಆವೃತ್ತಿ

ಸಾಬರ ಮೇಷ್ಟ್ರು ಮತ್ತು ಗಣಪತಿ ಹಬ್ಬ

– ಗಿರೀಶ್ ತಾಳಿಕಟ್ಟೆ

ನಾನು ಹೈಸ್ಕೂಲು ಓದುವಾಗ ನಮಗೆ ಅಸ್ಲಾಂ ಪಾಶಾ ಅಂತ ಹಿಂದಿ ಸಬ್ಜೆಕ್ಟಿನ ಮೇಷ್ಟ್ರಿದ್ದರು. ಇಡೀ ‘ಇಸ್ಕೂಲಿ’ಗೆ ಬ್ರಿಲಿಯಂಟ್ ಅನ್ನಿಸಿಕೊಂಡಿದ್ದ ನನಗೇ ಹಿಂದಿ ಸಬ್ಜೆಕ್ಟು ಬೆವರಿಳಿಸುತ್ತಿತ್ತು. ಅಂತದ್ರಲ್ಲಿ ಪಾಪಾ, ನನ್ನ ಸಹಪಾಠಿಗಳ ಕತೆ ಹೇಗಿರಬೇಡ. ಅವರೋ ವಿಪರೀತ ಸ್ಟ್ರಿಕ್ಟು ಮನುಷ್ಯ. ಅವರ ಕ್ಲಾಸಿನಲ್ಲಿ ಪ್ರತಿಯೊಬ್ಬರೂ ಹಿಂದಿಯಲ್ಲೇ ಮಾತಾಡ್ಬೇಕು ಅಂತ ಠರಾವು ಹೊರಡಿಸಿದ್ದರು. ನಮಗೋ ಅಟೆಂಡೆನ್ಸು ಹೇಳುವಾಗ ಅವರು ಹೇಳಿಕೊಟ್ಟಿದ್ದ ’ಉಪಸ್ಥಿತ್ ಹೂಂ ಸಾರ್’ ಅನ್ನೋದನ್ನು ಕೂಡಾ ಎಷ್ಟೇ ಉರು ಹೊಡೆದರೂ ಹೇಳಲು ಬರುತ್ತಿರಲಿಲ್ಲ. ಟೆನ್ಷನ್‌ನಲ್ಲಿ ‘ಉಪತಿಸ್ ಊ ಸಾ’ ಅಂದು ಏಟು ತಿನ್ನಲು ಶುರು ಮಾಡಿಕೊಳ್ಳುತ್ತಿದ್ದೆವು.

ಹಾಗಾಗಿ ಸಿಕ್ಕಾಪಟ್ಟೆ ಗಲಾಟೆ ಮಾಡುವ ನಾವು ಹುಡುಗರೆಲ್ಲ ಹಿಂದಿ ಕ್ಲಾಸಿನಲ್ಲಿ ಮಾತ್ರ ಗಪ್‌ಚುಪ್ ಕುಂದ್ರುತ್ತಿದ್ದೆವು. ಅಕಸ್ಮಾತ್ ಏನಾದ್ರು ಕೀಟಲೆ ಮಾಡಿ, ಅದು ಅಸ್ಲಾಂ ಸಾರ್ ಕಣ್ಣಿಗೆ ಬಿದ್ದು ಅವ್ರು ಹಿಂದೀಲೆ ವಿಚಾರಣೆ ಶುರು ಹಚ್ಕೊಂಡ್ರೆ, ಏನಪ್ಪಾ ಪಜೀತಿ ಅಂತ ಯಾವನೂ ಹಿಂದಿ ಕ್ಲಾಸು ಮುಗಿಯೋವರೆಗೂ ಅಲ್ಲಾಡ್ತಿರಲಿಲ್ಲ.

ಇಷ್ಟೆಲ್ಲ ಹೇಳಿದಮೇಲೆ ಆ ಮೇಷ್ಟ್ರ ಬಗ್ಗೆ ನಮಗೆಲ್ಲ ಎಂಥಾ ‘ಆದರಣೀಯ’ ಭಾವ ಇದ್ದಿರಬಹುದು ಅನ್ನೋದು ನಿಮಗೆ ಅರ್ಥವಾಗಿರುತ್ತೆ! ಹಿಂದಿ ಕ್ಲಾಸು ಶುರುವಾಗುವ ವೇಳೆಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ದಿಢೀರ್ ಜಲಬಾಧೆ, ಮಲಬಾಧೆ, ತಲೆಸುತ್ತು, ಕಣ್ಣುಮಂಜು, ವಾಕರಿಕೆ, ವಾಂತಿ ಇತ್ಯಾದಿತ್ಯಾದಿ ಬೇನೆಗಳು ಕಾಣಿಸಿಕೊಂಡು ’ಸಿಂಪಥಿ’ ಕೋಟಾಕ್ಕೆ ಸೇರಿಕೊಂಡುಬಿಡುತ್ತಿದ್ದೆವು. ಕಲಿಸೋ ವಿಚಾರದಲ್ಲಿ ವಿಪರೀತ ಸ್ಟ್ರಿಕ್ಟ್ ಇದ್ದರೂ, ಮಕ್ಕಳ ಹೆಲ್ತ್ ವಿಚಾರದಲ್ಲಿ ಅವರಿಗೆ ಅಷ್ಟೇ ಕಕ್ಕುಲಾತಿ. ಯಾರು ಏನೇ ಕಾಯಿಲೆ ನೆಪ ಹೇಳಿದರೂ ನಂಬಿಬಿಡುತ್ತಿದ್ದರು. ಮತ್ತು ಅಂತವರಿಗೆ ಆ ಕ್ಲಾಸಿನಲ್ಲಿ ಹೆಚ್ಚು ತ್ರಾಸು ಕೊಡುತ್ತಿರಲಿಲ್ಲ. ಅವರ ಆ ವೀಕ್ನೆಸ್ಸು ಯುಟಿಲೈಸ್ ಮಾಡಿಕೊಳ್ಳೋದ್ರಲ್ಲಿ ನಮ್ಮ ನಡುವೆ ಜೋರು ಪೈಪೋಟಿ. ಯಾಕಂದ್ರೆ ಒಂದೇ ದಿನ ಜಾಸ್ತಿ ಜನಕ್ಕೆ ಕಾಯಿಲೆಗಳು ಬಂದ್ರೆ ಡೌಟು ಬರುತ್ತಲ್ವಾ.

ಹೀಗೆ ಅವರು ನಮಗೆ ದಿನದಿಂದ ದಿನಕ್ಕೆ ‘ಇಷ್ಟವಿಲ್ಲದ’ ಮೇಷ್ಟ್ರಾಗುತ್ತಾ ಬಂದರು. ಇದರ ಜೊತೆಗೆ ‘ಅವ್ರು ನಮ್ಮೋರಲ್ಲ; ಸಾಬ್ರು!’ ಅನ್ನದು ಕೂಡಾ ಅದೆಂಗೋ ಬೇರುಬಿಟ್ಟುಕೊಂಡಿತ್ತು. ನಾವು ಮನುಷ್ಯನನ್ನು ಸಂಘಜೀವಿ ಅಂತೀವಿ. ವಿಶಾಲಾರ್ಥದಲ್ಲಿ ಅದು ನಿಜವೂ ಹೌದು. ಆದರೆ ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಲು ಹೋದಾಗ ಅದೇ ಮನುಷ್ಯ ತನ್ನ ಸಹಜೀವಿಯಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುವುದಕ್ಕೇ ಹಾತೊರೆಯುತ್ತಿರುತ್ತಾನೆ. ಅದು ಜಾತಿಯಾಗಿರಬಹುದು, ಧರ್ಮ, ವರ್ಗ, ಲಿಂಗ, ಭಾಷೆ, ದೇಶ, ಊಟ, ಬಟ್ಟೆ, ಕೊನೆಗೆ ಸತ್ತಾಗ ಮಾಡುವ ಸಂಸ್ಕಾರಗಳ ವಿಷಯದಲ್ಲೂ ‘ನಮ್ ಕಡೆ ಈ ಪದ್ಧತಿಯಿಲ್ಲ ಬಿಡಿ’ ಅನ್ನೋವರೆಗೆ ಯಾವ ವಿಚಾರ ತೆಗೆದುಕೊಂಡರೂ ಪ್ರತ್ಯೇಕವಾಗುವುದಕ್ಕೇ ಹಾತೊರೆಯುತ್ತಾನೆ. ಅದಕ್ಕಾಗಿಯೇ ಮನುಷ್ಯನ ಎದೆಯಲ್ಲಿ ದ್ವೇಷವನ್ನು ಬಿತ್ತುವುದು ಸುಲಭ; ಅದೇ ಪ್ರೀತಿಯನ್ನು ಅರಳಿಸುವುದು ಕಷ್ಟ!

ನಮ್ಮ ಸ್ಕೂಲಲ್ಲಿ ಪ್ರತಿ ವರ್ಷ ಗೌರಿ ಹಬ್ಬಕ್ಕೆ ಗಣಪತಿ ಪ್ರತಿಷ್ಠಾಪನೆ ಮಾಡಿ, ಮೆರವಣಿಗೆ ಮೂಲಕ ಕೊಂಡೊಯ್ದು ಬಾವಿಯಲ್ಲಿ ವಿಸರ್ಜನೆ ಮಾಡಿಬರೋದು ವಾಡಿಕೆ. ಆ ವರ್ಷವೂ ಗಣಪತಿ ಕೂರಿಸಿದ್ದೆವು. ನಮ್ಮ ಹೈಸ್ಕೂಲು, ಊರಿಂದ ತುಸು ಹೊರಭಾಗದಲ್ಲಿತ್ತು. ಅಲ್ಲಿಂದ ಮೆರವಣಿಗೆಯ ಮೂಲಕ ಊರೊಳಗಿನ ಬಾವಿಗೆ ವಿಗ್ರಹವನ್ನು ಪುಟ್ಟ ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಕೊಂಡೊಯ್ಯುತ್ತಿದ್ದವು. ಶಿವಮೊಗ್ಗ-ದಾವಣಗೆರೆ ಹೆದ್ದಾರಿ ಮೂಲಕವೇ ನಮ್ಮ ಮೆರವಣಿಗೆ ಹೋಗಬೇಕು. ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದವು. ಹಾಗಾಗಿ ಮಕ್ಕಳನ್ನು ಸಾಲಿನ ಆಚೀಚೆ ಹೋಗದಂತೆ ಶಿಸ್ತಿನಿಂದ ಕರೆದೊಯ್ಯುವ ಜವಾಬ್ಧಾರಿ ‘ವೆರಿ ಸ್ಟ್ರಿಕ್ಟ್ ಮೇಷ್ಟ್ರು’ ಅಸ್ಲಾಂ ಪಾಶಾ ಸಾರ್ ಹೆಗಲಿಗೆ ಬೀಳುತ್ತಿತ್ತು. ಅವರೊಬ್ಬರಿಗೇ ಹುಡುಗರು ಹೆದರುತ್ತಿದ್ದುದು.

ಆ ಸಲವೂ ನಾವು ಮೆರವಣಿಗೆಯಲ್ಲಿ ಸಾಗುತ್ತಿದ್ದೆವು. ಅಸ್ಲಾಂ ಮೇಷ್ಟ್ರು, ಸರದಿಯ ಮಧ್ಯ ಸಾಗುತ್ತಿದ್ದ ಪಲ್ಲಕ್ಕಿಯ ಆಸುಪಾಸಿನಲ್ಲಿ ನಿಂತು, ಬಾಯಲ್ಲಿ ಪೀಪಿ ಊದುತ್ತ, ಬೆತ್ತ ತಿರುಗಿಸುತ್ತಾ ಮಕ್ಕಳನ್ನು ಬೆದರಿಸಿ ಸಾಲಿನಲ್ಲಿ ಸಾವಧಾನವಾಗಿ ಬರುವಂತೆ ನೋಡಿಕೊಳ್ಳುತ್ತಿದ್ದರು. ಆಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ವೇಗವಾಗಿ ಬಸ್ಸೊಂದು ಹಾದುಹೋಯ್ತು. ಅದರ ಟೈರಿನ ದಾಂಗುಡಿಗೆ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ಕೆಸರು ನೀರು ಎಗರಿ ಅಸ್ಲಾಂ ಮೇಷ್ಟ್ರ ಮೈಮೇಲೆಲ್ಲ ಎರಚಿತು. ಅವರು ಅಕ್ಷರಶಃ ಕಂಬಳದ ಕೆಸರುಗದ್ದೆ ವೀರನಂತಾಗಿದ್ದರು. ಆ ಪರಿಸ್ಥಿತಿಯಲ್ಲಿ ಅವರು ಮೆರವಣಿಗೆಯಲ್ಲಿ ಬರಲಾದೀತೆ. ಹೆಡ್‌ಮೇಷ್ಟ್ರ ಅಪ್ಪಣೆ ಪಡೆದು ಮನೆಗೆ ಹೋದರು.

ನಮಿಗೆ ಎಲ್ಲಿಲ್ಲದ ಖುಷಿ. ಹಿಂದಿ ಕಲಿಸೋ ನೆಪದಲ್ಲಿ ನಮ್ಮನ್ನು ಅಷ್ಟೆಲ್ಲ ಗೋಳು ಹೊಯ್ದುಕೊಳ್ಳುತ್ತಿದ್ದ ಅಸ್ಲಾಂ ಮೇಷ್ಟ್ರಿಗೆ ಗಣಪತಿ ಸರಿಯಾದ ಪಾಠ ಕಲಿಸಿದ ಅಂತ ಹಿರಿಹಿರಿ ಹಿಗ್ಗಿದೆವು. “ಎಷ್ಟೇ ಆಗ್ಲಿ ಗಣಪತಿ ನಮ್ಮ ದೇವ್ರಲ್ವಾ. ಸಾಬರ‍್ಯಾಕೆ ಮೆರವಣಿಗೇಲಿ ಬರಬೇಕು ಅಂತ ಸರಿಯಾಗಿ ಮಾಡ್ದ ನೋಡು. ಗಣಪತಿ ಬಪ್ಪ ಮೋರಯಾ” ಅಂತ ನಮ್ಮ ಮಿತಿಗೆ ದಕ್ಕಿದಷ್ಟು ತರ್ಕಿಸಿ ಖುಷಿಪಟ್ಟೆವು.

ಮಾರನೇ ದಿನ ಎಂದಿನಂತೆ ಸ್ಕೂಲಿಗೆ ಬಂದರು. ಪ್ರೇಯರ್ ಕೂಡಾ ಆಯ್ತು. ನಾವೆಲ್ಲ ನಮ್ಮ ತರಗತಿಗಳಿಗೆ ಹೋಗುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು ನಾರಾಯಣಸ್ವಾಮಿ ಅನ್ನೋರು “ಅಲ್ಲಾ ಪಾಶಾ ಸಾರ್. ಆ ಬಸ್ಸು ಅಷ್ಟೊಂದು ವೇಗವಾಗಿ ಬರ್ತಿರೋದು ದೂರದಿಂದ ನೀವೇ ನೋಡಿದ್ರಿ. ನೀವು ನಿಂತಿರೋ ಜಾಗದಲ್ಲಿದ್ದ ಗುಂಡಿಯಿಂದ ನೀರು ಎಗರುತ್ತೆ ಅಂತ ಗೊತ್ತಿದ್ದೂ ಸ್ವಲ್ಪ ಪಕ್ಕಕ್ಕೆ ಸರಿಯೋದು ಬಿಟ್ಟು ಅಲ್ಲೇ ನಿಂತ್ಗಂಡು ಮೈಯೆಲ್ಲ ಕೆಸ್ರು ಮಾಡ್ಕೊಂಡ್ರಲ್ಲ” ಅಂದ್ರು.

ಅದಕ್ಕವರು ನಗುತ್ತಾ, “ಇಲ್ಲಾ ಸಾರ್, ನಾನು ಸರೀಬಹುದಿತ್ತು. ಕೆಸರಿನಿಂದ ಎಸ್ಕೇಪ್ ಆಗಬಹುದಿತ್ತು. ಆದ್ರೆ ನಾನು ಅಂಗೆ ಮಾಡಿದ್ರೆ, ಅವಾಗ ಕೆಸ್ರು ಪೂರ್ತಿ ನಮ್ಮ ಪಲ್ಲಕ್ಕಿ ಮೇಲೆ ಬಿದ್ದು ಗಣೇಶನ ಮೂರ್ತಿಗೆ ಕೆಸರು ಮೆತ್ಕೋತಾ ಇತ್ತು. ಕೊನೇ ಕ್ಷಣದಲ್ಲಿ ಯಾಕೆ ನಮ್ಮ ಸಂಭ್ರಮಕ್ಕೆ ಅಪಶಕುನ ಅಂತ ನಾನೇ ಬೇಕುಬೇಕು ಅಂತ ಅಡ್ಡ ಬಂದೆ” ಅಂದ್ರು! ಅದು ನಮ್ಮ ಕಿವಿಗೆ ಬಿತ್ತು. ಆಗ ನನಗಾದ ಪಾಪಪ್ರಜ್ಞೆ ಅಷ್ಟಿಷ್ಟಲ್ಲ. ಅವರ ಮೇಲೆ ಗೌರವ ಮೂಡಿತು. ನಮ್ಮ ಸಣ್ಣತನಗಳ ಬಗ್ಗೆ ಹೇಸಿಗೆ ಅನ್ನಿಸಿತು. ಯಾವ ಪುಣ್ಯವೋ ಏನೋ, ಇಂತಹ ಮೇಷ್ಟ್ರಗಳ ಒಡನಾಟ ನನ್ನ ಜೀವನದುದ್ದಕ್ಕೂ ಸಿಕ್ಕಿದ್ದರಿಂದ ಇವತ್ತು ನಾನು ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸುವ ಮನುಷ್ಯನಾಗಿದ್ದಾನೆ. ಆ ಮೇಷ್ಟ್ರುಗಳಿಗೆಲ್ಲ ನಾನು ಚಿರಋಣಿ.

ಅಂದಹಾಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಮ್ಯಾತಮೆಟಿಕ್ಸು, ಇಂಗ್ಳೀಶು, ಹಿಂದಿಯಲ್ಲಿ ಹೆಚ್ಚಾಗಿ ಫೇಲಾಗ್ತಾರೆ ಅನ್ನೋ ಅಪವಾದ ಮೆತ್ತಿಕೊಂಡಿತ್ತು. ಆದ್ರೆ ಅಸ್ಲಾಂ ಮೇಷ್ಟ್ರು ಬಂದಮೇಲೆ ಹಿಂದಿಯಲ್ಲಿ ಪಾಸಾಗೋರ ಸಂಖ್ಯೆ ಜಾಸ್ತಿಯಾಯ್ತು! ನಾನಂತು ಇಡೀ ತಾಲ್ಲೂಕಿಗೆ ಟಾಪರ್ ಬಂದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!