Friday, September 20, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಸರ್ಕಾರ ಎಫ್‌ಸಿಐ ನೀತಿಯನ್ನು ಒಂದು ರಾಜ್ಯಕ್ಕೆ ಮಾತ್ರ ಮಾಡಿಲ್ಲ – ಸದಾನಂದಗೌಡ

ಕೇಂದ್ರ ಸರ್ಕಾರ ಎಫ್‌ಸಿಐ ನೀತಿಯನ್ನು ಒಂದು ರಾಜ್ಯಕ್ಕೆ ಮಾತ್ರ ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿರುವ 10 ರಿಂದ 12 ರಾಜ್ಯಗಳಿಗೂ ಇದೇ ನೀತಿಯನ್ನು ಮಾಡಿದೆ ಎಂದು ಅಕ್ಕಿ ಇದ್ದರೂ ಕೊಡಲು ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ತಿರುಗೇಟು ನೀಡಿದರು.

ಮಂಡ್ಯ ನಗರದ ಶ್ರೀ ಕಾಳಿಕಾಂಬ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಹಾರ ಭದ್ರತಾ ಕಾಯ್ದೆ (ಎಫ್‌ಸಿಐ ) ಪ್ರಕಾರ ಆಹಾರ ವಸ್ತುಗಳನ್ನು ಸಂಗ್ರಹಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅತಿವೃಷ್ಟಿ, ಅನಾವೃಷ್ಟಿ ನೋಡಿಕೊಂಡು ಕೇಂದ್ರ ಈ ತೀರ್ಮಾನ ಮಾಡಿದೆ. ಇದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ 10 ಕೆ.ಜಿ. ಅಕ್ಕಿ ಕೊಡುವುದಾಗಿ ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಏನಾದರೂ ಇವರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಜನತೆಗೆ ಗ್ಯಾರಂಟಿ ಕೊಡುವ ಮೊದಲು ಯೋಚಿಸಬೇಕಿತ್ತು. ಈಗ ಪ್ರತಿಭಟನೆ ಮಾಡಿದರೇನು ಫಲ ಎಂದು ಹೇಳಿದರು.

ಹೆದ್ದಾರಿ ಅವೈಜ್ಞಾನಿಕ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು, ಖಂಡಿತವಾಗಿಯೂ ಸ್ವಲ್ಪ ಸತ್ಯಾಂಶವಿದೆ. ಇವತ್ತಿಗೂ ಕೂಡ ಟೋಲ್ ವ್ಯವಸ್ಥೆ ಸರಿಯಿಲ್ಲ. ಒಳ ಮತ್ತು ಹೊರ ಪ್ರವೇಶ ಸರಿಯಾಗಿ ಮಾಡಲು ಆಗಿಲ್ಲ. ಈ ಅವೈಜ್ಞಾನಿಕದ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಗಮನಕ್ಕೆ ತಂದಿದ್ದು, ಸಮಗ್ರ ಅಧ್ಯಯನ ಮಾಡಿ ಸರಿಪಡಿಸುವಂತೆ ಒತ್ತಾಯಿಸಿದ್ದೇವೆ. ಹೆದ್ದಾರಿ ಸರಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ವ್ಯತ್ಯಾಸಗಳನ್ನ ಸರಿ ಮಾಡುವ ಕೆಲಸ ಆಗುತ್ತದೆ ಎಂದರು.

ಭರವಸೆ ಈಡೇರಿಸಲಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇವತ್ತು ಅವರು ಮಾಡಬೇಕಿರುವುದು ಕೊಟ್ಟ ಭರವಸೆ ಈಡೇರಿಸುವುದು. ಸಾಮಾನ್ಯ ಜನರ ಹೊಟ್ಟೆ ತುಂಬಿಸುವ ಆಶ್ವಾಸನೆ ಈಡೇರಿಸಬೇಕು. ಅದು ಬಿಟ್ಟು ಇಂತಹದನ್ನು ಇಟ್ಟುಕೊಂಡು ದಾರಿತಪ್ಪಿಸಬಾರದು ಎಂದು ತಿಳಿಸಿದರು.

ಕೇಳಿದವರಿಗೆಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಆಗಲ್ಲ. ತುಂಬಾ ಜನ ನಮಗೆ ಕೊಡಿ, ನಮಗೆ ಕೊಡಿ ಅಂತ ಕೇಳುತ್ತಿರುತ್ತಾರೆ. ಹಾಗಂತ ಎಲ್ಲರಿಗೂ ಕೊಡೋಕೆ ಆಗೋದಿಲ್ಲ. ರಾಜಕೀಯ ವಿದ್ಯಮಾನಗಳು, ವ್ಯತ್ಯಾಸಗಳನ್ನ ಸರಿಮಾಡುವಂತ ಒಬ್ಬ ಯಶಸ್ವಿ ಅಧ್ಯಕ್ಷನನ್ನ ಪಕ್ಷ ಕೊಡಬಹುದು. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ವ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೊಂದಾಣಿಕೆ ಕೇಂದ್ರದ ನಾಯಕರಿಗೆ ಬಿಟ್ಟದ್ದು
ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎಂಬ ವಿಚಾರ ಕೇಂದ್ರದ ಬಿಜೆಪಿ ನಾಯಕರಿಗೆ ಬಿಟ್ಟದ್ದು, ಲೋಕಸಭಾ ಎಲೆಕ್ಷನ್ ನ ಸ್ಟ್ರ್ಯಾಟರ್ಜಿ ಕೇಂದ್ರ ತೆಗೆದುಕೊಳ್ಳುತ್ತೆ.ಇಡೀ ದೇಶದ ರಾಜಕಾರಣ ನೋಡಿಕೊಂಡು ಹೊಂದಾಣಿಕೆ ಬಗ್ಗೆ ಪಕ್ಷ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡುತ್ತೆ. ಕಳೆದ ಬಾರಿ ಓರ್ವ ಬೆಂಬಲಿತ ಅಭ್ಯರ್ಥಿ 26 ಮಂದಿ ಎಂಪಿಗಳು ಗೆದ್ದಿದ್ದಾರೆ. ಹೊಂದಾಣಿಕೆ ಅಗತ್ಯ ಇದ್ಯಾ ಎಂದು ಪ್ರಶ್ನೆ ಮಾಡೋದು ಸರಿಯಿದೆ. ಪಕ್ಷ ನಮ್ಮನ್ನ ಆ ಬಗ್ಗೆ ಕೇಳುತ್ತೆ. ಕೇಳ್ದಾಗ ನಾವು ಅದರ ಬಗ್ಗೆ ಮಾತನಾಡ್ತೇವೆ ಎಂದರು.

ವಿಧಾನ ಸಭಾ ಚುನಾವಣೆ ಸೋಲಿಗೆ ಹೊಸ ಪ್ರಯೋಗ ಕಾರಣ, ಹೊಸ ಪ್ರಯೋಗದಲ್ಲಿ ನಾವು ಯಶಸ್ಸು ಕಾಣಲಿಲ್ಲ. ಗುಜರಾತ್, ಯುಪಿಯಲ್ಲಿ ನಡೆದ ಪ್ರಯೋಗ ದಕ್ಷಿಣ ಭಾರತದಲ್ಲಿ ನಡೆಯಲಿಲ್ಲ. ಅದು ನೂರಕ್ಕೆ ನೂರು ಸತ್ಯವಾಗಿದೆ ಎಂದರು.

ಯಡಿಯೂರಪ್ಪರನ್ನ ಬಿಜೆಪಿ ಹೈಕಮಾಂಡ್ ಕಡೆಗಣನೆ ಮಾಡಿದೆಯಾ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಅತ್ಯುನತ್ತ ಸ್ಥಾನಕ್ಕೆ ಯಡಿಯೂರಪ್ಪರನ್ನ ಆಯ್ಕೆ ಮಾಡಿದೆ. ಸೆಂಟ್ರಲ್ ಪಾರ್ಲಿಮೆಂಟ್ ಬೋರ್ಡ್ ನ ಸದಸ್ಯರನ್ನಾಗಿ ಮಾಡಿದೆ. ಪಕ್ಷ ಯಡಿಯೂರಪ್ಪರನ್ನ ನೆಗ್ಲೇಟ್ ಮಾಡುವ ಪ್ರಶ್ನೆಯೇ ಇಲ್ಲ.
ಆದ್ರೆ ನಮ್ಮಲ್ಲಿ ಬಿರುಕಿದೆ ಎಂದು ಬಿಂಬಿಸಲು ವಿರೋಧಿಗಳು ಯಶಸ್ವಿಯಾದ್ರು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!