ಡಾ.ಬಿ.ಆರ್.ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಾಗಲ್ಲದೆ, ಸಮಾಜದ ಶಕ್ತಿಯಾಗಿ ಗೋಚರಿಸಿದ್ದಾರೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 66 ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಭಾರತದಲ್ಲಿ ಸಂವಿಧಾನವನ್ನು ಜನರು ಗೌರವಿಸಿ ಪಾಲನೆ ಮಾಡುತ್ತಾರೆ, ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಸಂವಿಧಾನ ಶಿಲ್ಪಿಯಾಗಷ್ಟೇ ಅಲ್ಲದೆ ಅರ್ಥಶಾಸ್ತ್ರಜ್ಞರಾಗಿ ವಿವಿಧ ಕ್ಷೇತ್ರಗಳಲ್ಲೂ ಅಪಾರವಾದ ಜ್ಞಾನ ಹೊಂದಿದ್ದರು. ಪುಸ್ತಕಗಳ ಬಗ್ಗೆ ಅವರಿಗಿದ್ದ ಪ್ರೀತಿ ನಮ್ಮೆಲ್ಲರಿಗೂ ಅನುಕರಣೀಯ ಎಂದರು.
ಅಂಬೇಡ್ಕರ್ ಅವರು ಮಹಾನ್ ಮೇಧಾವಿ. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಾರ್ಗವನ್ನು ಪಾಲಿಸಬೇಕು, ಅವರ ಧ್ಯೇಯಗಳನ್ನು ಪಾಲಿಸಿ ಅವರಿಗೆ ಗೌರವವನ್ನು ಸೂಚಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ, ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಇಡೀ ದೇಶದ ಶೋಷಿತ ಸಮುದಾಯಕ್ಕೆ ದೀನ, ದುರ್ಬಲರಿಗೆ, ನೊಂದವರಿಗೆ, ಸಮಾನತೆಯ ತತ್ವವನ್ನು ಎತ್ತಿ ಹಿಡಿದು ಎಲ್ಲರೂ ಇದನ್ನು ಪಾಲನೆ ಮಾಡಬೇಕೆಂಬ ಬೃಹತ್ ಸಂವಿಧಾನವನ್ನು ರಚನೆ ಮಾಡಿ ನಮ್ಮೆಲ್ಲರಿಗೂ ನೀಡಿದ್ದಾರೆ ಡಾ: ಬಿ.ಆರ್. ಅಂಬೇಡ್ಕರ್ ಅವರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಸರಸ್ವತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.




