Saturday, May 18, 2024

ಪ್ರಾಯೋಗಿಕ ಆವೃತ್ತಿ

ರೈತರು ಸಂಕಷ್ಟದಲ್ಲಿದ್ದಾರೆ ಚಾಮುಂಡಿ ಅನುಗ್ರಹದಿಂದ ಮಳೆಯಾಗಲಿ: ಸಿಎಂ ಸಿದ್ದರಾಮಯ್ಯ

ಈ ಬಾರಿ ಮಳೆಯಿಲ್ಲದೆ ರಾಜ್ಯದ ಜನತೆ ಕಂಗಾಲಾಗಿದ್ದಾರೆ, ಬರಗಾಲ ತಾಂಡವವಾಡುತ್ತಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ತಾಯಿ ಚಾಮುಂಡಿ ದೇವಿಯ ಅನುಗ್ರಹದಿಂದ ಮಳೆಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಾರ್ಥನೆ ಸಲ್ಲಿಸಿದರು.

ಮೈಸೂರಿನಲ್ಲಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಅಧಿಕೃತ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈಸೂರು ದಸರಾ ವಿಶ್ವವಿಖ್ಯಾತ ಉತ್ಸವ. ದಸರಾ ಎಂದರೆ ನಮಗೆ ನಾಡಹಬ್ಬ. ಜನರ ಹಬ್ಬವಿದು, ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಈ ಬಾರಿ ಆಚರಿಸಬೇಕೆಂದು ನಮ್ಮ ಸರ್ಕಾರ ಅಂದುಕೊಂಡಿತ್ತು. ಆದರೆ ರಾಜ್ಯದಲ್ಲಿ ಬರದ ಛಾಯೆಯಿಂದ ಅದ್ದೂರಿಯಾಗಿ ಆಚರಿಸದೆ ಸಂಪ್ರದಾಯಬದ್ಧವಾಗಿ ಆಚರಿಸಿದ್ದೇವೆ ಎಂದರು.

ದಸರಾ ನೋಡಲು ದೇಶ ವಿದೇಶಗಳಿಂದ ಜನರು ಬಂದಿದ್ದಾರೆ. ಈ ವರ್ಷ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಜನರು ಉತ್ಸಾಹ, ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ. ವಿಜಯನಗರ ಅರಸರು ಆಚರಿಸುತ್ತಿದ್ದ ಈ ದಸರಾ ಉತ್ಸವವನ್ನು ಅವರು ಗತಿಸಿದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಲ್ಲಿ ಆಚರಣೆ ಆರಂಭಿಸಿದರು. ನಂತರ ಮೈಸೂರು ರಾಜಧಾನಿಗೆ ದಸರಾ ಆಚರಣೆ ವರ್ಗಾವಣೆಗೊಂಡಿತು. ರಾಜರ ಆಳ್ವಿಕೆ ಕಾಲದಲ್ಲಿ ರಾಜ ಮಹಾರಾಜರು ಅಂಬಾರಿಯಲ್ಲಿ ಮೆರವಣಿಗೆ ಸಾಗುತ್ತಿದ್ದರು.

ಈಗ ಪ್ರಜಾಪ್ರಭುತ್ವ ಸರ್ಕಾರ ಬಂದ ಮೇಲೆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಕೂರಿಸಿ ಅದಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭವಾಯಿತು. ವಿಜಯದಶಮಿ ದಿನ ಜಂಬೂಸವಾರಿಯಲ್ಲಿ ಎಲ್ಲಾ ಜಿಲ್ಲೆಗಳಿಂದ ಸ್ತಬ್ಧಚಿತ್ರಗಳು ಬರುತ್ತವೆ. ಈ ವರ್ಷದ ವಿಶೇಷ ಸರ್ಕಾರದ ಗ್ಯಾರಂಟಿ ಯೋಜನೆಗಳ ಸ್ತಬ್ಧಚಿತ್ರಗಳ ಪ್ರದರ್ಶನವಿದೆ ಎಂದರು.

ದಸರಾ ನಾಡಹಬ್ಬವಾಗಿರುವುದರಿಂದ ಜನರ ಹಬ್ಬವಾಗಿ ಆಚರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಇವತ್ತು ಪಂಜಿನ ಕವಾಯತು ಪ್ರದರ್ಶನ ಇದೆ, ಜನರು ಖುಷಿಯಿಂದ ಭಾಗವಹಿಸುತ್ತಿದ್ದಾರೆ. ಮಹಿಳೆಯರು ಈ ಬಾರಿ ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು. ದಸರಾ ಪ್ರಾಧಿಕಾರ ರಚನೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ದಸರಾ ಮೆರವಣಿಗೆಯಲ್ಇ ಸ್ತಬ್ದಚಿತ್ರ, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಈ‌ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಿದ್ದವು, ರಾಜ್ಯಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ್ರಗಳು ಸಹ ಇದ್ದವು.

ಈ ವೇಳೆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆ.ಹೆಚ್​.ಮುನಿಯಪ್ಪ, ವೆಂಕಟೇಶ್​, ಶಿವರಾಜ್​ ತಂಗಡಗಿ, ಕೆ.ಎನ್​.ರಾಜಣ್ಣ, ಭೈರತಿ ಸುರೇಶ್​ ಹಾಗೂ ಸಂಸದ ಪ್ರತಾಪ್​ ಸಿಂಹ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!