ಮಂಡ್ಯ ತಾಲ್ಲೂಕಿಗೆ ಸೀಮಿತವಾಗಿದ್ದ ಶಾಮಿಯಾನ ಮಾಲೀಕರ ಸೌಹಾರ್ದ ಸಹಕಾರಿ ಬ್ಯಾಂಕ್, ಪ್ರಸ್ತುತ ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಗಿದ್ದು, ಜಿಲ್ಲಾ ಶಾಮಿಯಾನ ಹಾಗೂ ಶಾಮಿಯಾನಕ್ಕೆ ಸಂಬಂಧಿಸಿದ ಇತರೆ ವೃತ್ತಿ ಬಾಂಧವವರು ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರಾಗುವಂತೆ ಬ್ಯಾಂಕಿನ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮಿಯಾನ ಅಂಗಡಿ ಮಾಲೀಕರು, ಕಲ್ಯಾಣ ಮಂಟಪದ ಮಾಲೀಕರು, ದೀಪಾಲಂಕಾರ, ಧ್ವನಿವರ್ಧಕ, ಹೂವಿನ ಅಲಂಕಾರ, ಅಡುಗೆ ಭಟ್ಟರು, ಅರ್ಕೇಸ್ಟ್ರಾ ಕಲಾವಿದರು, ಛಾಯಾಚಿತ್ರ ಗ್ರಾಹಕರು, ಬಿಗ್ ಪ್ರಿಂಟ್ ಮಾಲೀಕರು, ಬ್ಯೂಟಿ ಪಾರ್ಲರ್ ಮಾಲೀಕರು ಷೇರುದಾರರಾಗಲು ಅರ್ಹರಾಗಿದ್ದಾರೆ ಎಂದರು.
ಶಾಮಿಯಾನ ಅಂಗಡಿ ಮಾಲೀಕರು ಹಾಗೂ ಸಂಬಂಧಿಸಿದ ವೃತ್ತಿ ಬಾಂಧವರೆಲ್ಲರನ್ನು ಒಟ್ಟುಗೂಡಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಘಿಕವಾಗಿ ಸದೃಢಗೊಳಿಸುವ ಸದುದ್ದೇಶದಿಂದ ಸಂವಿಧಾನಬದ್ಧವಾದ ಸಹಕಾರ ಬ್ಯಾಂಕನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಯಲ್ಲಿ ಷೇರುದಾರರಿಗೆ ಡಿವಿಡೆಂಟ್ ನೀಡುವುದರ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ವ್ಯಾಪಾರ ಸಾಲ ಸೌಲಭ್ಯ ನೀಡಲಾಗುವುದು. ಉಳಿತಾಯ ಠೇವಣಿ (SB), ನಿಶ್ಚಿತ ದೇವಣಿ (FD) ಮತ್ತು ಪಿಗ್ಮಿ ಠೇವಣಿ (PD) ಗಳ ಸೌಲಭ್ಯವೂ ಕೂಡ ಇರುತ್ತದೆ ಎಂದು ವಿವರಿಸಿದರು.
ಒಂದು ಷೇರಿಗೆ ಎಲ್ಲಾ ಶುಲ್ಕಗಳು ಸೇರಿ ₹ 2500 ಆಗಲಿದ್ದು, ಆಸಕ್ತರು ಷೇರುಗಳನ್ನು ಪಡೆದುಕೊಳ್ಳಬೇಕು. ಅಲ್ಲದೇ ಬ್ಯಾಂಕಿನ ವತಿಯಿಂದ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಗೆ ನೋಂದಣಿ ಪ್ರಾರಂಭವಾಗಿದ್ದು, ಇದರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ 2023 ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ಬ್ಯಾಂಕಿನ ನಿರ್ದೇಶಕರಾದ ಕೆ.ಶಂಕರ್, ಎನ್.ರಮೇಶ್, ವೈ.ಬಿ.ಚೇತನ್, ನಹೀಂಖಾನ್, ರವಿ ಹಾಗೂ ಬಸವರಾಜು ಉಪಸ್ಥಿತರಿದ್ದರು.




