Wednesday, November 18, 2026

ಪ್ರಾಯೋಗಿಕ ಆವೃತ್ತಿ

ಚೀನಾ ಮಿಲಿಟರಿ ಲಡಾಖ್‌ ಪ್ರವೇಶಿಸಿದೆ: ಸಂಜಯ್ ರಾವುತ್ ಸ್ಪೋಟಕ ಹೇಳಿಕೆ

ಗಡಿವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಕ್ಯಾತೆ ತೆಗೆದಿರುವ ಚೀನಾ, ವಿವಾದಾತ್ಮಕ ಪ್ರದೇಶವಾದ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಪ್ರದೇಶ ತನ್ನ ಭೂಭಾಗ ಎಂದು ಹೇಳಿಕೊಂಡಿದೆ. ಈ ಬಗ್ಗೆ ಶಿವಸೇನೆ (ಯುಬಿಟ) ಸಂಸದ ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವುತ್, ”ಲಡಾಖ್‌ನ ಪ್ಯಾಂಗಾಂಗ್ ಕಣಿವೆಗೆ ಚೀನಾ ಮಿಲಿಟರಿ ಪ್ರವೇಶಿಸಿದೆ ಎಂದು ಲಡಾಖ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ನಿಜವಾಗಿದೆ. ಕೇಂದ್ರ ಸರ್ಕಾರಕ್ಕೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿ” ಎಂದು ಮಂಗಳವಾರ ಸವಾಲು ಹಾಕಿದ್ದಾರೆ.

“>”ನಮ್ಮ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದರು. ಶಾಂತಿ ಕಾಪಾಡುವ ಬಗ್ಗೆ, ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿತ್ತು. ಆದರೆ, ಆ ಭೇಟಿ ಬಳಿಕವೂ ಚೀನಾ ಈ ನಕ್ಷೆ ಬಿಡುಗಡೆ ಮಾಡಿದೆ. ಲಡಾಖ್‌ನ ಹ್ಯಾಂಗಾಂಗ್ ಕಣಿವೆಯನ್ನು ಚೀನಾ ಪ್ರವೇಶಿಸಿದೆ ಎಂದು ರಾಹುಲ್ ಗಾಂಧಿ ಹೇಳಿರುವುದು ನಿಜವೆಂದು ಸಾಬೀತಾಗಿದೆ. ಚೀನಾ ಅರುಣಾಚಲವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ. ನಿಮಗೆ (ಕೇಂದ್ರ ಸರ್ಕಾರ) ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ” ಎಂದು ರಾವುತ್ ಒತ್ತಾಯಿಸಿದ್ದಾರೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಿರ್ದೇಶನದಂತೆ ನೈಸರ್ಗಿಕ ಸಂಪನ್ಮೂಲ ಸಚಿವಾಲಯವು 2023ರ ಆವೃತ್ತಿಯ ಅಧಿಕೃತ ನಕ್ಷೆಯನ್ನು ಸೋಮವಾರ ಬಿಡುಗಡೆ ಮಾಡಿದೆ. ಚೀನಾ ಬಿಡುಗಡೆ ಮಾಡಿದ ನಕ್ಷೆಯಲ್ಲಿ ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ತೋರಿಸಲಾಗಿದೆ. 1962ರ ಯುದ್ಧದಲ್ಲಿ ಅಕ್ಸಾಯ್ ಚಿನ್ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದು, ಅದೂ ತನ್ನ ದೇಶದ ಭಾಗವಾಗಿದೆ ಎಂದು ಚೀನಾ ಹೇಳಿಕೊಂಡಿದೆ. ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಸಹ ಹೊಸ ನಕ್ಷೆಯಲ್ಲಿ ಚೀನಾದ ಭಾಗವೆಂದು ಬಿಂಬಿಸಲಾಗಿದೆ.

ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸಂಪೂರ್ಣ ಹದೆಗೆಟ್ಟಿದೆ. ಇದನ್ನು ಸರಿಪಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್ ಅವರು ದಕ್ಷಿಣ ಆಫ್ರಿಕಾದ ಜೊಹಾನೆಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದರು. ಗಡಿಯಲ್ಲಿ ಉದ್ವಿಗ್ನತೆ ಶಮನ ಮತ್ತು ಸೇನಾಪಡೆಗಳನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಿರ್ದೇಶನದಂತೆ ನೈಸರ್ಗಿಕ ಸಂಪನ್ಮೂಲ ಸಚಿವಾಲಯವು 2023ರ ಆವೃತ್ತಿಯ ಅಧಿಕೃತ ನಕ್ಷೆಯ ಮೂಲಕ ಕ್ಯಾತೆ ತೆಗೆದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ