Wednesday, September 18, 2024

ಪ್ರಾಯೋಗಿಕ ಆವೃತ್ತಿ

ಸಂಕೀರ್ತನಾ ಯಾತ್ರೆ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ : ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ


  • ಸೌಹಾರ್ದ ನೆಲೆ ಮಂಡ್ಯದಲ್ಲಿ ಕೋಮು ದ್ವೇಷ ಹರಡುವ ಹುನ್ನಾರ 

  • ಅಸಹನೀಯ ವಾತಾವರಣ ಸೃಷ್ಟಿಗೆ ಸಂಘ ಪರಿಹಾರದ ಯತ್ನ : ಆರೋಪ

ಶ್ರೀರಂಗಪಟ್ಟಣದಲ್ಲಿ ಇತ್ತೀಚಿಗೆ ನಡೆದ ಹನುಮಮಾಲೆ ಸಂಕೀರ್ತನಾ ಯಾತ್ರೆಯ ಸಂದರ್ಭದಲ್ಲಿ, ಪೂರ್ವಯೋಜಿತ ನಿರ್ಧಾರದಂತೆ ಗಲಭೆ ಎಬ್ಬಿಸುವ ಹುನ್ನಾರ ಮಾಡಲಾಗಿತ್ತು, ಇಂತಹ ಕೋಮು ಶಾಂತಿ ಕದಡುವ ಹುನ್ನಾರಗಳನ್ನು ಜಿಲ್ಲಾಡಳಿತ ನಿಯಂತ್ರಿಸುವಂತೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಸೋಮವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಾನ ಮನಸ್ಕರು, ಈ ಹಿಂದೆ ಹಲವು ಬಾರಿ ಸಂಕೀರ್ತನಾ ಯಾತ್ರೆಗಳು ನಡೆದಿವೆ. ಆದರೆ ಬಿಜೆಪಿ ಸರ್ಕಾರ ಬಂದಾಗಿನಿಂದ ಈ ಯಾತ್ರೆ  ಬೇರೆಯೇ ಸ್ವರೂಪ ಪಡೆದುಕೊಂಡಿದೆ. ಆ ಕಾರಣಕ್ಕೆ ಯುವಕನೊಬ್ಬನ ತಲೆಗೆ ಧರ್ಮದ ಆಫೀಮನ್ನು ತುಂಬಿ ಮುಸ್ಲಿಂ ಪಂಗಡದ ಮನೆಯ ಮೇಲೆ ದಾಳಿ ಮಾಡಿಸಲಾಗಿತ್ತು ಎಂದು ಪ್ರತಿಭಟನಕಾರರು ಆರೋಪಿಸಿದರು.

ಸಂಘ ಪರಿವಾರದ ಈ ಕುಕೃತ್ಯಗಳಿಗೆ ತಡೆ ಹಾಕದ ಸರ್ಕಾರ

ಸೌಹಾರ್ದ ನೆಲವಾದ ಮಂಡ್ಯ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ಅಸಹನೀಯ ವಾತಾವರಣ ಸೃಷ್ಟಿ ಮಾಡುವ ಹೇಯ ಕೃತ್ಯಕ್ಕೆ ಇಳಿದಿವೆ. ಸಂಘ ಪರಿವಾರದ ಈ ಕುಕೃತ್ಯಗಳಿಗೆ ಆಳುವ ಬಿಜೆಪಿ ಸರ್ಕಾರ ತನು ಮನ ಧನವನ್ನು ಭರಪೂರವಾಗಿ ಫೀಡ್ ಮಾಡುತ್ತಾ, ಪರಿವಾರದ ಸಂಘಟನೆಗಳು ಎಸಗುವ ಮನಷ್ಯನ ವಿರೋಧಿ ಕೃತ್ಯಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ದೂರಿದರು.

nudi karnataka.com

ಮಂಡ್ಯ ನೆಲ ಹಿಂದಿನಿಂದಲೂ ಸೌಹಾರ್ದ ನೆಲೆಯಾಗಿ, ಇಡೀ ದೇಶಕ್ಕೆ ಮಾದರಿಯಾಗಿ ನಡೆದುಕೊಂಡು ಬಂದಿದೆ. ಇಂತಹ ಸೌಹಾರ್ದ ಭೂಮಿಯನ್ನು ಕೋಮು ಸಂಘರ್ಷಕ್ಕೆ ನೂಕಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ರೀತಿ ಮತ್ತೊಂದು ಪ್ರಯೋಗ ಶಾಲೆ ಮಾಡಿಕೊಳ್ಳಲು ಸಂಘ ಪರಿವಾರದ ಮನುಷ್ಯ ವಿರೋಧಿ ಸಂಘಟನೆಗಳು, ನೇರಾನೇರ ಯತ್ನಿಸುತ್ತಿರುವ ಈ ಹೊತ್ತಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕಂಡೂ ಕಾಣದಂತೆ ಇರುವುದು ಅಘಾತಕಾರಿ ವಿಷಯ ಎಂದು ಕಿಡಿಕಾರಿದರು.

ಐತಿಹಾಸಿಕವಾಗಿ ಮತ್ತು ಚಾರಿತ್ರಿಕವಾಗಿ ತನ್ನದೇ ದೊಡ್ಡತನ ಉಳಿಸಿಕೊಂಡು ಬಂದಿರುವ ಶ್ರೀರಂಗಪಟ್ಟಣ, ಜಾಗತಿಕ ಪ್ರವಾಸೋದ್ಯಮದಲ್ಲಿ ತನ್ನದೇ ಸ್ಥಾನಮಾನ ಗಳಿಸಿಕೊಂಡು ಪ್ರತಿ ವರ್ಷ ಲಕ್ಷ ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗೆಯೇ ಸಾವಿರ ಸಾವಿರ ಇತಿಹಾಸ ತಜ್ಞರ ಸಂಶೋಧನಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಂತಹ ಐತಿಹಾಸಿಕ ಮತ್ತು ಚಾರಿತ್ರಿಕ ಜಾಗವನ್ನು ಮಂದಿರ, ಮಸೀದಿಯ ಹೆಸರಲ್ಲಿ ಕೋಮುದ್ವೇಷ ಹೆಸರಿನಲ್ಲಿ ಹದಗೆಡಿಸಿ ಜಿಲ್ಲೆಗೆ ಮಸಿ ಬಳಿಯುವ ಕೆಲಸ ಮಾಡಲು ಸಂಘ ಪರಿವಾರ ಹಾಗೂ ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.

ಮದ್ಯ ಕುಡಿದು ಬಂದಿದ್ದ ಐವರು ಯುವಕರು 

ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ಐದು ಮಂದಿ ಹದಿಹರೆಯದ ಯುವಕರು ಮಸೀದಿಗೆ ನುಗ್ಗಲು ಯತ್ನಿಸಿದ್ದರು. ಇವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಐದೂ ಜನರೂ ಮದ್ಯಪಾನ ಮಾಡಿದ್ದು ದೃಢವಾಗಿತ್ತು. ಅಂದರೆ ಸಂಘ ಪರಿವಾರದ ಸಂಘಟನೆಗಳ ಮುಂಚೂಣಿಯಲ್ಲಿರುವ ಅವಕಾಶವಾದಿ ಜನ, ಅಮಾಯಕ ಯುವಕರಿಗೆ ಮದ್ಯ ಕುಡಿಸಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂಬುದು ಸಾಬೀತಾಗುತ್ತದೆ ಎಂದು ಆರೋಪಿಸಿದರು.

ಯುವ ಸಮೂಹವನ್ನು ಕೋಮುದ್ವೇಷಕ್ಕೆ ಬಲಿ ಕೊಡಲು ಯತ್ನಿಸುತ್ತಿರುವುದನ್ನು ಇದು ಸಾಕ್ಷಿಕರಿಸುತ್ತಿವೆ. ಸಂಘ ಪರಿವಾರದ ಈ ಎಲ್ಲಾ ತಂತ್ರಗಳು, ಪೊಲೀಸ್‌ ವ್ಯವಸ್ಥೆಗೆ ಗೊತ್ತಿದ್ದರೂ, ಮುಂಜಾಗ್ರತೆ ವಹಿಸದೇ ಮತ್ತು ಸೌಹಾರ್ದ ಹಾಳುಗೆಡುವವ ಇಂತಹ ಯಾತ್ರೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಅಸಹನೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿರುವವರಿಗೆ ಸಹಕಾರಿಯಾಗುವಂತೆ ವಾತಾವರಣ ನಿರ್ಮಿಸುತ್ತಿದೆ ಎಂದು ದೂರಿದರು.

ಎಲ್ಲಾ ಧಾರ್ಮಿಕ ಸ್ಥಳಗಳಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು

1991ರ ಧಾರ್ಮಿಕ ಕಾಯ್ದೆಯು ದೇಶದ ಎಲ್ಲಾ ಧಾರ್ಮಿಕ ಸ್ಥಳಗಳಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೇಳುತ್ತದೆ. ಹೀಗಿದ್ದರೂ ಒಂದು ಧಾರ್ಮಿಕ ಸ್ಥಳಕ್ಕೆ ನುಗ್ಗಲೆತ್ನಿಸುವುದು ಮತ್ತು ಗಲಭೆಗೆ ಪ್ರಚೋದಿಸುವಂತ  ಚಟುವಟಿಕೆಗಳನ್ನು ಮಾಡುವುದು, ಸಂವಿಧಾನದ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಲ್ಲದೇ ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ ಎಂಬ ಧಾರ್ಮಿಕ ಸ್ಥಳದ ಮೇಲೆ ಎರಗುವುದೂ ಕೂಡ ಸ್ಪಷ್ಟವಾಗಿ ಈ ದೇಶದ ಕಾನೂನಿನ ಉಲ್ಲಂಘನೆಯಾಗಿದೆ. ಈ ಎಲ್ಲವನ್ನೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮನಗಂಡು, ಮುಂದಿನ ದಿನಗಳಲ್ಲಿ ಇಂತಹ ಧಾರ್ಮಿಕ ಅವಘಡಗಳು ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಭೂಮಿಗೌಡ, ವಕೀಲರಾದ ಚೀರನಹಳ್ಳಿ ಲಕ್ಷ್ಮಣ್, ನದೀಂ, ಮುಖಂಡರಾದ ಗಂಜಾಂ ರವಿಚಂದ್ರ, ಹೊನ್ನಪ್ಪ, ಬಿ.ಎಸ್.ಚಂದ್ರಶೇಖರ್, ಪಾಂಡು, ವೆಂಕಟೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!