Sunday, March 3, 2024

ಪ್ರಾಯೋಗಿಕ ಆವೃತ್ತಿ

ಜೈಲಿಗೆ ಹೋಗಿ ಬಂದವರಿಗೆ ಜೈಕಾರ ಅಪಾಯಕಾರಿ ಬೆಳವಣಿಗೆ : ಸಂತೋಷ್ ಹೆಗಡೆ

ಈ ಹಿಂದೆ ಕಾರಣಾಂತರಗಳಿಂದ ಜೈಲಿಗೆ ಹೋಗಿ ಬಂದವರ ಕುಟುಂಬವನ್ನು ಜನರು ಕೀಳಾಗಿ ನೋಡುತ್ತಿದ್ದರು ಆದರೆ, ಪ್ರಸ್ತುತ ಜೈಲಿಗೆ ಹೋಗಿ ಬರುವವರಿಗೆ ಹಾರ ತುರಾಯಿ ಹಾಕಿ, ಜೈಕಾರ ಹಾಕಿ ಅಭಿನಂದಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ಎಸ್.ಬಿ.ಎಜುಕೇಷನ್ ಟ್ರಸ್ಟ್ ಮಾಂಡವ್ಯ ಶಿಕ್ಷಣ ಮಹಾ ವಿದ್ಯಾಲಯದ ವತಿಯಿಂದ ನಡೆದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಸಿ ಅವರು ಮಾತನಾಡಿದರು.

ಜೀಪ್ ಹಗರಣದಿಂದ ಕಲ್ಲಿದ್ದಲು ಹಗರಣಗಳವರೆಗೆ ಉದಾಹರಣೆ ನೀಡಿದ ಸಂತೋಷ್ ಹೆಗ್ಡೆ ಅವರು ಸರ್ಕಾರ 1 ರೂ. ಅಭಿವೃದ್ಧಿಗೆ ನೀಡಿದರೆ ಕೊನೆ ಹಂತಕ್ಕೆ 15 ಪೈಸೆ ಮಾತ್ರ ತಲುಪಲಿದೆ ಎಂದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಬಹಿರಂಗವಾಗಿ ಹೇಳಿದ್ದರು. ಈಗ ಭ್ರಷ್ಟಾಚಾರ ಮಿತಿ ಮೀರಿದೆ, ಇಂದಿನ ಕಾಲಘಟ್ಟದಲ್ಲಿ ಸರ್ಕಾರ 100 ರೂ.ನೀಡಿದರೆ 15 ಪೈಸೆಯಷ್ಟೇ ಫಲಾನುಭವಿಗಳಿಗೆ ತಲುಪುತ್ತಿದೆ. ಇದನ್ನು ನಿಯಂತ್ರಿಸಿದರೆ ಮಾತ್ರ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಮತದಾರನೇ ಮುಖ್ಯ. ಮತದಾರರ ಕೈಯಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಿದೆ. ಪ್ರತಿಯೊಬ್ಬ ಮತದಾರರು ಉತ್ತಮ ವ್ಯಕ್ತಿಯನ್ನ ಆಯ್ಕೆ ಮಾಡಬೇಕು. ಚುನಾವಣೆ ಬರುತ್ತಿದೆ, ಐಎಎಸ್ ಐಪಿಎಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲುತ್ತಿದ್ದಾರೆ. ಆದ್ದರಿಂದ ಇವರು ಜನತಾಸೇವೆಗೆ ಬಂದಿದ್ದಾರಾ ಅಥವಾ ಬೇರೆ ಉದ್ದೇಶಕ್ಕೆ ಬಂದಿದ್ದಾರಾ ಎಂದು ನೋಡಿ ಮತದಾರರು ಮತ ಹಾಕಬೇಕು. ಜನರ ಹಿತಾಸಕ್ತಿ ಇರುವಂತ ಅಭ್ಯರ್ಥಿ ಆಯ್ಕೆಯಾದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಹೆಚ್ಚು ಓದಿ ದೊಡ್ಡ ಹುದ್ದೇಗೇರುವ ಆಕಾಂಕ್ಷೆ ಇರಬೇಕು. ಆ ಮೂಲಕ ಶ್ರೀಮಂತರಾಗುವುದು ತಪ್ಪಲ್ಲ. ಇನ್ನೊಬ್ಬರ ಜೇಬಿಗೆ, ಮತ್ತೊಬ್ಬರ ಹೊಟ್ಟೆಗೆ ಕೈ ಹಾಕಿ ಸಿರಿವಂತರಾಗಬೇಕಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ಸುಮಾರಾಣಿ, ಹೆಚ್.ಎಂ ಶ್ರೀನಿವಾಸ್ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!