Friday, November 20, 2026

ಪ್ರಾಯೋಗಿಕ ಆವೃತ್ತಿ

ಹೈಟೆಕ್ ವೇಶ್ಯಾವಾಟಿಕೆ ದಂಧೆಯಿಂದ ಕೋಟ್ಯಾಂತರ ರೂ. ಗಳಿಸಿದ ಸ್ಯಾಂಟ್ರೋ ರವಿ ಯಾರು ಗೊತ್ತಾ?

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಬಾಂಬೆಗೆ ಹಾರಿದವರಿಗೆ ಸಕಲ ವ್ಯವಸ್ಥೆ ಮಾಡಿದ್ದು ಸ್ಯಾಂಟ್ರೋ ರವಿ. ಬಿಜೆಪಿಯ ಪ್ರಭಾವಿ ಸಚಿವರ ಜೊತೆ ಸೇರಿ ವರ್ಗಾವಣೆ ದಂಧೆ ಮಾಡುತ್ತಿರುವ ಸ್ಯಾಂಟ್ರೋ ರವಿ ಎಂದೆಲ್ಲಾ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ ಈ ಸ್ಯಾಂಟ್ರೋ ರವಿ ಬಗ್ಗೆ ಸಿಕ್ಕಿರುವ ಮಾಹಿತಿ ಇಲ್ಲಿದೆ.

ಸ್ಯಾಂಟ್ರೋ ರವಿ ಹೆಸರು 15-20 ವರ್ಷಗಳ ಹಿಂದೆಯೇ ವೇಶ್ಯಾವಾಟಿಕೆ ದಂಧೆಯಲ್ಲಿ ಕೇಳಿಬಂದಿತ್ತು. ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಈತ ಬಡತನ, ಅಸಹಾಯಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ.

ಸರ್ಕಾರಿ ಅಧಿಕಾರಿಗಳು, ಶ್ರೀಮಂತ ವ್ಯಕ್ತಿಗಳು ಈತನ ಗಿರಾಕಿಗಳು 

ಸರ್ಕಾರಿ ಅಧಿಕಾರಿಗಳು, ಶ್ರೀಮಂತ ವ್ಯಕ್ತಿಗಳು ಈತನ ಗಿರಾಕಿಗಳಾಗಿದ್ದರಿಂದ ಈತನನ್ನು ಮುಟ್ಟುವ ಧೈರ್ಯ ಪೋಲಿಸರಿಗಿರಲಿಲ್ಲ. ನಂತರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರವರು ಈತನ ಅಡ್ಡೆಯ ಮೇಲೆ ರೈಡ್ ಮಾಡಿಸಿ ಈತನ ಮೇಲೆ ಕೇಸು ದಾಖಲಾಗುವಂತೆ ಮಾಡಿದ್ದರು. ಮೈಸೂರಿನ ಪೋಲಿಸ್ ಆಯುಕ್ತರಾಗಿದ್ದ ಪ್ರವೀಣ್ ಸೂದ್ ಅವರು ಈತನನ್ನು ಬಂಧಿಸಿ 11 ತಿಂಗಳು ಜೈಲಿಗೆ ಅಟ್ಟಿದ್ದರು. ನಂತರ ಅವನ ಹೆಸರು ಅಷ್ಟಾಗಿ ಕೇಳಿ ಬಂದಿರಲಿಲ್ಲ. ಇಂದು ಈತನ ಪತ್ನಿ ಇವನ ಮೋಸ, ಕಿರುಕುಳ, ಪೈಶಾಚಿಕತೆ ಬಗ್ಗೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ನೀಡಿರುವುದು ಹಾಗೂ ಎಚ್.ಡಿ‌.ಕುಮಾರಸ್ವಾಮಿ ಬಿಜೆಪಿ ಸಚಿವರ ಜೊತೆ ಸೇರಿ ವರ್ಗಾವಣೆ ದಂಧೆ ಮಾಡುತ್ತಿರುವ ಬಗ್ಗೆ ಆರೋಪಿಸಿದ ನಂತರ ಸ್ಯಾಂಟ್ರೋ ರವಿ ಹೆಸರು ಮತ್ತೆ ಚಾಲ್ತಿಗೆ ಬಂದಿದೆ.

ಸ್ಯಾಂಟ್ರೋ ರವಿ ರಾಜಕಾರಣಿಗಳು, ಅಧಿಕಾರಿಗಳು, ವಿಧಾನಸೌಧ, ವಿಕಾಸಸೌಧ ಬಳಿ ಇವನ ಹೆಸರು ಕೇಳದೆ ಇರುವವರು ಯಾರು ಇಲ್ಲ. ಅತ್ಯಂತ ಹೈಟೆಕ್ ರೀತಿಯಲ್ಲಿ ಉತ್ತರ ಭಾರತ ಮತ್ತು ದೇಶದ ಇತರ ಭಾಗದಿಂದ ಹುಡುಗಿಯರನ್ನು ಕರೆಯಿಸಿ ವ್ಯವಹಾರ ಮಾಡುವ ಈತ, ಬಾಂಬೆಗೆ ಹೋದ ತಂಡಕ್ಕೆ ಸಕಲ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾನೆ. ಆಗ ಈತ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡಿದ್ದಲ್ಲದೆ, ಹಲವು ಸಚಿವರ ಬಳಿ ದುಡ್ಡು, ಗುತ್ತಿಗೆ, ವರ್ಗಾವಣೆ ದಂಧೆ ಮಾಡಿದ್ದಾನೆ ಎನ್ನುವ ಮಾತುಗಳಿವೆ.

ಸ್ಯಾಂಟ್ರೋ ರವಿ ವಿರುದ್ಧ ಪತ್ನಿ ದೂರು

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಸಹಾಯದಿಂದ ರವಿಯ ವಿರುದ್ಧ ಆತನ ಪತ್ನಿ ಮೈಸೂರಿನ ವಿಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಾಗಿದೆ.

ದಲಿತ ಹೆಣ್ಣು ಮಗಳನ್ನು ಅತ್ಯಾಚಾರಗೈದು, ಆಕೆಯ ನಗ್ನ ಪೋಟೋ ತೆಗೆದು ಬ್ಲಾಕ್ ಮೇಲ್ ಮಾಡಿ ಮದುವೆಯಾಗಿ, ನಂತರ ಆಕೆಯನ್ನು ಪರಪುರುಷರೊಂದಿಗೆ ಸಹಕರಿಸು ಎಂದು ಹೊಡೆದು, ಬಡಿದು ಪೈಶಾಚಿಕವಾಗಿ ನಡೆದು ಕೊಂಡಿರುವ ಬಗ್ಗೆ ಈತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ, ಪರಿಶಿಷ್ಟ ಜಾತಿ, ವರ್ಗದ ದೌರ್ಜನ್ಯ ಕಾಯಿದೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜ್ಞೆ ತಪ್ಪುವ ಔಷಧಿ ಬೆರೆಸಿದ ಜ್ಯೂಸ್ ಕುಡಿಸಿ ಅತ್ಯಾಚಾರ

ಎಫ್ಐಅರ್ ಪ್ರಕಾರ ಉದ್ಯೋಗ ಅರಸಿ ಬಂದಿದ್ದ ಯುವತಿಗೆ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿದ ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಮಾಡಿದ್ದ. ಅತ್ಯಾಚಾರ ಎಸಗಿದ ಬಳಿಕ ಆಕೆಯ ನಗ್ನ ಪೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದ. ಬ್ಲಾಕ್ ಮೇಲ್ ಗೆ ಹೆದರಿ ಅತ್ಯಾಚಾರಿಯನ್ನೇ ಯುವತಿ ಮದುವೆಯಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ನರಕ ತೋರಿಸಿದ ಕಿರಾತಕ.

ಹಿರಿಯ ಐಎಎಸ್ ಅಧಿಕಾರಿ ಜೊತೆ ಮಂಚ ಹಂಚಿಕೊಳ್ಳುವಂತೆ ಪತ್ನಿಗೆ ಒತ್ತಡ ಹೇರಿದ್ದ ಕಿರಾತಕ, ಒತ್ತಾಯಕ್ಕೆ ಮಣಿಯದಿದ್ದಾಗ ಆಕೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದ. ಸ್ಯಾಂಟ್ರೋ ರವಿಗೆ ಪ್ರಭಾವಿ ರಾಜಕಾರಣಿಗಳ ಜೊತೆ ನಂಟು ಇದ್ದು, ಸ್ಯಾಂಟ್ರೋ ರವಿ ಪ್ರಭಾವಕ್ಕೆ ಮಣಿದು ಈತನ ಪತ್ನಿ ಹಾಗೂ ಆಕೆಯ ತಂಗಿಯ ಮೇಲೆ ರಾಬರಿ ಕೇಸ್ ದಾಖಲಿಸಲಾಗಿತ್ತು. ಪತ್ನಿ ಹಾಗೂ ತಂಗಿ ಇಬ್ಬರನ್ನೂ ರಾಬರಿ ಕೇಸ್ ನಡಿ ಆತ ಜೈಲಿಗೆ ಕಳುಹಿಸಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ಹಾಗೂ ಆಕೆಯ ತಂಗಿ 23 ದಿನ ಕಳೆದಿದ್ದರು‌.

ಸಚಿವರ ಸಾಥ್

ರಾಜಕಾರಣಿಗಳ ಪ್ರಭಾವ ಬಳಸಿ ಪೊಲೀಸರು, ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೂ ಭಾಗಿಯಾಗುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ವರ್ಗಾವಣೆ ದಂಧೆ ಬಯಲು ಮಾಡಿರೋ ಆಡಿಯೋಗಳು ಕೂಡಾ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ

ಈ ಮೊದಲು ಪಿಂಪ್ ದಂಧೆ ನಡೆಸಿ ಕುಖ್ಯಾತನಾಗಿದ್ದ ಸ್ಯಾಂಟ್ರೋ ರವಿ, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಈ ಕೆಲಸದಿಂದಲೇ ಕುಖ್ಯಾತನಾಗಿರುವ ಸ್ಯಾಂಟ್ರೋ ರವಿ ಮೇಲೆ 10 ವರ್ಷಗಳ ಹಿಂದೆಯೇ ವೇಶ್ಯಾವಾಟಿಕೆ ದಂಧೆಯಡಿ ಮೈಸೂರಿನಲ್ಲಿ 10ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿತ್ತು. ಅಲ್ಲದೆ, ಈತನ ಆಟಾಟೋಪಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯಿದೆ ಬಳಕೆ ಮಾಡಲಾಗಿತ್ತು.

ಈಗ ಹೊರ ಬಿದ್ದಿರೋ ಆಡಿಯೋದಲ್ಲಿ ಎಡಿಜಿಪಿ ಸಲೀಂ ಹೆಸರು ಬಳಕೆಯಾಗಿದ್ದು, ಹೋಮ್ ಮಿನಿಸ್ಟರ್ ಸೇರಿದಂತೆ ಹಲವರ ಜೊತೆ ಫೋಟೋ, ವೀಡಿಯೊ ಮಾಡಿ ಸ್ಟೇಟಸ್ ಹಾಕಿಕೊಳ್ಳೋ ಖಯಾಲಿ ಆತನಿಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದ ರವಿ, ಸಚಿವರೇ ನನ್ನನ್ನು ಸರ್ ಎಂದು ಕರೆಯುತ್ತಾರೆಂದು ಇತರ ಅಧಿಕಾರಿಗಳಿಗೆ ಹೇಳಿದ ಆಡಿಯೋ ಕೂಡ ಬಯಲಾಗಿದೆ.

ರವಿಯ ಈ ಎಲ್ಲಾ ಅನ್ಯಾಯಗಳ ವಿರುದ್ಧ ಒಡನಾಡಿ ಸಂಸ್ಥೆ ಗಂಭೀರ ಆರೋಪ ಮಾಡಿದೆ. ಕೆಲವೇ ವರ್ಷಗಳಲ್ಲಿ ಸ್ಯಾಂಟ್ರೋ ರವಿ ನೂರಾರು ಕೋಟಿ ಅಸ್ತಿ ಸಂಪಾದನೆ ಮಾಡಿದ್ದಾನೆ. ಆತನನ್ನು ಮಟ್ಟ ಹಾಕುವಂತೆ ಮಹಿಳೆ ಪರ ಸಂಘಟನೆಗಳು ಆಗ್ರಹಿಸಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ