Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ವೋದಯ ಕರ್ನಾಟಕ ಪಕ್ಷದಿಂದ ಬೃಹತ್ ಬೈಕ್ ರ್‍ಯಾಲಿ : ಮಧುಚಂದನ್ ಪರ ಪ್ರಚಾರಕ್ಕೆ ಚಾಲನೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಘೋಷಿತ ಅಭ್ಯರ್ಥಿ ಎಸ್.ಸಿ. ಮಧುಚಂದನ್ ತಮ್ಮ ಜನ್ಮದಿನವಾದ ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದರು.

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಮೇಲುಕೋಟೆ ಕ್ಷೇತ್ರದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ರೈತಸಂಘದ ನಾಯಕರು ಹಾಗೂ ಕಾರ್ಯಕರ್ತರು ಅರ್ಕೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ಮಂಡ್ಯ ಕ್ಷೇತ್ರದ ಘೋಷಿತ ಅಭ್ಯರ್ಥಿ ಮಧುಚಂದನ್ ಜನ್ಮ ದಿನವಾದ ಇಂದಿನಿಂದಲೇ ಅಧಿಕೃತ ಪ್ರಚಾರ ಆರಂಭವಾಗಿದ್ದು, 500ಕ್ಕೂ ಹೆಚ್ಚು ಬೈಕ್ ಗಳಲ್ಲಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಮಧುಚಂದನ್ ಅವರಿಗೆ ಶುಭಾಶಯ ಕೋರಿ ರ್‍ಯಾಲಿಯಲ್ಲಿ ಪಾಲ್ಗೊಂಡರು.

ನಂತರ ಬೈಕ್ ರ್‍ಯಾಲಿಯು ಅರ್ಕೇಶ್ವರ ಸ್ವಾಮಿ ಸನ್ನಿಧಾನದಿಂದ ಗುತ್ತಲು ಬಡಾವಣೆ, ಸಕ್ಕರೆ ಕಾರ್ಖಾನೆ ವೃತ್ತದ ಮೂಲಕ ಕಾಳಿಕಾಂಬ ದೇವಸ್ಥಾನ, ಹೊಳಲು ಸರ್ಕಲ್, ಶಂಕರ ಮಠ, ಕಲ್ಲಹಳ್ಳಿ, ವಿ. ವಿ. ನಗರ, ನೂರಡಿ ರಸ್ತೆ, ಕರ್ನಾಟಕ ಬಾರ್ ಸರ್ಕಲ್, ವಿ.ವಿ‌ ರಸ್ತೆ, ಮಹಾವೀರ ವೃತ್ತ ಮೊದಲಾದ ಕಡೆ ಸಂಚರಿಸಿತು.

ಗುತ್ತಲು ಬಡಾವಣೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಕರ್ನಾಟಕದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ಮಧುಚಂದನ್, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಪ್ರಸನ್ನಗೌಡ ಮತ್ತಿತರರಿಗೆ ಕಾರ್ಯಕರ್ತರು ಬೃಹತ್ ಗಾತ್ರದ ಹೂಮಾಲೆಯನ್ನು ಹಾಕಿ, ಪುಷ್ಪ ವೃಷ್ಟಿಗೈದು, ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಿದರು. ಮಹಿಳೆಯರು ಮಧುಚಂದನ್ ಅವರನ್ನು ಬೆಲ್ಲದ ಆರತಿ ಬೆಳಗಿ ಸ್ವಾಗತಿಸಿದರು.

ಮಧುಚಂದನ್ ಅವರ ಜನ್ಮದಿನವಾದ ಇಂದು ಪ್ರಯುಕ್ತ ಗುತ್ತಲು ಬಡಾವಣೆಯಲ್ಲಿ ಸರ್ವೋದಯ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಮಧುಚಂದನ್ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಶುಭಾಶಯ ಸ್ವೀಕರಿಸಿದರು. ರೈತ ನಾಯಕರು ಜನರತ್ತ ಕೈಮುಗಿದು, ಮಧುಚಂದನ್ ಅವರನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರವಿಕುಮಾರ್, ಹಾಲಹಳ್ಳಿ ಮಹೇಶ್, ವಿಜಯ್ ಕುಮಾರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!