ಮಂಡ್ಯ ತಾಲ್ಲೂಕು ಬೇಲೂರಿನ ಸರ್ಕಾರಿ ಶಾಲೆಯ ಮಕ್ಕಳು ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿಯ ಮುಂದೆ ಇಂದು ಪ್ರತಿಭಟನೆ ನಡೆಸಿದರು.
ಬೇಲೂರು ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕಳೆದ ವರ್ಷವೇ ಹಣ ಮಂಜೂರಾಗಿತ್ತು.ಶಿಥಿಲವಾಗಿದ್ದ ಶೌಚಾಲಯ ಕೆಡವಿ ಯಾವುದೇ ಕಾಮಗಾರಿ ಮಾಡದೇ ಸ್ಥಗಿತಗೊಳಿಸಲಾಗಿತ್ತು.
ಈ ಕಾರಣದಿಂದ ಶಾಲೆಯ ಮಕ್ಕಳಿಗೆ ಶೌಚಾಲಯ ವ್ಯವಸ್ಥೆಯಿಲ್ಲದೆ, ಮನೆಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ಕೆಲವೊಮ್ಮೆ ಮನೆಯಲ್ಲಿ ಪೋಷಕರಿಲ್ಲದೆ ಕೆಲಸಕ್ಕೆ ಹೋಗಿರುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು.
ಮಕ್ಕಳು ಮನೆಗೆ ತೆರಳಿ ಬರುವಷ್ಟರಲ್ಲಿ ಸಾಕಷ್ಟು ಸಮಯವಾಗುತ್ತಿತ್ತು. ಇದರಿಂದ ಪಾಠಗಳನ್ನು ಸರಿಯಾಗಿ ಕಲಿಯಲು ಸಾಧ್ಯವಾಗುತ್ತಿರಲಿಲ್ಲ.ಮತ್ತೆ ಕೆಲವು ಮಕ್ಕಳು ಮನೆಗೆ ತೆರಳಿದರೆ, ಪುನಃ ಶಾಲೆಗೆ ಬರುತ್ತಿರಲಿಲ್ಲ.
ಶೌಚಾಲಯ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಇಂದು ಪ್ರತಿಭಟನೆ ಮಾಡುವ ಪರಿಸ್ತಿತಿ ಬಂದೊದಗಿದೆ. ಈ ಶಾಲೆಯಲ್ಲಿ 110 ಮಕ್ಕಳಿದ್ದು, ಈ ವಿಚಾರ ಎಸ್ ಡಿ ಎಂ ಸಿ ಯವರ ಗಮನಕ್ಕೆ ಬಂದು ಎರಡು- ಮೂರು ಬಾರಿ ಪಂಚಾಯಿತಿಗೆ ಅರ್ಜಿ ಕೊಟ್ಟಿದ್ದರೂ ಕೂಡ ಯಾವುದೇ ಫಲಕಾರಿಯಾಗಲಿಲ್ಲ.
ಇದರ ಬಗ್ಗೆ ಪಂಚಾಯಿತಿ ಪಿಡಿಓ ಅವರನ್ನು ಕೇಳಿದರೆ, ಅವರು ಕಛೇರಿಯಲ್ಲಿ ಇರುವುದಿಲ್ಲ, ಯಾವುದೋ ಟ್ರೈನಿಂಗ್ ಗೆ ಹೋಗಿದ್ದಾರೆ, ಕಳೆದು ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬರುತ್ತಿಲ್ಲ ಎಂದು ಎಸ್ ಡಿಎಂಸಿ ಸದಸ್ಯರು ಆರೋಪ ಮಾಡುತ್ತಾರೆ.
ಶಿಕ್ಷಣ ಇಲಾಖೆಯಿಂದ 2ಲಕ್ಷ ರೂ.ನರೇಗಾದಿಂದ 2.30 ಲಕ್ಷ ಅನುದಾನದಲ್ಲಿ ಆಗಬೇಕಾಗಿರುವ ಕಾಮಗಾರಿ ಕಳೆದ ವರ್ಷದಿಂದ ಆರಂಭವಾಗದೆ ಸ್ಥಗಿತವಾಗಿದ್ದು,ಕೂಡಲೇ ಶೌಚಾಲಯ ನಿರ್ಮಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯ ಸ್ಥಳಕ್ಕೆ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಶ್ರೀನಿವಾಸ್ ಆಗಮಿಸಿ, ನಾಳೆಯಿಂದ ಶೌಚಾಲಯದ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.