Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ವಸೂಲಿ : ಪ್ರತಿಭಟನೆ

ಶಾಲೆಯ ಅಭಿವೃದ್ಧಿಯ ಹೆಸರಿನಲ್ಲಿ ಪೋಷಕರಿಂದ ಹಣ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ(ಎಎಪಿ) ಮುಖಂಡರು ತಮಟೆ ಭಾರಿಸುವ ಚಳುವಳಿ ಮೂಲಕ ಸರ್ಕಾರದ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಸರ್ಕಾರದ ಧೋರಣೆ ಖಂಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ವೆಂಕಟೇಶ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದ್ದು, ಬಡ ವಿದ್ಯಾರ್ಥಿಗಳ ಪೋಷಕರಿಂದ ಹಣ ವಸೂಲಿ ಮಾಡಿ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ದೂರಿದರು.

ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಅವೈಜ್ಞಾನಿಕ ಆದೇಶದಿಂದ ಶೋಷಿತ ವರ್ಗವು ಮತ್ತಷ್ಟು ಶೋಷಿತರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ, ಕೂಡಲೇ ಈ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಕೆ.ಶೆಟ್ಟಳ್ಳಿ ಅಪ್ಪಾಜಿ ಮಾತನಾಡಿ, ಮಠ ಮಾನ್ಯಗಳಿಗೆ ನಿರೀಕ್ಷೆ ಮೀರಿ ಹಣ ನೀಡುವ ಸರ್ಕಾರ, ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿದೆ, ಈಗಾಗಲೇ ಸರ್ಕಾರಿ ಶಾಲೆಯ ಹಾಜರಾತಿ ಕಡಿಮೆಯಾಗುತ್ತಿದ್ದು, ಇಂತಹ ಅವೈಜ್ಞಾನಿಕ ಆದೇಶದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಶಾಲೆ ಮುಚ್ಚುವ ಆತಂಕ ಎದುರಾಗಿದೆ. ಬಡ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಿಯ ರಮೇಶ್, ದರಸಗುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಶ್, ಮುಖಂಡ ಚಿಕ್ಕತಿಮ್ಮೇಗೌಡ ಪಾನಿಪುರಿ ರವಿ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!