ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಮೇ 21 ಹಾಗೂ 22 ರಂದು ಜಿಲ್ಲೆಯ 9 ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು. ಪರೀಕ್ಷೆಯು ಸುಸೂತ್ರವಾಗಿ ಯಾವುದೇ ಲೋಪವಿಲ್ಲದಂತೆ ನಡೆಯಬೇಕು ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಗೆ ಒಟ್ಟು 456 ಹುದ್ದೆಗಳು ಮಂಜೂರಾಗಿದ್ದು, 2340 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲು ಹಾಗೂ ಪರೀಕ್ಷೆ ನಡೆಸಲು ಸರ್ಕಾರ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಮೇಲ್ವಿಚಾರಕರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸಿ.ಸಿ.ಟಿ.ವಿ ಕಾರ್ಯನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದರು.
ಪ್ರತಿ ಕೇಂದ್ರಕ್ಕೆ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಮುಖ್ಯ ಅಧೀಕ್ಷಕರಾಗಿ ಹಾಗೂ ಎ ವೃಂದದ ಅಧಿಕಾರಿಗಳನ್ನು ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೊಬೈಲ್‍ಗಳನ್ನು ಪರೀಕ್ಷಾ ಕೊಠಡಿಯೊಳಗೆ ತರದಂತೆ ನಿಷೇಧಿಸಿ ಅಭ್ಯರ್ಥಿಗಳ ಮೊಬೈಲ್‍ಗಳನ್ನು ಸ್ವೀಕರಿಸಿ ಪರೀಕ್ಷಾ ನಂತರ ಹಿಂದಿರುಗಿಸಲು ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದರು.
ಪರೀಕ್ಷಾರ್ಥಿಗಳಿಗೆ ಮೊಬೈಲ್, ಕ್ಯಾಲ್ಕುಲೇಟರ್,ಎಲೆಕ್ಟ್ರಾನಿಕ್ ವಾಚ್, ಮೈಕ್ರೋಫೋನ್ ,ಬ್ಲೂಟೂತ್ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳನ್ನು ಎರಡು ಹಂತದಲ್ಲಿ ಪರಿಶೀಲಿಸಲಾಗುವುದು. ಪರೀಕ್ಷಾ ಕೇಂದ್ರದ ಪರೀಕ್ಷಾ ದ್ವಾರದಲ್ಲಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಪರಿಶೀಲಿಸಲಾಗುವುದು. ಒಂದು ಕೇಂದ್ರದಲ್ಲಿ 200 ರಿಂದ 300 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರಿಶೀಲನೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆಯಾಗಬೇಕು. ಕಿವಿಯ ಒಳಭಾಗದಲ್ಲಿ ಬ್ಲೂಟೂತ್ ಬಗ್ಗೆ ಪರಿಶೀಲಿಸಲು ಶ್ರವಣ ತಜ್ಞರನ್ನು ಸಹ ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್ ಧನಂಜಯ ಅವರಿಗೆ ತಿಳಿಸಿದರು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರಿಗೆ ತಿಳಿಸಿದರು.
ಪರೀಕ್ಷಾ ಮೇಲ್ವಿಚಾರಕರು, ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ಪರೀಕ್ಷೆಗೆ ನಿಯೋಜಿಸುವ ಎಲ್ಲಾ ಸಿಬ್ಬಂದಿಗಳಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಅವರಿಗೆ
ತಿಳಿಸಿದರು.
ಮಂಡ್ಯ ನಗರದ ಕಾರ್ಮೆಲ್ ಕಾನ್ವೆಂಟ್, ಶ್ರೀ ಲಕ್ಷ್ಮಿಜನಾರ್ಧನ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಜಿ ಪುರಸಭೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ಸೆಂಟ್ ಜಾನ್ಸ್ ಪ್ರೌಢಶಾಲೆ, ಅರ್ಕೇಶ್ವರ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್, ಕಲ್ಲುಕಟ್ಟಡದ (ಪ್ರೌ.ವಿ) ಸರ್ಕಾರಿ ಪದವಿ ಪೂರ್ವ ಕಾಲೇಜು, ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಅಭಿನವ ಭಾರತಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್. ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಅಹಮದ್, ಡಿ.ಡಿ.ಪಿ.ಐ ಜವರೇಗೌಡ, ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಬಿ. ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ್, ಕಾಳಿರಯ್ಯ, ಮಹಾದೇವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪ್ಥತರಿದ್ದರು