Wednesday, September 18, 2024

ಪ್ರಾಯೋಗಿಕ ಆವೃತ್ತಿ

ಸಂಸ್ಕೃತಿ- ಶ್ರೀಮಂತಿಕೆ ಗಟ್ಟಿಗೊಳಿಸುವಲ್ಲಿ ಶಿಲ್ಪಕಲೆಗಳ ಮಹತ್ವದ್ದು; ಪ್ರೊ.ಜಿ.ಬಿ.ಶಿವರಾಜು

ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ವಿಚಾರಧಾರೆಗಳು ಪ್ರತಿಫಲಿಸುವಂತೆ ಶಿಲ್ಪಕಲಾಕೃತಿಗಳಿಗೆ ಜೀವ ತುಂಬಬೇಕು. ಗಾಂಧೀಜಿಯವರ ಕುರಿತ ತಮ್ಮ ಭಾವನೆಗಳಿಗೆ ಕಲಾವಿದರು ಮೂರ್ತರೂಪ ನೀಡಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನದ ನಿರ್ದೇಶಕ ಪ್ರೊ. ಜಿ.ಬಿ.ಶಿವರಾಜು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್(ರಿ) ನಿಂದ ಮಂಡ್ಯ ತಾಲ್ಲೂಕು ಎಚ್.ಮಲ್ಲಿಗೆರೆ ಗ್ರಾಮದ ‘ಗಾಂಧಿ ಗ್ರಾಮ’ದಲ್ಲಿ ಆಯೋಜಿಸಿದ್ದ ಗಾಂಧೀಜಿಯವರ ವ್ಯಕ್ತಿ ವಿಚಾರ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳ ನಿರ್ಮಾಣ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಈ ನೆಲದ ಸಂಸ್ಕೃತಿ ಶ್ರೀಮಂತಿಕೆಯನ್ನು ಗಟ್ಟಿಗೊಳಿಸುವಲ್ಲಿ ಶಿಲ್ಪಕಲೆಗಳು ಮಹತ್ವದ ಪಾತ್ರವಹಿಸಿವೆ. ಶಿಲ್ಪಕಲಾಕೃತಿಗಳು ಉತ್ತಮವಾಗಿ ಮೂಡಿಬಂದರೆ ಅದರ ಸಂಪೂರ್ಣ ಶ್ರೇಯ ಕಲಾವಿದರರಿಗೆ ಸಲ್ಲುತ್ತದೆ. ಶಿಲ್ಪಕಲಾಕೃತಿಗಳ ಮೂಲಕ ಕಲಾವಿದರೂ ಕೂಡ ನೂರಾರು ವರುಷ ಬದುಕಿರುತ್ತಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಜಿಲ್ಲೆಗೊಂದು ‘ಗಾಂಧಿ ಭವನ’ ಸ್ಥಾಪಿಸುತ್ತಿದೆ. ಆದರೆ, ಜಿ.ಮಾದೇಗೌಡರು ಮೊದಲೇ ಮಂಡ್ಯ ‘ಗಾಂಧಿ ಭವನ’ ಸ್ಥಾಪಿಸಿದ್ದರು. ಇದು ಮಾದೇಗೌಡರ ದೂರದೃಷ್ಟಿತ್ವಕ್ಕೆ ಸಾಕ್ಷಿ. ಮುಂದಿನ ದಿನಗಳಲ್ಲಿ ‘ಗಾಂಧಿ ಗ್ರಾಮ’ ಎಲ್ಲರೂ ನೋಡುವಂತ ಆಕರ್ಷಣೀಯ ಕೇಂದ್ರವಾಗಿ ಮಾರ್ಪಾಡು ಆಗಲಿದೆ ಎಂದರು.

ಮಾನವೀಯ ಮೌಲ್ಯಗಳ ಸಾರ ಆಗಿರುವ ಗಾಂಧೀಜಿ ಅವರ ಬದುಕು ಮತ್ತು ವಿಚಾರಧಾರೆಗಳನ್ನು ಎಲ್ಲರ ಹೃದಯ ಮತ್ತು ಮನಸ್ಸುಗಳಲ್ಲಿ ಬಿತ್ತುವ ಕೆಲಸವಾಗಬೇಕು. ಕನಿಷ್ಠ ಅಗತ್ಯಗಳಲ್ಲಿ ಗರಿಷ್ಠ ಬದುಕು ಕಟ್ಟಿಕೊಳ್ಳುವಂತೆಯೂ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ. ಹಿರಿಯರಲ್ಲಿ ಹೃದಯ ಶ್ರೀಮಂತಿಕೆ ಬೇಕಿದೆ. ಇಂದಿನ ಎಲ್ಲಾ ಬಿಕ್ಕಟ್ಟುಗಳಿಗೆ ಗಾಂಧಿ ತತ್ವ-ಗಾಂಧಿ ವಿಚಾರಧಾರೆಗಳನ್ನು ಅನುಸರಿಸಿದರೆ ಪರಿಹಾರವಿದೆ ಎಂದರು.

ಶಿಬಿರವನ್ನು ಉದ್ಘಾಟಿಸಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ, ಶಿಲ್ಪಿ ಎಂ.ಸಿ.ರಮೇಶ್ ಮಾತನಾಡಿ, ಶಿಲ್ಪಕಲಾಕೃತಿಗಳ ನಿರ್ಮಾಣ ಮಾಡುವ ಸಂಬಂಧ ಹೆಚ್ಚು ಹೆಚ್ಚು ಶಿಬಿರಗಳನ್ನು ನಾಡಿನಾದ್ಯಂತ ಏರ್ಪಡಿಸಲು ಅಕಾಡೆಮಿ ವತಿಯಿಂದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಅಕಾಡೆಮಿಗೆ ಶಿಲ್ಪಕಲಾ ಶಿಬಿರವನ್ನು ಆಯೋಜಿಸಿಕೊಡುವಂತೆ ಸಾಕಷ್ಟು ಕೋರಿಕೆಗಳು ಬರುತ್ತಿವೆ. ಅವುಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಲಾಗುತ್ತಿದೆ. ನಮ್ಮಲ್ಲಿ ಅತ್ತುತ್ತಮ ಶಿಲ್ಪಕಲಾವಿದರಿದ್ದು, ಅವರನ್ನು ಬಳಸಿಕೊಂಡು ರಾಜ್ಯದಾದ್ಯಂತ ಶಿಲ್ಪಕಲಾ ಶಿಬಿರ ಆಯೋಜಿಸಲಾಗುವುದು. ನಾನು ಅಧ್ಯಕ್ಷನಾದ ಬಳಿಕ ಮಂಡ್ಯದಲ್ಲಿ ಮೊದಲಿಗೆ ಶಿಬಿರ ಆಯೋಜನೆಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ‘ಗಾಂಧಿ ಗ್ರಾಮದಲ್ಲಿ ಈಗಾಗಲೇ ರೂ. 3.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಗಾಂಧೀಜಿ ಅವರ ಮೌಲ್ಯಯುತ ಚಿಂತನೆಗಳನ್ನು ನಾಡಿನಾದ್ಯಂತ ಪಸರಿಸುವ ದೃಷ್ಟಿಯಿಂದ ‘ಗಾಂಧಿ ಗ್ರಾಮ’ವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಹೇಳಿದರು.

‘’ಗಾಂಧಿ ಗ್ರಾಮ’ದಲ್ಲಿ ಈಗಾಗಲೇ ದೇಸಿಯವಾಗಿ ಕೊಬ್ಬರಿ, ಕಡಲೇಕಾಯಿ, ಎಳ್ಳೆಣ್ಣೆ ತಯಾರಿಸುವ ಕೆಲಸ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈಮಗ್ಗದಿಂದ ಉಡುಪು ತಯಾರಿಕೆ, ಗಾಂಧೀಜಿ ಅವರ ಚಿತ್ರಗಳ ಗ್ಯಾಲರಿ ಸ್ಥಾಪನೆ, ವಿವಿಧ ತರಬೇತಿ ಶಿಬಿರಗಳ ಆಯೋಜನೆ, ಆಯುರ್ವೇದ ಕಾಲೇಜು ಸ್ಥಾಪನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಹೊಂದಲಾಗಿದೆ ಎಂದರು.
ಶಿವಮೊಗ್ಗ, ಧಾರವಾಡ, ಕೊಪ್ಪಳ, ಮೈಸೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬೀದರ್, ರಾಯಚೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 15 ಮಂದಿ ಹಿರಿಯ ಶಿಲ್ಪಿಗಳು ಮತ್ತು 15 ಮಂದಿ ಸಹಾಯಕ ಶಿಲ್ಪಿಗಳು ಭಾಗವಹಿಸಿದ್ದಾರೆ. ಗಾಂಧೀಜಿ ಮತ್ತು ಮಗುವಿನ ಶಿಲ್ಪ, ಧ್ಯಾನಸ್ಥ ಗಾಂಧಿ, ಚರಕದೊಂದಿಗೆ ಗಾಂಧೀಜಿ, ಪುಸ್ತಕದೊಂದಿಗೆ ಗಾಂಧೀಜಿ, ದಂಡಿ ಸತ್ಯಾಗ್ರಹ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಶಿಲ್ಪಗಳು ಅರಳಲಿವೆ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್, ಅಕಾಡೆಮಿ ಸದಸ್ಯ, ಶಿಬಿರದ ಸಂಚಾಲಕ ವೈ.ಕುಮಾರ್, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ)ನ ಬಿ.ಬಸವರಾಜು, ಅಂಜನಾ ಶ್ರೀಕಾಂತ್, ಎಂ.ರಾಜಣ್ಣ, ಎಚ್.ಮಲ್ಲಿಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಜೆ.ಭಾಗ್ಯಮ್ಮ, ಮಾಜಿ ಅಧ್ಯಕ್ಷ ಎಂ.ರಮೇಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!