Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾತಿಗಣತಿ ವರದಿ ಸ್ವೀಕರಿಸಿ, ಮುಸ್ಲಿಂ ಮೀಸಲಾತಿ ಶೇ.8ಕ್ಕೆ ಏರಿಸಲು SDPI ಆಗ್ರಹ

ರಾಜ್ಯದಲ್ಲಿ ಕಾಂತರಾಜ್ ಆಯೋಗ ಸಿದ್ದಪಡಿಸಿರುವ ಜಾತಿ ಗಣತಿ ವರದಿಯನ್ನು ಸ್ವೀಕರಿಸಬೇಕು. ಅಲ್ಲದೇ ಮುಸ್ಲಿಂರ 2ಬಿ ಮೀಸಲಾತಿಯನ್ನು ಶೇ 8ಕ್ಕೆ ಏರಿಸಬೇಕೆಂದು ಸೋಶಿಯನ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಸಮೀಕ್ಷೆ ಆದ ನಂತರ ಆ ವರದಿಯನ್ನು ಸ್ವೀಕರಿಸಲು ಅದರ ಗಣತಿ ನಡೆಸಿದ ಸರ್ಕಾರವೇ ಆಸಕ್ತಿ ವಹಿಸದಿದ್ದದ್ದು ವಿಷಾದನೀಯ. ಈಗ ಪೂರ್ಣ ಬಹುಮತದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷ ಮತ್ತೆ ಆಡಳಿತದಲ್ಲಿದೆ. ಸರ್ಕಾರ ಈಗಲಾದರೂ ಈ ವರದಿ ಸ್ವೀಕರಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿದರು.

ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿಸಿದ ಮಾಹಿತಿಯನ್ನು ಮೂರು ಹಂತಗಳ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕು ಎಂದು 2010 ರಲ್ಲಿಯೇ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಂ ಕೋರ್ಟ್‌ ಪುನರುಚ್ಚರಿಸುತ್ತಾ ಬಂದಿದೆ. ಆದ್ದರಿಂದ, ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಬೇಕೆಂದರು.

ಇನ್ನು ಮುಸ್ಲಿಂ ಸಮುದಾಯ ಅತ್ಯಂತ ಹಿಂದುಳಿದಿದೆ ಎಂದಿರುವ ರಂಗನಾಥ್ ಮಿಶ್ರ ತಮ್ಮ ವರರಿಯಲ್ಲಿ ಮುಸ್ಲಿಂರಿಗೆ ಈಗ ಲಭ್ಯವಿರುವ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಪತಿಪಾದಿಸಿದೆ. ಆದುದರಿಂದ ಮುಸ್ಲಿಮರ 2ಬಿ ಮೀಸಲಾತಿಯನ್ನು ಕನಿಷ್ಠ ಶೇಕಡ 8 ಕ್ಕೆ ಏರಿಸಬೇಕೆಂದು ಆಗ್ರಹಿಸಿದರು.

ಲಿಂಗಾಯತರಿಗೆ ಅನ್ಯಾಯವಾಗಿಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಆಯಾ ಕಟ್ಟಿನ ಹುದ್ದೆಗಳನ್ನು ಲಿಂಗಾಯತ ಸಮುದಾಯದವರಿಗೆ ಆದ್ಯತೆ ನೀಡಲಾಗಿದೆ. ಹೀಗಿದ್ದರೂ ಲಿಂಗಾಯತ ನಾಯಕ ಶಾಮನೂರು ಶಿವಶಂಕರ್ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.

ರಾಜ್ಯದಾದ್ಯಂತ ಅಭಿಯಾನ

ಕಾಂತರಾಜ್‌ ಆಯೋಗದ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಆಕ್ಟೋಬರ್ 9 ರಿಂದ ಅ.13 ರವರೆಗೆ ಐದು ದಿನಗಳ ಕಾಲ SDPI ಪಕ್ಷದ ವತಿಯಿಂದ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ.  ಇದರ ಅಂಗವಾಗಿ ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಅ.12 ರಂದು ಪ್ರತಿಭಟನಾ ಧರಣಿ ಮಾಡಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಸಾದತ್, ಉಪಾಧ್ಯಕ್ಷ ಮುಬಾರಕ್ ಹುಸೇನ್, ಜಿಲ್ಲಾ ಕಾರ್ಯದರ್ಶಿ ಮುಕ್ತಾರ್ ಅಹಮದ್, ಅತೀಕ್ ಅಹಮದ್, ಅಜ್ಗರ್ ಅಹ್ಮದ್ ಫಾರೂಕ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!