Friday, September 13, 2024

ಪ್ರಾಯೋಗಿಕ ಆವೃತ್ತಿ

ಎರಡನೇ ಬಾರಿಯೂ ಸೋತ ಮೈ.ವಿ.ರವಿಶಂಕರ್

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರವಿಶಂಕರ್ ಎರಡನೇ ಬಾರಿಯೂ ಸೋಲು ಕಂಡಿದ್ದಾರೆ. ಈ ಬಾರಿ ಶತಾಯಗತಾಯ ವಿಧಾನಪರಿಷತ್ ಮೆಟ್ಟಿಲು ಹತ್ತಲೇಬೇಕೆಂದು ಕಣಕ್ಕಿಳಿದಿದ್ದ ಮೈ.ವಿ.ರವಿಶಂಕರ್ ಅವರನ್ನು ಅವರ ಪಕ್ಷದ ಮುಖಂಡರೇ ಕಾಲೆಳೆದು ಬೀಳಿಸಿದ್ದಾರೆ ಎಂಬುದು ಬಿಜೆಪಿ ಪಕ್ಷದ ಹಲವು ಮುಖಂಡರ ಮಾತು.

2016ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ.ಮಧುಸೂಧನ್ ಅವರಿಗೆ ಟಿಕೆಟ್ ನೀಡದೆ ಸಂಘಪರಿವಾರದ ಕಾರ್ಯಕರ್ತ ಮೈ.ವಿ.ರವಿಶಂಕರ್ ಅವರಿಗೆ ನೀಡಿದ್ದರು. ರವಿಶಂಕರ್ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಮಧುಸೂದನ್ ಅವರಿಗೆ ಭಾರೀ ಅಸಮಾಧಾನ ಉಂಟಾಗಿತ್ತು.

2022ರ ಚುನಾವಣೆಯಲ್ಲಿಯೂ ಪ್ರಬಲ ಆಕಾಂಕ್ಷಿಯಾಗಿದ್ದ ಗೋ.ಮಧುಸೂದನ್ ಅವರು ಟಿಕೆಟ್ ಗಿಟ್ಟಿಸಲು ಹರಸಾಹಸ ಮಾಡಿದರೂ ಟಿಕೆಟ್ ಸಿಗಲಿಲ್ಲ. ಅಲ್ಲದೆ ಸೆನೆಟ್ ಸದಸ್ಯ ಈ.ಸಿ. ನಿಂಗರಾಜು ಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪಿಎ ಆಗಿದ್ದ ಎನ್.ಎಸ್. ವಿನಯ್ ಪ್ರಯತ್ನ ನಡೆಸಿದ್ದರು. ಆದರೆ ಇವರ ಪ್ರಯತ್ನಕ್ಕೆ ಸೊಪ್ಪುಹಾಕದ ಬಿಜೆಪಿ ಹೈಕಮಾಂಡ್ ಮತ್ತೆ ಸಂಘಪರಿವಾರದ ಮುಖಂಡ ರವಿಶಂಕರ್ ಅವರಿಗೆ ಟಿಕೆಟ್ ನೀಡಿ ಉಳಿದ ಆಕಾಂಕ್ಷೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.ಇವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ರವಿಶಂಕರ್ ವಿಫಲವಾದರು.

ಅತಿಯಾದ ಆತ್ಮವಿಶ್ವಾಸ

ರವಿಶಂಕರ್ ಅವರ ಪರ ಬಿಜೆಪಿಯ ಘಟಾನುಘಟಿ ನಾಯಕರೇ ಭರ್ಜರಿ ಪ್ರಚಾರ ನಡೆಸಿದ್ದರು. ಸಚಿವರಾದ ಅಶ್ವಥ್ ನಾರಾಯಣ್,ಗೋಪಾಲಯ್ಯ, ನಾರಾಯಣಗೌಡ, ಸಿ.ಟಿ.ರವಿ,ನಳೀನ್ಕುಮಾರ್ ಕಟೀಲು, ಬಿ.ವೈ.ರಾಘವೇಂದ್ರ ಸೇರಿದಂತೆ ಪ್ರಬಲ ನಾಯಕರು ಬಂದರೂ ರವಿಶಂಕರ್ ಸೋಲು ಅನುಭವಿಸುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ.

ಆಡಳಿತಾರೂಢ ಪಕ್ಷದ ಹಣಬಲ, ತೋಳ್ಬಲ ಎಲ್ಲವನ್ನು ಸಾಂಗವಾಗಿ ಬಳಸಿದರೂ ಕಾಂಗ್ರೆಸ್ ಪಕ್ಷ ಸಂಘಟಿತ ಪ್ರಯತ್ನದ ಎದುರು ಗೆಲುವು ಸಾಧಿಸುವಲ್ಲಿ ರವಿಶಂಕರ್ ವಿಫಲರಾಗಿದ್ದಾರೆ. ಮಾಜಿ ಸಂಸದ ಜಿ.ಮಾದೇಗೌಡ ರವರ ಪುತ್ರ ಮಧು ಮಾದೇಗೌಡ ಅವರ ಪರವಾಗಿ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ತಂತ್ರದ ಎದುರು ಬಿಜೆಪಿಯ ತಂತ್ರಗಾರಿಕೆ ಮಕಾಡೆ ಮಲಗಿದೆ.

ಮೈ.ವಿ. ರವಿಶಂಕರ್ ಪರ ಅವರದೇ ಪಕ್ಷದ ನಾಯಕರ ಒಳೇಟು ಭರ್ಜರಿಯಾಗಿ ಬಿದ್ದಿದೆ. ಟಿಕೆಟ್ ಆಕಾಂಕ್ಷಿ ತರು ಹಾಗೂ ರವಿಶಂಕರ್ ಅವರ ವಿರುದ್ಧ ಮುನಿಸಿಕೊಂಡ ನಾಯಕರು ಎಲ್ಲರೂ ಕೈಜೋಡಿಸಿ ರವಿಶಂಕರ್ ಅವರ ಸೋಲಿಗೆ ಎರಡನೇ ಬಾರಿಗೆ ಮುನ್ನುಡಿ ಬರೆದರು ಎಂಬುದು ಸಾರ್ವಜನಿಕರ ಮಾತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!