Thursday, September 19, 2024

ಪ್ರಾಯೋಗಿಕ ಆವೃತ್ತಿ

ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪದ್ದತಿ ಸರಿಯಿಲ್ಲ, ಆದರೆ ಶಾಸಕಾಂಗದ ಹಿಡಿತವು ಆಗಬಾರದು

✍️ ರಜನಿಕಾಂತ್‌ ಚಟ್ಟೇನಹಳ್ಳಿ

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಆಯ್ಕೆ ವಿಧಾನದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸಿಕೊಳ್ಳಲು ಶಾಸಕಾಂಗವು ಮಾಡುತ್ತಿರುವ ನಿರಂತರ ಚಟುಚಟಿಕೆಗಳನ್ನು ನಾವು ವರದಿಗಳ ಮೂಲಕ ನೋಡುತಿದ್ದೇವೆ. ಆದರೆ ಶಾಸಕಾಂಗ ಮತ್ತು ಕಾರ್ಯಾಂಗಗಳು ಹಳಿ ತಪ್ಪಿದಾಗ ಕಾನೂನು ಮೂಲಕ ಮತ್ತೆ ಸರಿದಾರಿಗೆ ತರಲು ಇರಬಹುದಾದ ಒಂದು ವ್ಯವಸ್ಥೆ ಎಂದರೆ ಅದು ನ್ಯಾಯಾಂಗ.

ಈಗಲೂ ಅನೇಕ ಮಂದಿ ತಮಗೆ ಅನ್ಯಾಯವಾಗುತ್ತಿದೆ ಎಂದಾಗ ತನ್ನ ಸಾಮಾಜಿಕ ಚೌಕಟ್ಟನ್ನೂ ಮೀರಿ ನ್ಯಾಯಾಂಗದ ಮೊರೆಗೆ ಬಿದ್ದು ತೀರ್ಪಿನ ಮೂಲಕವೇ ತನ್ನ ಕದನಕ್ಕೆ ವಿರಾಮವಿಡುತ್ತಾನೆ. ಹಾಗೆಯೇ ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದಿಂದ ತಮಗೆ ಅನ್ಯಾಯವಾಗುತ್ತಿದೆ ಎಂದಾಗ, ಜನ ಮತ್ತು ಸಂಸ್ಥೆಗಳಿಗೆ ನ್ಯಾಯಾಂಗವೊಂದೇ ಆಸರೆ. ಕೆಲವೊಮ್ಮೆ ನ್ಯಾಯಾಂಗದಲ್ಲಿಯೂ ನಿರಾಶೆಯಾಗುವುದು ಸತ್ಯ, ಆದರೆ ತನ್ನಳೊಗಿನ ಪ್ರಕ್ಷುಬ್ದ ಏರಿಳಿತಕ್ಕೆ ಒಂದು ಅಂತ್ಯವಾಗಿ ನ್ಯಾಯಾಂಗವಿದೆ.

ರಾಜಕೀಯವಾಗಿ ಬಗೆಹರಿಯಬೇಕಾದ ಅನೇಕ ಸಮಸ್ಯೆಗಳನ್ನು ರಾಜಕಾರಣಿಗಳು ಜಾತಕ ಪಕ್ಷಿಗಳಂತೆ ನ್ಯಾಯದ ತೀರ್ಪಿಗಾಗಿ ಕಾಯುತ್ತಿರುತ್ತಾರೆ. ಏಕೆಂದರೆ ನ್ಯಾಯಾಂಗಕ್ಕೆ ಅಂತಹ ಸ್ಥಾನವಿದೆ. ಈಗ ಪ್ರಶ್ನೆ ಇರುವುದು ಇಲ್ಲಿಯೇ. ನ್ಯಾಯಾಂಗವು ತನ್ನ ಆಯ್ಕೆಯ ಪ್ರಕ್ರಿಯೆಯಲ್ಲಿ ಸಾಂಪ್ರದಾಯಿಕ ವ್ಯವಸ್ಥೆಯನ್ನು ಹೊಂದಿರುವುದು ಪ್ರಜಾಪ್ರಭುತ್ವಕ್ಕೆ ದೂರವಾದುದು. ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಒಳಗೊಳ್ಳುವಿಕೆಯೂ ಅಗತ್ಯ ಎಂಬಂತೆ ಕಾನೂನು ಮಂತ್ರಿಗಳಿಂದ ನ್ಯಾಯಮೂರ್ತಿಗಳಿಗೆ ಪತ್ರ ಕಳಿಸುವುದು. ಅದಕ್ಕೆ ಮರು ಉತ್ತರ ನೀಡುವಂತೆ ಆಜ್ಞೆ ಮಾಡುವುದು ಎಲ್ಲವೂ ಇತ್ತೀಚಿನ ದಿನಗಳಲ್ಲಿ ಬಿಸಿಬಿಸಿ ಚರ್ಚೆಯಾಗಿವೆ.

ಇಲ್ಲಿ ಸರ್ಕಾರ ಕೇಳುತ್ತಿರುವುದು ಇಷ್ಟೇ. ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ನ್ಯಾಯಮೂರ್ತಿಗಳೆ ಸಾಕು (ರಾಷ್ಟ್ರಪತಿಗಳ ಒಪ್ಪಿಗೆಯ ಮೇರೆಗೆ, ಕೆಲವೊಮ್ಮೆ ಅವರ ಅಭಿಪ್ರಾಯವೂ ಬೇಡ) ಎಂಬಂತೆ ಇರುವ ಕಾನೂನನ್ನು ನಿಲ್ಲಿಸಿ, ಅಲ್ಲಿಯೂ ಶಾಸಕಾಂಗದ ವ್ಯವಸ್ಥೆಯಂತೆ ಸರ್ಕಾರದ ಒಬ್ಬ ವ್ಯಕ್ತಿಯನ್ನಾದರೂ ಆಯ್ಕೆಯ ವಿಧಾನದಲ್ಲಿ ಇರಿಸಬೇಕೆಂಬುದು. ನಾವು ಕೆಲವೊಂದನ್ನು ಗಮನದಲ್ಲಿ ಇರಿಸಿ ನೋಡಬೇಕಾದ್ದು ಇದೆ. ನ್ಯಾಯಾಧೀಶರುಗಳನ್ನು ನ್ಯಾಯಾಧೀಶರೇ ಆರಿಸಿಕೊಳ್ಳುವ ವ್ಯವಸ್ಥೆ ಇರುವುದರಿಂದಲೇ ಇದುವರೆಗೂ ಅತಿ ಹೆಚ್ಚಾಗಿ ಒಂದೇ ಜಾತಿಯವರು ಈ ವ್ಯವಸ್ಥೆಯನ್ನು ಅವರಿಸಿಕೊಂಡಿರುವುದು. ಹಾಗಂತ ಸರ್ಕಾರದ ನಡೆಯನ್ನೂ ಒಪ್ಪಲಾಗುವುದಿಲ್ಲ. ಜನಾಭಿಪ್ರಾಯಗಳನ್ನು ಮಣ್ಣುಪಾಲು ಮಾಡಿ, ಕಾರ್ಫೋರೇಟ್ ಹಿತಕ್ಕಾಗಿ ಕಾನೂನುಗಳನ್ನು ತರುವುದು ಈ ಶಾಸಕಾಂಗವೇ. ಶಾಸಕಾಂಗದ ನೀತಿಗಳನ್ನು ವಿರೋಧಿಸಿ ನ್ಯಾಯಕ್ಕಾಗಿ ಇರುವ ನ್ಯಾಯ ವ್ಯವಸ್ಥೆಯಲ್ಲಿಯೂ ಸರ್ಕಾರದ ಹಸ್ತಕ್ಷೇಪ ಇದ್ದಲ್ಲಿ ನ್ಯಾಯವೂ ಸರ್ಕಾರದ ಪರ ಇರುತ್ತದೆ ಎಂಬುದನ್ನು ಮನಗಾಣಬೇಕು.

ನ್ಯಾಯಾಂಗದ ನೇಮಕಾತಿಗೆ ಅಯೋಗವನ್ನು ರಚಿಸಲು ಸಂಸತ್ತು ರೂಪಿಸಿದ ಕಾಯ್ದೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದಾಗ ಉಪರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರೇ ಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿ ನ್ಯಾಯಾಂಗದ ಕುರಿತು ಟೀಕಿಸಿದ್ದರು. ಹೀಗೆ ನ್ಯಾಯಾಂಗದ ವಿರುದ್ದ ಮಾಡುತ್ತಿರುವ ಆರೋಪಗಳು ಮೇಲ್ಗೈ ಸಾಧಿಸಿದ್ದಲ್ಲಿ ನ್ಯಾಯಾಂಗವೂ ನ್ಯಾಯ ವ್ಯವಸ್ಥೆಯಿಂದ ಕೈ ಜಾರುತ್ತದೆ ಎನ್ನುವುದರಲ್ಲಿ ಅನುಮಾನ ಬೇಡ.

ಅಯೋಧ್ಯೆ  ತೀರ್ಪುಗಳು ಅನೇಕ ಜನರಿಗೆ ಅಸತ್ಯದಿಂದ ಕೂಡಿತ್ತು ಎಂಬ ಅಸಮಾಧಾನವೂ ಇರಬಹುದು. ಹಾಗೆಯೇ ಪಂಚಮಶಾಲಿಗಳ ಮೀಸಲಾತಿ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲ್ಲಿ ಹೇಳಿದ ತೀರ್ಪು. ಕಾಶ್ಮೀರಕ್ಕೆ ಸಂಬಂಧಿಸಿದ ವಿಶೇಷ ಸ್ಥಾನಮಾನದ ರದ್ದತಿಯಿರಬಹುದು. ಹೀಗೆ ಅನೇಕ ಪ್ರಕರಣಕ್ಕೆ ತೆರೆ ಎಳೆದು ಕೆಲವರಿಗೆ ಸಮಾಧಾನವನ್ನು ಮತ್ತೆ ಕೆಲವರಿಗೆ ಅಸಮಾಧಾನವನ್ನುಂಟು ಮಾಡಿದೆ, ಆ ಚರ್ಚೆ ಬೇರೆ.

ಆದರೆ ಶಾಸಕಾಂಗವು ಬರಿ ನ್ಯಾಯಾಂಗದ ಆಯ್ಕೆ ವಿಧಾನವನ್ನು ಆಧರಿಸಿ ಕ್ರಮ ಕೈಗೊಳ್ಳುವುದಾದಲ್ಲಿ, ತನ್ನ ಅಸ್ಥಿತ್ವವನ್ನು ಪಕ್ಕಕ್ಕಿಟ್ಟು ಬೇರೆ ಬೇರೆ ಸಮುದಾಯಗಳು ನ್ಯಾಯಾಧೀಶರಾಗುವ ಯೋಜನೆಯನ್ನು ರಚಿಸಬೇಕೇ ವಿನಹಃ. ತನ್ನ ಅಧಿಪತ್ಯವನ್ನು ಸ್ಥಾಪಿಸಲು ಅಥವಾ ತಾನು ಮಾಡುವ ಎಡವಟ್ಟುಗಳನ್ನು ತನ್ನ ಅಧಿಕಾರದಿಂದ ಸರಿದೂಗಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಸರ್ಕಾರದ ಈ ತೀರ್ಮಾನಗಳನ್ನು ಸಾರ್ವಜನಿಕವಾಗಿ ವಿರೋಧಿಸದಿದ್ದಲ್ಲಿ ಜನ ಸಮುದಾಯಗಳೂ ನೆಲಕಚ್ಚುತ್ತವೆ ಎನ್ನುವುದನ್ನು ಅರಿಯಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!