ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಿಸುವಂತೆಯೇ, ಪುರುಷ ಸ್ವ-ಸಹಾಯ ಸಂಘಗಳಿಗೂ 5 ಲಕ್ಷ ರೂ.ಗಳವರೆಗೆ ಎಂಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುವುದು ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ಯಾದನಹಳ್ಳಿ ಪಿ.ಚಲುವರಾಜು ತಿಳಿಸಿದರು.
ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೀಗಾಗಿ ಪುರುಷರು ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡು, ಸಾಲ ಪಡೆದು ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವ- ಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣೆ ಮಾಡುವ ವೇಳೆ ಯಾರಿಂದಲಾದರೂ ಲಂಚ ಪಡೆದರೆ ಆ ಬಗ್ಗೆ ನಮಗೆ ಮಾಹಿತಿ ನೀಡಿ, ತಕ್ಷಣವೇ ಸಂಯೋಜಕರನ್ನು ಅಮಾನತ್ತುಗೊಳಿಸಿ ಮನೆಗೆ ಕಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಡಿ.ಆರ್.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಭೂನಹಳ್ಳಿ ಗುರುಸ್ವಾಮಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಿ.ಎಸ್.ನಿಂಗೇಗೌಡ, ಮಾಜಿ ಅಧ್ಯಕ್ಷ ಕೆ.ಎಸ್.ಮನೋಹರ, ನಿರ್ದೇಶಕರಾದ ಶಾಂತಕುಮಾರ್, ಸ್ವಾಮಿಗೌಡ, ಕಮಲಮ್ಮ, ಎಸ್.ಎನ್.ಮಂಜುನಾಥ್, ತಾರಾದೇವಿ, ಎ.ಅಂಕಯ್ಯ, ನರಸಿಂಹನಾಯ್ಕ ಮತ್ತಿತರರು ಭಾಗವಹಿಸಿದ್ದರು.




