Thursday, September 19, 2024

ಪ್ರಾಯೋಗಿಕ ಆವೃತ್ತಿ

ಏಳು ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ | ಜಿಮ್ಸ್ ವೈದ್ಯರ ತಂಡ :

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ದಂಪತಿಗಳಾದ ಸವಿತಾ ಹಾಗೂ ಸಂತೋಷ ನಾಯಕ ಅವರ ಏಳು ತಿಂಗಳ ನವಜಾತ ಶಿಶುವಿಗೆ ಗದಗ ಜಿಮ್ಸ್ ಆಸ್ಪತ್ರೆಯ ವೈದ್ಯರು ಉದರ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.

ಏಳು ತಿಂಗಳ ನವಜಾತ ಶಿಶು ಹಾಲು ಸೇವನೆ ಮಾಡಿದರೂ, ಹೊಟ್ಟೆಯೊಳಗೆ ಹೋಗುವ ಮುನ್ನವೇ ರಕ್ತ ಮಿಶ್ರಿತ ಭೇದಿ ಮಾಡಿಕೊಳ್ಳುತ್ತಿತ್ತು. ಇದರಿಂದ ಆತಂಕಿತರಾದ ಪೋಷಕರು ಗದಗದ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು, ಮಗುವಿಗಿರುವ ತೋರಿಸಿದ್ದಾರೆ. ಕೂಡಲೇ ಇಲ್ಲಿನ ವೈದ್ಯರು ನಾನಾ ತಪಾಸಣೆ ನಡೆಸಿದ್ದರು.

ಮಗುವಿನ ಹೊಟ್ಟೆಯಲ್ಲಿ ಸಣ್ಣ ಕರುಳು ಹಾಗೂ ದೊಡ್ಡ ಕರಳು ಸುತ್ತು ಹಾಕಿಕೊಂಡಿರುವುದರಿಂದ ಈ ರೀತಿಯಾಗುತ್ತಿತ್ತು ಎಂದು ಕಂಡುಕೊಂಡ ವೈದ್ಯರು, ಮಗುವಿಗೆ ಕೆಲವು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಶಸ್ತ್ರಚಿಕಿತ್ಸೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯರು, “ನವಜಾತ ಶಿಶು ಆರೋಗ್ಯವಾಗಿದ್ದು, ಸುಧಾರಣೆಯಾಗುತ್ತಿದೆ. ಇದೊಂದು ಅಪರೂಪದ ಚಿಕಿತ್ಸೆಯಾಗಿದ್ದು, ನಮ್ಮ ಜಿಮ್ಸ್ ಆಸ್ಪತ್ರೆಯಲ್ಲಿ ಇದುವರೆಗೆ ಇಂತಹ ಪ್ರಕರಣ ಬಂದಿರಲಿಲ್ಲ” ಎಂದು ಹೇಳಿದರು.

“ತುರ್ತು ಚಿಕಿತ್ಸೆ ನಡೆಸದೇ ಇದ್ದಿದ್ದರೆ ಕರುಳಿನ ಗ್ಯಾಂಗ್ರಿನ್ ಆಗುವ ಸಂಭವವಿತ್ತು. ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಉದರ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಯಿತು. ಮಕ್ಕಳ ಸರ್ಜನ್ ಡಾ. ಜಯರಾಜ್ ಪಾಟೀಲ್, ವಿನಯಕುಮಾರ ತೇರದಾಳ ಹಾಗೂ ಸರ್ಜನ್ ಡಾ. ಜ್ಯೋತಿ ಕರೆಗೌಡರ್, ಡಾ. ಝಮೀರ್, ಅರಿವಳಿಕೆ ತಜ್ಞರಾದ ಡಾ. ವಿನಾಯಕ, ಡಾ. ಪ್ರಿಯಾ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.

ಮಗುವಿನ ತಂದೆ ತಾಯಿ ಮಾತನಾಡಿ, “ಬಡ ಕುಟುಂಬದ ನಾವುಗಳು ಮಗುವಿನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿತ್ತು. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಕರ್ಯ ಇಲ್ಲದಿದ್ದರೂ, ಒಂದು ಪೈಸೆ ಹಣ ಇಲ್ಲದೆ ನನ್ನ ಮಗುವನ್ನು ಬದುಕಿಸಿಕೊಟ್ಟಿದ್ದಾರೆ. ನೆರವಾದ ಎಲ್ಲ ವೈದ್ಯರುಗಳಿಗೆ ಧನ್ಯವಾದಗಳು” ಎಂದು ಖುಷಿಯಿಂದ ಕಣ್ಣೀರು ಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!