Wednesday, April 24, 2024

ಪ್ರಾಯೋಗಿಕ ಆವೃತ್ತಿ

ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ; ಗೃಹ ಸಚಿವ ಅಮಿತ್‌ ಷಾ ಭೇಟಿ ಮಾಡಿದ ಕುಸ್ತಿಪಟುಗಳು

ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಗಂಗಾ ನದಿಗೆ ತಮ್ಮ ಪದಕಗಳನ್ನು ಎಸೆಯಲು ಮುಂದಾಗಿದ್ದ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ.

ಪದಕಗಳನ್ನು ನದಿಗೆ ಎಸೆಯುವ ನಿರ್ಧಾರದಿಂದ ಹಿಂದೆ ಸರಿದು ಐದು ದಿನಗಳ ಗಡುವನ್ನು ನೀಡಲಾಗಿತ್ತು. ಅದು ಮುಗಿದ ಹಿಂದಿನ ರಾತ್ರಿ ಅಂದರೆ ಶನಿವಾರ ತಡರಾತ್ರಿ ಗೃಹ ಸಚಿವರನ್ನು ದೆಹಲಿಯ ಅಧಿಕೃತ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ.

ಎರಡು ಗಂಟೆಗಳ ಕಾಲ ಸಭೆ ನಡೆದಿದೆ. ಮಧ್ಯರಾತ್ರಿಯ ನಂತರ ಸಭೆ ಮುಗಿದಿದೆ ಎಂದು ತಿಳಿದುಬಂದಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ಹಲವಾರು ತರಬೇತುದಾರರು ಭಾಗವಹಿಸಿದ್ದರು.

“ನಾವು ಗೃಹ ಸಚಿವರೊಂದಿಗೆ ಸಭೆ ನಡೆಸಿದ್ದೇವೆ. ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಬಜರಂಗ್ ಪೂನಿಯಾ ಅವರು ಪ್ರತಿಕ್ರಿಯಿಸಿರುವುದಾಗಿ ‘ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಬ್ರಿಜ್‌ ಭೂಷಣ್ ವಿರುದ್ಧದ ಆರೋಪಗಳ ತನಿಖೆಯ ಕುರಿತು ಪ್ರಧಾನ ವಿಷಯವಾಗಿ ಅಮಿತ್ ಷಾ ಅವರಲ್ಲಿ ಕುಸ್ತಿಪಟುಗಳು ಪ್ರಸ್ತಾಪಿಸಿದ್ದಾರೆ. ಬಲವಾದ ಆರೋಪಪಟ್ಟಿಯನ್ನು ತ್ವರಿತವಾಗಿ ಸಲ್ಲಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಗೃಹ ಸಚಿವರು ಹೇಳಿರುವುದಾಗಿ ತಿಳಿದುಬಂದಿದೆ.

ಬಜರಂಗ್, ಸಾಕ್ಷಿ, ವಿಜೇತ ವಿನೇಶ್ ಫೋಗಟ್ ಹೋರಾಟದ ಮುಂಚೂಣಿಯಲ್ಲಿದ್ದಾರೆ. ದೆಹಲಿ ಪೊಲೀಸರು ಏಪ್ರಿಲ್ 28 ರಂದು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅಪ್ರಾಪ್ತ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾದ ಪೋಕ್ಸೋ ಪ್ರಕರಣವೂ ಇದರಲ್ಲಿ ಸೇರಿದೆ.

ಕನಿಷ್ಠ ಮೂವರು ಮಹಿಳಾ ಕುಸ್ತಿಪಟುಗಳ ಆರೋಪಗಳನ್ನು ಒಬ್ಬರು ಒಲಿಂಪಿಯನ್, ಒಬ್ಬರು ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತರು, ಅಂತರರಾಷ್ಟ್ರೀಯ ರೆಫರಿ ಮತ್ತು ರಾಜ್ಯ ಮಟ್ಟದ ಕೋಚ್ ಸೇರಿ ದೃಢೀಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದಕ್ಕೂ ಮೊದಲು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಕುಸ್ತಿಪಟುಗಳಲ್ಲಿ ಮನವಿ ಮಾಡಿದ್ದಾರೆ. “ನ್ಯಾಯಯುತ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು. ಕಾನೂನು ತನ್ನದೇ ಕ್ರಮಗಳನ್ನು ತೆಗೆದುಕೊಳ್ಳಲಿದೆ” ಎಂದು ಹೇಳಿದ್ದಾರೆ.

ಹೊಸ ಸಂಸತ್ತಿನ ಉದ್ಘಾಟನೆಯ ಮುನ್ನಾದಿನದಂದು ಮೇ 27 ರಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಮತ್ತು ಸರ್ಕಾರಿ ಪ್ರತಿನಿಧಿಗಳ ನಡುವಿನ ಕೊನೆಯ ಉನ್ನತ ಮಟ್ಟದ ಸಭೆ ನಡೆದಿತ್ತು. ಮಾತುಕತೆಗಳು ವಿಫಲವಾಗಿದ್ದವು. ಕುಸ್ತಿಪಟುಗಳು ತಮ್ಮ ಬೆಂಬಲಿಗರೊಂದಿಗೆ ಹೊಸ ಸಂಸತ್ತಿನತ್ತ ಮೆರವಣಿಗೆ ಮಾಡಲು ಮುಂದಾಗಿದ್ದರು. ದಾರಿಯಲ್ಲೇ ಅವರನ್ನು ತಡೆದು, ಹಲ್ಲೆ ನಡೆಸಿ ದೆಹಲಿ ಪೊಲೀಸರು ಬಂಧಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!