ವೈದ್ಯ ವೃತ್ತಿ ಗೌರವಯುತದ್ದಾಗಿದೆ, ವೈದ್ಯ ಎನಿಸಿಕೊಳ್ಳುವುದು ಹೆಮ್ಮೆಯ ವಿಚಾರವಾಗಿದೆ. ಎಲ್ಲ ಪೋಷಕರು ತಮ್ಮ ಮಕ್ಕಳು ಪಿ.ಯು.ಸಿ ಗೆ ಬಂದಾಗ ವೈದ್ಯರಾಗಬೇಕೆಂದು ಬಯಸುತ್ತಾರೆ. ಅದರೆ ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮಂಡ್ಯ ನಗರದ ಹೊರ ವಲಯದಲ್ಲಿ (ಶಶಿಕಿರಣ ಕಲ್ಯಾಣ ಮಂಟಪದ ಪಕ್ಕ) ಭಾರತೀಯ ವೈದ್ಯಕೀಯ ಸಂಘದ ಸ್ವಂತ ಕಟ್ಟಡ ಮತ್ತು ಮೆಡಿಕಾನ್ ಟ್ರಸ್ಟ್ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಯಾವುದೇ ಕೋರ್ಸ್ ಅನ್ನು ಒತ್ತಾಯದಿಂದ ಕೊಡಿಸಬಾರದು, ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಕೋರ್ಸ್ ಗಳನ್ನು ಆಯ್ಕೆ ಮಾಡಬೇಕು. ಎಷ್ಟೋ ಜನ ವೈದ್ಯರ ಮಕ್ಕಳು ಇಂಜಿನಿಯರ್ ಆಗಿರುವುದನ್ನು ಕಾಣಬಹುದು. ಹಾಗಾಗಿ ತಾವು ವಿದ್ಯಾರ್ಥಿಗಳಿಗೆ ತಮ್ಮ ಆಸೆಗಳನ್ನು ಹೇರಿಕೆ ಮಾಡಬಾರದು ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಸರುವಾಸಿ ಶಸ್ತ್ರಚಿಕಿತ್ಸಕರಾದ ಡಾ. ವಿ.ಎಲ್. ನಂದೀಶ್ ರವರಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ, ಬೆಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ವಿ.ವಿ. ಚಿನಿವಾಲರ, ಮಂಡ್ಯ ಶಾಖೆಯ ಜಿಲ್ಲಾಧ್ಯಕ್ಷ ಡಾ. ಟಿ.ಎನ್. ಮರಿಗೌಡ, ಡಿ.ಎಚ್.ಓ. ಡಾ. ಕೆ. ಮೋಹನ್, ಮಿಮ್ಸ್ ನ ನಿರ್ದೇಶಕ ಡಾ.ಬಿ. ನರಸಿಂಹಸ್ವಾಮಿ, ಡಾ.ಪಿ.ಎಂ. ಜಗದೀಶ್ ಕುಮಾರ್, ಡಾ. ವಿ.ಎಲ್. ನಂದೀಶ್, ಡಾ. ಪ್ರದೀಪ್ ಕುಮಾರ್ ಹೆಬ್ರಿ ಹಾಗೂ ಇನ್ನಿತರದಿದ್ದರು.




