ಇಂದಿನ ದಿನಗಳಲ್ಲಿ ತಾಯಿತನದ ಸಾಹಿತ್ಯ ಹುಟ್ಟಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್ಎಸ್ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಲೋಕಾರ್ಪಣೆ, ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬುದ್ದ ಬಸವ ಅಂಬೇಡ್ಕರ್ ಬದುಕಿರುವುದೇ ದಲಿತತ್ವದಲ್ಲಿಯೇ ಹೊರತು ಇನ್ನಾವುದರಲ್ಲಿಯೂ ಇಲ್ಲ, ಇಂದಿನ ವಿದ್ಯಮಾನಗಳ ದಿನಗಳಲ್ಲಿ ತಾಯಿತನದ ಸಾಹಿತ್ಯ ಹುಟ್ಟಿ, ಬೇರುಮಟ್ಟದಿಂದ ಹೂ ಮಟ್ಟದ ವರೆಗೂ ತಲುಪಬೇಕಿದೆ ಎಂದು ನುಡಿದರು.
ಅಗತ್ಯವಾಗಿರುವುದನ್ನ ತಿರಸ್ಕಾರ ಮಾಡುತ್ತಿದ್ಧೇವೆ, ಈ ದೇಶದ ದೊಡ್ಡ ಅವಘಡ, ಎಂದರೆ ಅಪಘಾತ ಅಲ್ಲ, ಮಾನಸಿಕ ಅವಘಡಗಳು ಕೂಡ ಪ್ರಮಾದವಾಗುತ್ತಿವೆ, ದೇಶ-ಕೋಶಕ್ಕೂ ನಮಗೂ ಸಂಬಂಧ ಇದೆ ಎಂದು ಭಾವಿಸಬೇಕು, ನಮ್ಮನ್ನು ಬಿಟ್ಟು ದೇಶವಿಲ್ಲ, ದೇಶಬಿಟ್ಟು ನಾವಿಲ್ಲ ಅಂದುಕೊಂಡಾಗ ಮಾತ್ರ ಭಯ, ಪ್ರೀತಿಗಳು ಹುಟ್ಟಲಿಕ್ಕೆ ಸಾಧ್ಯವಿದೆ, ಇದ್ದರಿಂದ ಅದು ಸ್ಮಶಾನಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟರು.
ಭಾರತದೇಶದ ಬೆಳಕಾದ ಬುದ್ದ, ಬಸವ,ಅಂಬೇಡ್ಕರ್ ಅವರನ್ನು ನೆನೆಯದೇ ಯಾವುದು ನಡೆಯದು, ಅಮ್ಮನಿಲ್ಲ ಮನೆ ಹೇಗಿದೆಯೋ ಹಾಗೇ ಅಂಬೇಡ್ಕರ್ ಇಲ್ಲದ ದೇಶವು ಅನಾಥವಾಗುತ್ತದೆ, ಅವರ ಸತ್ಯವನ್ನು ಸಾರ್ವತ್ರಿಕರಣ ಮಾಡಬೇಕಿದೆ ಎಂದರು.
ರಂಗತಜ್ಞ ಡಾ.ರಾಜಪ್ಪದಳವಾಯಿ ಮಾತನಾಡಿ, ೧೮೭೪ರಲ್ಲಿ ಭಾರತದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮೀಸಲಾತಿ ನೀಡಿದ ಕೀರ್ತಿ ನಾಲ್ವಡಿಕೃಷ್ಣರಾಜ ಒಡೆಯರ್ ಗೆ ಸಲ್ಲುತ್ತದೆ, ಇಂದು ಶೇ.೩.ರಷ್ಟು ಜನಸಂಖ್ಯೆಯಿರುವವರಿಗೆ ಶೇ.೧೦ರಷ್ಟು ಮೀಸಲಾತಿ ನೀಡಲಾಗಿದೆ ಇದು ಅವಜ್ಞಾನಿಕ, ಇಂದಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಎಂದು ಎಚ್ಚರಿಸಿದರು.
ಇಂದಿನ ದಿನಗಳಲ್ಲಿ ಎಲ್ಲಾ ಜಾತಿಯರಿಗೂ ಮೀಸಲಾತಿ ಇದೆ, ಅದು ಎಸ್ಸಿ,ಎಸ್ಟಿಗಳಿಂದ ಮೀಸಲಾತಿ ಇದೆ ಎಂದು ಕೊಂಡಿರುವುದು ಅಜ್ಞಾನ, ದಲಿತ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಮಾಡಲಿ, ಕಸಾಪ ರಾಜ್ಯಾಧ್ಯಕ್ಷರ ಸ್ಥಾನ ಬದಲಿಸಲು ಹೋರಾಟ ಶುರುವಾಗಿದೆ, ಇದು ನಡೆಯುತ್ತಿರುವುದು ನಡೆಯಲಿ ಎಂದರು.
ಇದೇ ಸಂದರ್ಭದಲ್ಲಿ ದಸಾಪ ಜಿಲ್ಲಾ ಮತ್ತು ತಾಲೂಕು ಘಟಕಗಳ ಪಾಧಿಕಾರಿಗಳಿಗೆ ನೇಮಕಪತ್ರ ನೀಡಲಾಯಿತು, ಸಾಧಕರನ್ನು ಗಣ್ಯರು ಅಭಿನಂದಿಸಿದರು. ಗಾಯಕರು ವಿವಿಧ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಮಲ್ಲಾಜಮ್ಮ, ನಿವೃತ್ತ ಪ್ರಾಂಶುಪಾಲ ಪ್ರೊ.ಹುಲ್ಕೆರೆ ಮಹದೇವ, ನಿವೃತ್ತ ಪ್ರಾಂಶುಪಾಲ ಪ್ರೊ. ಬಿ.ಎಸ್.ಚಂದ್ರಶೇಖರನ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ನಿವೃತ್ತ ಉಪನ್ಯಾಸಕ ಗುರುಮೂರ್ತಿ, ದಸಾಪ ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ, ಸಾಧಕರಾದ ರಾಮದೇವರಾಕೆ, ಗಾಯಕ ಹುರುಗಲವಾಡಿರಾಮಯ್ಯ, ಎನ್.ನಾಗರಾಜು, ಗಾಯಕಿ ಮಂಜುಳಾ, ನರಸಿಂಹಮೂರ್ತಿ, ಕೀಲಾರ ಕೃಷ್ಣೇಗೌಡ, ದೇವರಾಜು ಕೊಪ್ಪ, ಮಹದೇವು ಕೊತ್ತತ್ತಿ ಮತ್ತಿತರರು ಉಪಸ್ಥಿತರಿದ್ದರು.




