ಪ್ರಸ್ತಕ ಸಾಲಿನಲ್ಲಿ ಶಾಲಾ ಹೆಣ್ಣು ಮಕ್ಕಳಿಗೆ ‘ಶುಚಿ’ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ವಿತರಿಸಲಾಗುವುದು. ಇದಕ್ಕಾಗಿ ರೂ. 470 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಸಂಗ್ರಹಿಸಿ ಸರಬರಾಜು ಮಾಡಲು ಅಲ್ಪಾವಧಿ ಟೆಂಡರ್ ಅನ್ನು ಆಹ್ವಾನಿಸಲು ಈಗಾಗಲೇ ಸೂಚನೆ ನೀಡಲಾಗಿದೆ, ಇದರಂತೆ, ಕೆ.ಎಸ್.ಎಂ.ಎಸ್.ಸಿ.ಎಲ್. (Karnataka State Medical Supplies Corporation Limited) ವತಿಯಿಂದ ಶೀಘ್ರದಲ್ಲೇ ಅಲ್ಪಾವಧಿ ಟೆಂಡರ್ ಅನ್ನು ಕರೆಯಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 60 ದಿನಗಳಲ್ಲಿ ಸರಬರಾಜು ಪೂರ್ಣಗೊಳಿಸಲಾಗುವುದು. ಈ ಯೋಜನೆಯಡಿ ಒಟ್ಟು 19,29,355 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಹೆಣ್ಣು ಮಕ್ಕಳು ಬಳಸಿದ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಒಂದು ಕಾಗದದಲ್ಲಿ ಸುತ್ತಿ ಸ್ಯಾನಿವೇಷ್ಟ್ ಬುಟ್ಟಿಯಲ್ಲಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಅಲ್ಲದೆ, ಬಳಸಿ ಪ್ಯಾಡ್ ಗಳ ಮೇಲೆ ವೈಜ್ಞಾನಿಕ ವಿಲೇವಾರಿ ಕುರಿತು ಸ್ಪಷ್ಟ ಮಾಹಿತಿ ಮತ್ತು ಚಿತ್ರಣ ನೀಡಲಾಗಿರುತ್ತದೆ ಎಂದು ಹೇಳಿದರು.
ಅಲ್ಲದೆ, 2023-24ನೇ ಸಾಲಿನ ಸಂಗ್ರಹಣೆ ಮತ್ತು ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸದರಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಗ್ಯ ಇಲಾಖೆಯಡಿ ಆರೋಗ್ಯ ಕೇಂದ್ರ/ ಆಸ್ಪತ್ರೆಗಳಿಗೆ ಜೈವಿಕ ತ್ಯಾಜ್ಯದ ವಿಲೇವಾರಿ ಸೇವೆಯನ್ನು ಒದಗಿಸುತ್ತಿರುವ ಮಾನ್ಯತೆ ಪಡೆದ ಏಜೆನ್ಸಿ/ ಸಂಸ್ಥೆಗಳಿಂದ ಸದರಿ ಶಾಲಾ-ಕಾಲೇಜುಗಳಲ್ಲಿನ ಬಳಸಿದ ನ್ಯಾಪ್ಕಿನ್ ಪ್ಯಾಡ್ ಗಳ ವಿವೇವಾರಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಶೀಘ್ರವೇ ಕೆ-ಸೆಟ್ ಪರೀಕ್ಷೆ – ಸಚಿವ ಸುಧಾಕರ್
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಶೀಘ್ರವೇ ನಡೆಸಲು ಕ್ರಮಕೈಗೊಳ್ಳಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರು ನಿಯಮ 72ರಡಿ ವಿಷಯ ಪ್ರಸ್ತಾಪಿಸಿ, ಕಳೆದ ಎರಡು ವರ್ಷಗಳಿಂದ ಕೆ-ಸೆಟ್ ಪರೀಕ್ಷೆ ನಡೆಸದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಿದ್ದು, ಈ ಬಗ್ಗೆ ಸರ್ಕಾರ ತ್ವರಿತವಾಗಿ ಕ್ರಮವಹಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 2022ನೇ ಸಾಲನ್ನೂ ಒಳಗೊಂಡಂತೆ ಅರ್ಹತೆ ಹೊಂದಿರುವ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೆ-ಸೆಟ್ ಪರೀಕ್ಷೆಯನ್ನು ಕೆಇಎ ಮೂಲಕ ನಡೆಸಲು ಸರ್ಕಾರದ ಹಂತದಲ್ಲಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಯುಜಿಸಿಯ ಸಾಮಾನ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪರೀಕ್ಷೆಯನ್ನು ನಡೆಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಕೆ-ಸೆಟ್ ಪರೀಕ್ಷೆಯ 2022 ಮತ್ತು 2023ನೇ ಸಾಲಿನ ಕರಡು ವೇಳಾಪಟ್ಟಿಯೊಂದಿಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆಯಲಾಗಿದೆ ಎಂದು ಹೇಳಿದರು.




