ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಮಳೆ ಹಾನಿ ಸಮೀಕ್ಷೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಅವರ ಕಾರಿನ ಮೇಲೆ ಮೊಟ್ಟೆ ಎಸೆಯುವ ಮೂಲಕ ಧೂರ್ತರಂತೆ ನಡೆದುಕೊಂಡಿದ್ದಾರೆ.ಇದರ ಹಿಂದೆ ಬಿಜೆಪಿ ಸರ್ಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು,ಈ ಕೂಡಲೇ ನಿಷ್ಕ್ರಿಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಅಯ್ಯಪ್ಪ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಸಂತ್ರಸ್ತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಸಮಯದಲ್ಲಿ ನಮ್ಮ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ನಡೆಸಿದ ಮೊಟ್ಟೆ ದಾಳಿಯ ಹಿಂದೆ ಬಿಜೆಪಿ ಪಕ್ಷದ ಬೆಂಬಲವಿದೆ.ಅವರ ಬೆಂಬಲವಿಲ್ಲದೆ,ಪೋಲಿಸರ ಸಹಕಾರವಿಲ್ಲದೆ ಈ ಘಟನೆ ನಡೆಯಲು ಸಾಧ್ಯವಿಲ್ಲ.
ವಿಪಕ್ಷ ನಾಯಕರು ಜಿಲ್ಲೆಗೆ ಭೇಟಿ ನೀಡುವ ಮಾಹಿತಿ ಇದ್ದರೂ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿದ್ದರಾಮಯ್ಯನವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಗೃಹ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಅಯ್ಯಪ್ಪರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಮೊಟ್ಟೆ ದಾಳಿ ಹಿಂದೆ ಸ್ಥಳೀಯ ಬಿಜೆಪಿ ನಾಯಕರು, ಮುಖಂಡರಿದ್ದಾರೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಇದೆ ಎಂದು ದೂರಿದ ಅವರು, ಸಿದ್ದರಾಮಯ್ಯ ಅವರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಆ.26ರಂದು ಕೊಡಗು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆನಂತರವೂ ಪ್ರತಿಭಟನೆಯನ್ನು ಎಲ್ಲೆಡೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಜನ್ಮದಿನೋತ್ಸವ ಕಾರ್ಯಕ್ರಮದ ಬಳಿಕ ಬಿಜೆಪಿಗೆ ಅವರ ಬಗ್ಗೆ ಭಯ ಶುರುವಾಗಿದೆ. ಸಿದ್ದರಾಮಯ್ಯ ಅವರ ಜನಪ್ರಿಯತೆ ಬಿಜೆಪಿಗರ ಕಣ್ಣುಕುಕ್ಕುವಂತೆ ಮಾಡಿದ್ದು, ಈ ಕಾರಣಕ್ಕೆ ಅವರ ಹೆಸರಿಗೆ ಕಳಂಕ ತರಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರ ಕಾರಿನ ಮೇಲೆ ಮೊಟ್ಟೆ ದಾಳಿ ನಡೆಸಲು ಬಿಜೆಪಿ ಪ್ರಚೋದಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮುಖಂಡರಾದ ಅಮರಾವತಿ ಚಂದ್ರಶೇಖರ್, ಸುರೇಶ್, ಗಣಿಗ ರವಿಕುಮಾರ್, ಹಾಲಹಳ್ಳಿ ಅಶೋಕ್, ಸಿ.ಎಂ.ದ್ಯಾವಪ್ಪ, ಅಂಜನಾ ಶ್ರೀಕಾಂತ್, ಪಲ್ಲವಿ, ವಿಜಯ್ ಕುಮಾರ್, ಸಿದ್ದರಾಮೇಗೌಡ, ಮಹಮದ್ ಜಬೀವುಲ್ಲಾ, ರುದ್ರಪ್ಪ, ದೇಶಹಳ್ಳಿ ಮೋಹನ್ ಕುಮಾರ್, ಕಂಬದಹಳ್ಳಿ ಪುಟ್ಟಸ್ವಾಮಿ, ಸುದರ್ಶನ್ ಸೇರಿದಂತೆ ಇತರರಿದ್ದರು.




