Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯಕ್ಕೆ ಒಬಾಮಾ ಆಗಮನ| ಸಿಎಂ ಭೇಟಿ ಮಾಡಿದ ಮಂಡ್ಯ ಶಾಸಕರ ನಿಯೋಗ


  • ಡಿಸೆಂಬರ್ ನಲ್ಲಿ ಮಂಡ್ಯಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಭೇಟಿ

  • ಮಂಡ್ಯದ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್ ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಮನವಿ

ಮಂಡ್ಯದ ಹಲ್ಲೆಗೆರೆಯ ಭೂತಾಯಿ ಟ್ರಸ್ಟ್ ನ ಅಧ್ಯಕ್ಷ, ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಟ್ರಸ್ಟ್ ನಿಂದ ಮಂಡ್ಯದ ಹಲ್ಲೆಗೆರೆಯಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿಸೆಂಬರ್ ತಿಂಗಳಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದ್ದೀಪ,ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿತು.

ಈ ಕೇಂದ್ರವು ಹಲ್ಲೆಗೆರೆ, ಮಂಡ್ಯ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ನಿಯೋಗದ ಸದಸ್ಯರು ಕೇಂದ್ರದ ಕಾರ್ಯ ಸ್ವರೂಪವನ್ನು ವಿವರಿಸಿದರು. ಮಾತ್ರವಲ್ಲ ಟ್ರಸ್ಟ್ ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ವಿವರಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು, “ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ನಿಮ್ಮ ಜತೆ ನಾವಿದ್ದೇವೆ. ಬೇಕಾದ ಎಲ್ಲ ಬೆಂಬಲ ನೀಡಲಿದ್ದೇವೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ” ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ, ಅಮೆರಿಕದ ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಮುಂತಾದವರು ನಿಯೋಗದಲ್ಲಿದ್ದು, ಸಿಎಂಗೆ ವಿವರಣೆ ನೀಡಿದರು.

ಅಮೆರಿಕದಿಂದ ಹಲ್ಲೆಗೆರೆಗೆ

ಅಮೆರಿಕ ಹಾಲಿ ಅಧ್ಯಕ್ಷರಾದ ಜೋ ಬೈಡನ್ ಅವರ ವೈದ್ಯಕೀಯ ಸಲಹೆಗಾರ ಡಾ.ವಿವೇಕ್ ಮೂರ್ತಿ ಅವರು ಭಾರತೀಯ ಮೂಲದವರು. ಡಾ.ವಿವೇಕ ಮೂರ್ತಿ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ವೈದ್ಯಕೀಯ ಸಲಹೆಗಾರರಾಗಿದ್ದರು.

ಡಾ.ವಿವೇಕ್ ಮೂರ್ತಿ ಅವರ ತಂದೆ, ಅನಿವಾಸಿ ಭಾರತೀಯ ಡಾ. ಲಕ್ಷ್ಮಿನರಸಿಂಹ ಮೂರ್ತಿ (ಎಲ್.ಎನ್.ಮೂರ್ತಿ) ಅವರು ತಮ್ಮ ಮಾತೃಭೂಮಿಯ ಅಭ್ಯುದಯಕ್ಕೆ ಪಣ ತೊಟ್ಟಿದ್ದಾರೆ.‌ ಅವರ ಸ್ವಂತ ಊರು ಮಂಡ್ಯ ಜಿಲ್ಲೆಯ ಹಲ್ಲೆಗೆರೆಯಾಗಿದ್ದು, ಇಲ್ಲಿ 13 ಎಕರೆ ಪಿತ್ರಾರ್ಜಿತ ಜಮೀನಿದೆ. ಅದರಲ್ಲಿ ಭೂತಾಯಿ ಟ್ರಸ್ಟ್ ನಿಂದ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ‌ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರ ತೆರೆಯಲು ಯೋಜಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. ಭೂತಾಯಿ ಟ್ರಸ್ಟ್ ನಿಂದ ಮೂರ್ತಿ ಕುಟುಂಬವು ಮಹತ್ತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.

ಸಹಕಾರ

ಟ್ರಸ್ಟ್ ನ ಕಾರ್ಯಗಳಿಗೆ ಮಂಡ್ಯ ಜಿಲ್ಲಾಡಳಿತ‌ ಸಂಪೂರ್ಣ ಸಹಕಾರ ನೀಡುತ್ತಿದೆ. ಈ ಟ್ರಸ್ಟ್ ಗೆ ಶಾಸಕರಾದ ದಿನೇಶ ಗೂಳಿಗೌಡ ಅವರು ತಮ್ಮ‌ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನವನ್ನು ನೀಡುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ಎಲ್.ಎ‌ನ್.ಮೂರ್ತಿ ಅವರಿಗೆ ವಿವಿಧ ಸಂಘ, ಸಂಸ್ಥೆಗಳಿಂದ ಸನ್ಮಾನ ಮಾಡಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!