Friday, September 20, 2024

ಪ್ರಾಯೋಗಿಕ ಆವೃತ್ತಿ

ಮೋದಿ ಭಕ್ತನ ಬರಗಾಲವೂ… ಸಿದ್ರಾಮಯ್ಯನ ಮಳೆಗಾಲವೂ…

✍️ ಮಾಚಯ್ಯ ಎಂ ಹಿಪ್ಪರಗಿ

ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಅಚಾನಕ್ಕಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಗೆಳೆಯನ ಮುಖ ಕಾಣಿಸಿತು. ಇತ್ತೀಚಿನ ದಿನಗಳಲ್ಲಿ ಅವ ನನ್ನ ಗೆಳೆಯನಿಗಿಂತ ಹೆಚ್ಚಾಗಿ, ಮೋದಿಯ ಭಕ್ತನಾಗಿಯೇ ಗೋಚರಿಸುತ್ತಾನೆ. ರಾಜಕಾರಣಕ್ಕಾಗಿ ಗೆಳೆತನವನ್ನು ಕಡಿದುಕೊಳ್ಳಲಿಕ್ಕಾಗುತ್ತದೆಯೇ? ಹಾಗೊಮ್ಮೆ ಹೀಗೊಮ್ಮೆ ವಾದಿಸಾಡುತ್ತಾ ಗೆಳೆಯರಾಗಿಯೇ ಉಳಿದಿದ್ದೇವೆ. ಬೆಂಗಳೂರು ತೊರೆದು ವಾರಗಳ ನಂತರ ಮರಳಿ ವಾಪಾಸಾಗಿದ್ದೆ. ಚುನಾವಣಾ ಫಲಿತಾಂಶ ನಂತರ ನನ್ನ ಅವನ ಮೊದಲ ಮುಖಾಮುಖಿ ಅದು. ಮುಖ ಮಂಕಾಗಿತ್ತು. ನನ್ನನ್ನು ಎದುರುಗೊಳ್ಳಲು ಮುಜುಗರವಿದ್ದಂತೆ ತೋರಿತು. ಮೋದಿ ಭಕ್ತನಾದರೂ ಗೆಳೆಯನಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ, ಒಬ್ಬ ಮನುಷ್ಯನನ್ನು ಸುಖಾಸುಮ್ಮನೆ ತಿವಿದು ನೋಯಿಸುವುದು ನನ್ನ ಜಾಯಮಾನವಲ್ಲ. ಹಾಗಾಗಿ ರಾಜಕೀಯದ ಬಗ್ಗೆ ಪ್ರಶ್ನಿಸುವುದು ಬೇಡವೆಂದುಕೊಂಡು “ಏನಯ್ಯಾ, ಬೆಂಗಳೂರಲ್ಲಾದ್ರೂ ಮಳೆ ಆಗಿರುತ್ತೆ ಅಂದ್ಕೊಂಡೆ. ಇಲ್ಲೂ ಆದಂಗೆ ಕಾಣಿಸ್ತಾ ಇಲ್ಲ ಅಂದೆ.

ಅಷ್ಟೇ, ಅವನು ನೇರವಾಗಿ ರಾಜಕೀಯಕ್ಕೇ ನುಗ್ಗಿದ, “ಇನ್ನೆಲ್ಲಿ ಮಳೆ ತರ್ತೀಯಾ? ದರಿದ್ರದ ಕಾಂಗ್ರೆಸ್ ಬಂತಲ್ವಾ, ಮಳೆನೂ ಹೋಯ್ತು ಅತ್ಲಗೆ” ಅಂದ. ಅವನ ಹತಾಶೆ ನೋಡಿ ನಗು ಬಂತು, ತಡೆದುಕೊಂಡೆ. ಇನ್ನೂ ದಿಲ್ಲಿಯಲ್ಲಿ ಸಿಎಂ ಕುರ್ಚಿಗಾಗಿ ಸಿದ್ರಾಮಯ್ಯ – ಡಿಕೇಶಿ ನಡುವೆ ಹಗ್ಗ ಜಗ್ಗಾಟ ನಡೆದಿದ್ದ ದಿನ ಅದು. ಮತ್ತೆ ಮಾತು ಮುಂದುವರೆಸಿ, “ಡಿಕೆ ಶಿವ್ಕುಮಾರ್ ಸಿಎಂ ಆದ್ರೆ ಹೆಂಗೋ ಏನೋ ಗೊತ್ತಿಲ್ಲ, ಮಳೆ ಬಂದ್ರೂ ಬರಬವುದು. ಆದ್ರೆ ಸಿದ್ರಾಮಯ್ಯ ಏನಾರು ಸಿಎಂ ಆದ್ರೆ, ಬರ‍್ಕೊಡ್ತೀನಿ, ಮಳೆ ಬರಲ್ಲ ನೋಡು. ಐದು ವರ್ಷವೂ ಕರ್ನಾಟಕಕ್ಕೆ ಬರಗಾಲವೇ ಸರಿ” ಅಂದ.

“ಹೌದಾ” ಎಂದವನಿಗೆ, ಈಗ ಮಾತ್ರ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕೆ. ಆಗಷ್ಟೇ ಪ್ರಯಾಣ ಮುಗಿಸಿ ಬಂದಿದ್ದ ನನಗೂ ಮಾತು ಮುಂದುವರೆಸಲು ಮನಸಿರಲಿಲ್ಲ, ಅವನ ಬಳಿಯೂ ತೂಕದ ಸರಕುಗಳಿರಲಿಲ್ಲ. ಗೊಣಗಿಕೊಳ್ಳುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದ.

ಮೊದಲೇ ಶಕುನ, ಹಣೇಬರ, ಬುರುಡೆ ಭವಿಷ್ಯಗಳಲ್ಲಿ ನಂಬಿಕೆ ಇಲ್ಲದ ನಾನು, ಅವನ ಮಾತನ್ನು ಅಲ್ಲಿಯೇ ಮರೆತಿದ್ದೆ. ಆದರೆ, ಈ ಮೋದಿ ಭಕ್ತರ ಟೈಮು ಅದೆಷ್ಟು ಕೆಟ್ಟು ಕೆರೆ ಹಿಡಿದೆದೆಯೆಂದರೆ, ಅವರು ಮುಟ್ಟಿದ್ದೆಲ್ಲ ‘ಮಲ’ವಾಗುತ್ತಿದೆ. ನನ್ನ ಗೆಳೆಯನ ವಿಚಾರದಲ್ಲೂ ಅದೇ ಆಯ್ತು. ಅವನು ಸಿದ್ರಾಮಯ್ಯ ಸಿಎಂ ಆದ್ರೆ ಮಳೆನೇ ಬರಲ್ಲ ಅಂತ ಭವಿಷ್ಯ ನುಡಿದಿದ್ದ, ಅಲಿಯಾಸ್ ಶಾಪ ಹಾಕಿದ್ದ. ಅವನ ಗ್ರಹಚಾರಕ್ಕೆ ಸಿದ್ರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ದಿನವೇ, ಬೆಂಗಳೂರಿನಿಂದ ವಾರಗಟ್ಟಲೆ ನಾಪತ್ತೆಯಾಗಿದ್ದ ಮಳೆ ಧೋ ಅಂತ ಸುರಿಯಬೇಕೆ!

ಗೆಳೆಯನನ್ನು ಕೊಂಚ ಕಿಚಾಯಿಸಲೆಂದು ಫೋನ್ ಮಾಡಿದೆ. ಮೊಬೈಲ್ ರಿಂಗ್ ಆಯಿತು. ಆಗುತ್ತಲೇ ಇತ್ತು, ಆದರೆ ಅವನು ರಿಸೀವ್ ಮಾಡಲೇ ಇಲ್ಲ! ‘ನೀವು ಕರೆ ಮಾಡಿದ ಚಂದಾದಾರರು ಸದ್ಯ ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ಮೊಬೈಲ್ ಹೆಂಗಸಿನ ಇಂಪಾದ ದನಿ ಕೇಳಿಸಿಕೊಂಡು ಫೋನ್ ಕಟ್ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!