Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯುತ್ ದರ ಏರಿಕೆ ಖಂಡಿಸಿ ಮೌನ ಪ್ರತಿಭಟನೆ : ವಹಿವಾಟು ಬಂದ್ ಗೆ ನೀರಸ ಪ್ರತಿಕ್ರಿಯೆ

ವಿದ್ಯುತ್‌ ದರ ಹೆಚ್ಚಳ ಮಾಡಿರುವ ಬಗ್ಗೆ ವಿದ್ಯುತ್‌ ನಿಗಮದ ವಿರುದ್ಧ ಮಂಡ್ಯ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಗುರುವಾರ ಮಂಡ್ಯನಗರದಲ್ಲಿ ಪ್ರತಿಭಟನೆ ನಡೆಸಿದವು, ಆದರೆ ವಾಣಿಜ್ಯ ವಹಿವಾಟು ಬಂದ್ ಗೆ ಉದ್ಯಮಿಗಳು, ವ್ಯಾಪಾರಸ್ಥರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮಂಡ್ಯ ನಗರದ ಜೈನರ ಬೀದಿಯಲ್ಲಿರುವ ಮಹಾವೀರ ಭವನದಿಂದ ಬೃಹತ್‌ ಮೌನ ಮೆರವಣಿಗೆ ಹೊರಟು, ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ವಿದ್ಯುತ್‌ ನಿಗಮಗಳು ಕೆಲ ದಿನಗಳ ಹಿಂದೆ ವಾಣಿಜ್ಯ, ಕೈಗಾರಿಕೆಗಳ ಹಾಗೂ ಗೃಹ ವಿದ್ಯುತ್‌ ದರಗಳನ್ನು ಏಕಾಏಕಿ ಶೇಕಡ 30 ರಿಂದ 70 ರಷ್ಟು ಹೆಚ್ಚು ಮಾಡಿದ್ದು, ಹೆಚ್ಚುವರಿ ಮಾಡಿರುವ ವಿದ್ಯುತ್‌ ದರವು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ದರ ಹೆಚ್ಚಳದಿಂಧ ಕೈಗಾರಿಕಾ ವಲಯ ಹಾಗೂ ವಾಣಿಜ್ಯ ಉದ್ಯಮ ಮತ್ತು ವ್ಯಾಪಾರ ವಹಿದಾಟುಗಳಿಗೆ ಹೆಚ್ಚಿನ ಹೊರೆ ಉಂಟಾಗಿ, ಮುಂದಿನ ದಿನಗಳಲ್ಲಿ ಕೈಗಾರಿಕೆ ಹಾಗೂ ವ್ಯಾಪಾರಗಳನ್ನು ನಡೆಸಲು ಆಗದೇ ಮುಚ್ಚುವ ಪರಿಸ್ಥಿತಿ ಉಂಟಾಗಬಹುದು. ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಇದರ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಹಿವಾಟು ಬಂದ್ ಗೆ ನೀರಸ ಪ್ರತಿಕ್ರಿಯೆ

ಮಂಡ್ಯ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ನೀಡಿದ ಮಂಡ್ಯನಗರ ವಾಣಿಜ್ಯ ಚಟುವಟಿಕೆಗಳ ಬಂದ್ ಗೆ ನಗರದ ವ್ಯಾಪಾರಿಗಳು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕೆಲವರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೆ, ಮತ್ತೆ ಕೆಲವರು ಅಂಗಡಿಗಳನ್ನು ತೆರದು ಎಂದಿನಂತೆ ವಾಣಿಜ್ಯ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಸಂಘದ ಅಧ್ಯಕ್ಷ ಕೆ. ಪ್ರಭಾಕರ್, ಮುಖಂಡರಾದ ಎಸ್.ಸತೀಶ್ ಬಾಬು,  ಶ್ರೀಹರಿ ಪ್ರಸಾದ್, ಶಿವಕುಮಾರ್, ಫೂಟರ್ ಮಲ್, ಶಾಂತಿ ಪ್ರಸಾದ್, ಸುಬ್ಬಣ್ಣ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!