Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿರಿ ಧಾನ್ಯ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಬೇಕು: ಡಾ‌.ಕುಮಾರ

ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ, ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಬೇಕೆಂದು ಜಿಲ್ಲಾಧಿಕಾರಿ ಡಾ‌.ಕುಮಾರ ಕರೆ ನೀಡಿದರು.

ರಾಜ್ಯ ಮಟ್ಟದ ಸಿರಿಧಾನ್ಯ ಮೇಳದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ನಡಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತ ಭಾಂದವರಿಗೆ ಸಿರಿಧಾನ್ಯದ ಮಹತ್ವ ತಿಳಿಸುವುದರ ಜೊತೆಗೆ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಸಿರಿಧಾನ್ಯ ನಡಿಗೆ ಆಯೋಜಿಸಿದ್ದೇವೆ‌.

ರೈತರು ಸಿರಿ ಧಾನ್ಯ ಬೆಳೆಗಳ ಉತ್ಪಾದನೆ ಹೆಚ್ಚು ಮಾಡುವುದರ ಜೊತೆಗೆ ಮಾರುಕಟ್ಟೆ ಸೌಲಭ್ಯ ಸಿಗಬೇಕು, ಹೊಸ ತಂತ್ರಜ್ಞಾನದ ಜ್ಞಾನ ಹೆಚ್ಚಾಗಬೇಕು ಎಂಬುದು ಸಿರಿಧಾನ್ಯ ಮೇಳದ ಉದ್ದೇಶವಾಗಿದೆ.2023 ನ್ನು ಸಿರಿ ಧಾನ್ಯ ವರ್ಷ ಎಂದು ಘೋಷಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದ್ದು, ರೈತರಿಗೆ ಉಪಯುಕ್ತ ‌ಮಾಹಿತಿ ನೀಡಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಆಗಸ್ಟ್ 28 ರ ಸೋಮವಾರದಂದು ಒಂದು ದಿನದ ರಾಜ್ಯ‌ ಮಟ್ಟದ ಸಿರಿಧಾನ್ಯ ಮೇಳ,ವಸ್ತು ಪ್ರದರ್ಶನ ಮತ್ತು ಬೆಲ್ಲದ ಪರಿಷೆ ಯನ್ನು ಮಂಡ್ಯ ನಗರದ ಡಾ. ರಾಜ್‌ಕುಮಾರ್ ಬಡಾವಣೆ ಪಕ್ಕದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಪಾಕ ಸ್ಪರ್ಧೆ, ಚಿಣ್ಣರ ಚಿತ್ರಕಲೆ ಹಾಗೂ ಮಂಡ್ಯದ ಬೆಲ್ಲ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ ಎಂದರು.

ಅಂದಿನ ಸಿರಿಧಾನ್ಯ ಮೇಳದ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಜಿಲ್ಲೆಯ ಮಾನ್ಯ ಸಂಸದರು, ಶಾಸಕರುಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.

ಮೇಳದಲ್ಲಿ 3000 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ಸಿರಿಧಾನ್ಯ ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು, ಸಂಸ್ಕರಣೆದಾರರು, ಬೆಲ್ಲ ಉತ್ಪಾದಕರು, ಕಿರು ಉದ್ದಿಮೆದಾರರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ 3000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದರು.

135 ವಸ್ತು ಪ್ರದರ್ಶನ ಮಳಿಗೆ
ರೈತರಿಗೆ ಮಾಹಿತಿ ನೀಡಲು ವಸ್ತು ಪ್ರದರ್ಶನದಲ್ಲಿ ಬೆಲ್ಲದ ಪರಿಷೆ- 20 ಮಳಿಗೆ, ಆಹಾರ ಮೇಳದ ಮಳಿಗೆ-15, ಇತರೆ ಜಿಲ್ಲೆಗಳ ಪಿ.ಎಂ.ಎಫ್.ಎಂ.ಇ. ಯೋಜನೆ ಫಲಾನುಭವಿಗಳಿಗೆ- 38 ಮಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ – 20 ಮಳಿಗೆ, ಎನ್.ಆರ್.ಎಲ್.ಎಂ. 4 ಮಳಿಗೆ, ಇತರೆ ಸ್ವಸಹಾಯ ಸಂಘಗಳಿಗೆ 10 ಮಳಿಗೆ, ಕೃಷಿ ಸಂಸ್ಕರಣಾ ಘಟಕ ತಯಾರಕರಿಗೆ 6 ಮಳಿಗೆಗಳು ಸೇರಿದಂತೆ ಒಟ್ಟು 135 ಮಳಿಗೆಗಳನ್ನು ವಸ್ತು ಪ್ರದರ್ಶನಕ್ಕೆ ಮೀಸಲಿಡಲಾಗಿದೆ ಎಂದರು.

ಪ್ರತಿಷ್ಠಿತ ಸಂಸ್ಥೆಗಳಿಂದ ಮಾಹಿತಿ
ಸಿರಿಧಾನ್ಯ ಮೇಳದಲ್ಲಿ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಗಳಾದ (CFTRI ಮೈಸೂರು, NIFTEM ತಂಜಾವೂರು, IIMR ಹೈದರಾಬಾದ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ ಸಂಸ್ಥೆಗಳ ವಿಜ್ಞಾನಿಗಳು ಸಿರಿಧಾನ್ಯ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿ ನೀಡಲಿದ್ದಾರೆ. KAPPEC ಸಂಸ್ಥೆ ವತಿಯಿಂದ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರಕುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಹಾಗೂ ಯೋಜನೆಯ ಅನುಷ್ಠಾನಕ್ಕಾಗಿ ಸಾಲ ಸೌಲಭ್ಯ ನೀಡಲು ಅವಶ್ಯವಿರುವ ದಾಖಲಾತಿ ಹಾಗೂ ಮಾಹಿತಿಯನ್ನು ನೀಡಲು ಬ್ಯಾಂಕ್ ಸಲಹಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಲ್ಲ ಬಳಸಲು ಅರಿವು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಹಲವಾರು ವರ್ಷಗಳಿಂದ ಬೆಲ್ಲ ಉತ್ಪಾದನೆಯಲ್ಲಿ ತೊಡಗಿದ್ದು, ರಾಷ್ಟ್ರದಲ್ಲಿ ಮಂಡ್ಯದ ಬೆಲ್ಲ ಹೆಸರುವಾಸಿಯಾಗಿದೆ. ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಲ್ಲದ ಪಾತ್ರ ದೊಡ್ಡದು. ನಗರ ಪ್ರದೇಶಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲದ ಬಳಕೆ ಕುರಿತು ಅರಿವು ಮೂಡಿಸುವುದು ಇಂದಿನ ಆದ್ಯತೆಯಾಗಿದೆ. ಸಕ್ಕರೆ ಬದಲು ಬೆಲ್ಲವನ್ನು ಬಳಸಿದಾಗ ಜಿಲ್ಲೆಯ ಬೆಲ್ಲ ತಯಾರಿಕರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಹೆಚ್ಚು ಅನುಕೂಲ ಹಾಗೂ ಲಾಭದಾಯಕವಾಗುತ್ತದೆ. ಜಿಲ್ಲೆಯಲ್ಲಿ PMFMI, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಬೆಲ್ಲದ ಉತ್ಪನ್ನವು ಅಯ್ಕೆಯಾಗಿ ರಾಜ್ಯದಲ್ಲಿ ಹೆಚ್ಚಿನ ಅನುದಾನ ಬಳಕೆ-ಉತ್ಪಾದನೆಯಲ್ಲಿ ಹೆಚ್ಚಳವಾಗಿರುತ್ತದೆ ಎಂದರು.

ಅಂದಿನ ಕಾರ್ಯಕ್ರಮದಲ್ಲಿ PMKSY WDC 2.0 ಯೋಜನೆ ಉದ್ಘಾಟನೆ ಮಾಡಲಾಗುವುದು ಹಾಗೂ ಜಿಲ್ಲೆಯ PMFME ಯೋಜನೆಯ ಫಲಾನುಭವಿ ರೈತ ದಂಪತಿಗಳಿಗೆ ಸನ್ಮಾನಿಸಲಾಗುವುದು, ಅಲ್ಲದೆ PMFME ಯೋಜನೆಯ ಫಲಾನುಭವಿಗಳ 22 ಉತ್ಪನ್ನಗಳ ಬ್ರಾಂಡ್‌ಗಳ ಬಿಡುಗಡೆ ಹಾಗೂ PMFME ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಲಾಗುವುದು ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್. ಎಲ್. ನಾಗರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಅಶೋಕ್, ಉಪ ನಿರ್ದೇಶಕರಾದ ಮಾಲತಿ, ಸಹಾಯಕ ನಿರ್ದೇಶಕರುಗಳಾದ ಮಮತ, ಸೌಮ್ಯಶ್ರೀ ಸೇರಿದಂತೆ ಇನ್ನಿತರ ಕೃಷಿ ಅಧಿಕಾರಿಗಳು ಇದ್ದರು‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!