Thursday, November 19, 2026

ಪ್ರಾಯೋಗಿಕ ಆವೃತ್ತಿ

ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶ : ಶಿವಾನಂದಮೂರ್ತಿ

ನಾಗಾಲೋಟದ ಬದುಕು ಅಶ್ರಯಿಸಿರುವ ಇಂದಿನ ಜನಮಾನಸಕ್ಕೆ ರೋಗಗಳ ಸಂಖ್ಯೆ ಉಲ್ಪಣಿಸಿದ್ದು ಪ್ರಥಮ ಚಿಕಿತ್ಸೆಯ ಮೂಲಕ ರೋಗಿಗಳನ್ನು ಉಪಚರಿಸುವ ನರ್ಸಿಂಗ್ ಶಿಕ್ಷಣಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಭಿಪ್ರಾಯಿಸಿದರು.

ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜನೆಗೊಂಡಿದ್ದ ಎಸ್.ಡಿ ಜಯರಾಮ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನರ್ಸಿಂಗ್ ಶಿಕ್ಷಣವು ಉತ್ತಮ ಶುಶ್ರೂಷೆ ನೀಡುವ ಪವಿತ್ರ ಉದ್ಯೋಗವಾಗಿದ್ದು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ತಮ್ಮ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಸಮಾಜದಲ್ಲಿ ವೈದ್ಯರು ಹಾಗೂ ಶಿಕ್ಷಕರಿಗೆ ನೀಡುವ ಅಪರಿಮಿತ ಗೌರವ ನರ್ಸಿಂಗ್ ಸೇವಾಕರ್ತರಿಗೂ ಸಲ್ಲಲಿದೆ ಎಂದರು.

ಆಧುನಿಕ ಜೀವನ ಶೈಲಿಯಿಂದ ಮನುಷ್ಯರಿಗೆ ಕಾಯಿಲೆಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಕಾಯಿಲೆ ಹಾಗೂ ಗರ್ಭಕೋಶದ ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳ ರೋಗಿಗಳು ಹೆಚ್ಚಳವಾಗುತ್ತಿದ್ದು, ಅನಿವಾರ್ಯ ಚಿಕಿತ್ಸೆ ಪಡೆಯಲು ದಾದಿಯರ ಅವಶ್ಯಕತೆ ವೈದ್ಯರಷ್ಟೇ ಇದೆ ಎಂದು ತಿಳಿಸಿದರು.

ಸಾರ್ವಜನಿಕ ಸೇವೆಯ ಮೂಲಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ದೃಢ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಉದ್ಯೋಗ ಅಥವಾ ರೋಗಿಯ ಬಗ್ಗೆ ಕೀಳರಿಮೆ ತೋರದೆ ಶ್ರದ್ದೆಯಿಂದ ಕಾರ್ಯ ನಿರ್ವಹಿಸಿ ರೋಗಿಗಳ ಮನಸ್ಥೈರ್ಯ ವೃದ್ದಿಸಬೇಕೆಂದರು.

ರೋಗಿಯ ಸ್ಥಿತಿ ಬಿಗಡಾಯಿಸಿದ ಸ್ಥಿತಿ, ಅಪಘಾತದ ತೀವ್ರತೆ, ರಕ್ತ-ಮಾಂಸ ಖಂಡಗಳ ಛಿದ್ರ ಸ್ಥಿತಿಯ ನಡುವೆಯೂ ರೋಗಿಗಳನ್ನು ಉಪಚರಿಸಬೇಕಾದ ಪ್ರಥಮ ಹೊಣೆಗಾರಿಕೆ ನಿಮ್ಮದಾಗಿದ್ದು, ಮಾನವೀಯ ದೃಷ್ಠಿಯಿಂದ ಚಿಕಿತ್ಸೆ ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಆಂಜನಪ್ಪ ಟಿ.ಹೆಚ್., ಎಸ್.ಡಿ. ಜಯರಾಮ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅಶೋಕ್ ಜಯರಾಮ್, ಪ್ರಾಂಶುಪಾಲರಾದ ಶ್ರುತಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ