ನಾವೆಲ್ಲರೂ ಕೇವಲ ಒಂದು ಜಾತಿ ಮತಕ್ಕೆ ಸೀಮಿತವಾಗದೆ ಜಗದ್ಗುರು ರೇಣುಕಾಚಾರ್ಯರ ಮಾನವೀಯತೆ ಸಿದ್ಧಾಂತಗಳನ್ನು ಪಾಲಿಸೋಣ, ಅವರ ಮಾರ್ಗದರ್ಶನದಂತೆ ಎಲ್ಲರೂ ಸಮಾನರು ಎಂದು ಮನೋಭಾವನೆಯ ಜೊತೆಗೆ ಬೆಳಕಿನೆಡೆಗೆ ಸಾಗೋಣ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹೇಳಿದರು
ಮಂಡ್ಯನಗರದ ಕರ್ನಾಟಕದ ಸಂಘ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯರು ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂದು ಪ್ರತಿಪಾದಿಸಿದ್ದಾರೆ ಎಂದರು.
ಮಠಗಳ ಜಾತ್ಯತೀತ ಕೊಡುಗೆ ಅನನ್ಯ
ಮಠಗಳು ಸಮಾಜಕ್ಕೆ ಜಾತ್ಯತೀತವಾಗಿ ದೊಡ್ಡ ಕೊಡುಗೆಯನ್ನೇ ನೀಡಿವೆ ಎಂದು ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿಸ್ವಾಮೀಜಿ ಹೇಳಿದರು.
.
ಸಿದ್ದಗಂಗಾ ಮಠ, ಸುತ್ತೂರು ಮಠ ನಮ್ಮ ಬೇಬಿ ಮಠ ಸೇರಿದಂತೆ ರಾಜ್ಯದ ಮಠಗಳ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಎಲ್ಲಾ ಜಾತಿ ಜನಾಂಗದ ವಿದ್ಯಾರ್ಥಿಗಳಿರುವುದು ಇದಕ್ಕೆ ಸಾಕ್ಷಿ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತೇನೆ ಎಂದರು.
ಈ ಮಠಗಳು ಇಂದಲ್ಲ ಅಂದಿನಿಂದ ಸೇವೆ ಮಾಡಿಕೊಂಡು ಬಂದಿರುವ ಮಠಗಳಾಗಿವೆ. ಏಕೆಂದರೆ ಧರ್ಮ ಎಂದರೆ ಪ್ರೀತಿಸು ಎಂದರ್ಥ. ಸತ್ಯ, ನೀತಿ ಮತ್ತು ನ್ಯಾಯವನ್ನು ಧಾರಣೆ ಮಾಡಬೇಕು ಅಂತ ಅರ್ಥ. ಎಲ್ಲಾ ಧಾರ್ಮಿಕ ಮುಖಂಡರು ಸಮಾಜದ ಕಲ್ಯಾಣಕ್ಕಾಗಿ ಬಂದಿರುತ್ತಾರೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕಿ ಡಾ. ಮಮತಾ ಸಾಲಿಮಠ, ರೇಣುಕಾಚಾರ್ಯರು, ಸಮಾಜದ ಒಳಿತಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ, ಕೊಲ್ಲಿಪಾತಿಯಲ್ಲಿ ವಿವಿಧ ಸಮುದಾಯಗಳ 18 ಮಠಗಳ ನಿರ್ಮಿಸಿದ್ದಾರೆ, ಈಗಲೂ ಸಹ ಅವು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಸಮಾರಂಭದಲ್ಲಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ, ಗಂಗಾಧರ ಶಿವಾಚಾರ್ಯಸ್ವಾಮಿ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ. ರಾಜಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಸರ್ಕಲ್ ಇನ್ಸ್ಪೆಕ್ಟರ್ ನವೀನ್, ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ನಾಗರಾಜು, ವಿವಿಧ ಸಮಿತಿಯ ಮುಖ್ಯಸ್ಥ ಕೆ.ಎಸ್. ಷಡಕ್ಷರಿ, ಎಂ.ಎಸ್.ಶಿವಪ್ರಕಾಶ್, ಗೊರವಾಲೆ ಚಂದ್ರಶೇಖರ್ ಉಪಸ್ಥಿತರಿದ್ದರು.




