ಮಂಡ್ಯ ಗ್ರಾಮಾಂತರ ಮಲ್ಲಯ್ಯನ ದೊಡ್ಡಿ ಬೋರೆ ಬಳಿ ನಡೆದ ಘಟನೆ.
100 ಗ್ರಾಂ ಚಿನ್ನದ ಆಭರಣ, 25,000 ನಗದು ಸೇರಿ ಸುಮಾರು 6 ಲಕ್ಷ ರೂ.
ಡ್ರಾಗನ್ ತೋರಿಸಿ ಮಾಂಗಲ್ಯ ಸರ, ಗುಂಡುಗಳನ್ನು ಕಿತ್ತುಕೊಂಡರು.
ಶಿಕ್ಷಕರೊಬ್ಬರು ಪತ್ನಿಯೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಾಗ ಇಬ್ಬರು ದರೋಡಕೋರರು ಚಾಕು ತೋರಿಸಿ ಅವರ ಬಳಿ ಇದ್ದ 6 ಲಕ್ಷ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ 1.30 ರ ಸಮಯದಲ್ಲಿ ಮಂಡ್ಯ ಗ್ರಾಮಾಂತರ ಮಲ್ಲಯ್ಯನ ದೊಡ್ಡಿ ಬೋರೆ ಬಳಿ ನಡೆದಿದೆ.
ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್ ಶಾಪ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜು ಹಾಗೂ ಅವರ ಪತ್ನಿ ಜಯಶ್ರೀ ದರೋಡೆಗೆ ಒಳಗಾದವರು.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರನನ್ನು ಭೇಟಿ ಮಾಡಲು ನಾಗರಾಜು ದಂಪತಿ ಭಾನುವಾರ ತಮ್ಮ ಸ್ವಿಫ್ಟ್ ಕಾರಿನಲ್ಲಿ( ಕೆಎ 09 ಎಂಎಫ್ 2831) ರಾತ್ರಿ ಹೊರಟಿದ್ದರು.
ಮಲ್ಲಯ್ಯನ ದೊಡ್ಡಿ ಬೋರೆ ಬಳಿ ಮಧ್ಯರಾತ್ರಿ 1.30ರ ಸಮಯದಲ್ಲಿ ನಾಗರಾಜು ಮೂತ್ರ ವಿಸರ್ಜನೆಗೆಂದು ಇಳಿದಾಗ ಏಕಾಏಕಿ ನುಗ್ಗಿದ ಮುಖಗವಸು ಧರಿಸಿದ್ದ ಇಬ್ಬರು ಯುವಕರು ಇವರ ಜೇಬಿನಲ್ಲಿದ್ದ 25 ಸಾವಿರ ರೂ. ಹಣ ಕಿತ್ತುಕೊಂಡರು. ಚಿನ್ನದ ಸರ, ಉಂಗುರ ಕೊಡುವಂತೆ ತಾಕೀತು ಮಾಡಿದರು. ನಾಗರಾಜು ವಿರೋಧ ವ್ಯಕ್ತಪಡಿಸಿದಾಗ ಕುತ್ತಿಗೆ ಭಾಗಕ್ಕೆ ಡ್ರಾಗನ್ ಹಿಡಿದು ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದರು. ಹೆದರಿದ ನಾಗರಾಜು ಉಂಗುರ, ಸರ ನೀಡಿದರು.
ನಂತರ ಕಾರಿನೊಳಗೆ ಕುಳಿತಿದ್ದ ನಾಗರಾಜು ಪತ್ನಿ ಜಯಶ್ರೀ ಅವರ ಕಡೆಗೂ ತೆರಳಿದ ದರೋಡಕೋರರು ಅವರಿಗೂ ಡ್ರಾಗನ್ ತೋರಿಸಿ ಮಾಂಗಲ್ಯ ಸರ, ಗುಂಡುಗಳನ್ನು ಕಿತ್ತುಕೊಂಡರು.
ರಸ್ತೆಯಲ್ಲಿ ಯಾರೂ ಇಲ್ಲದ್ದರಿಂದ ಕೂಗಿಕೊಂಡರೂ ಪ್ರಯೋಜನವಾಗಲಿಲ್ಲ. ಜೀವ ಉಳಿದರೆ ಸಾಕು ಎಂದು ನಗ-ನಗದು ನೀಡಿದ್ದು, 100 ಗ್ರಾಂ ಚಿನ್ನದ ಆಭರಣ, 25,000 ನಗದು ಸೇರಿ ಸುಮಾರು 6 ಲಕ್ಷ ರೂ. ದರೋಡೆ ಮಾಡಲಾಗಿದೆ.
ಅಲ್ಲಿಂದ ಮಂಡ್ಯಕ್ಕೆ ಆಗಮಿಸಿದ ನಾಗರಾಜು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದರು. ವಿಷಯ ತಿಳಿದು ಮಂಡ್ಯ ಹೆಚ್ಚುವರಿ ಎಸ್ಪಿ , ಗ್ರಾಮಾಂತರ ಇನ್ಸ್ಪೆಕ್ಟರ್ ಹಾಗೂ ಪೊಲೀಸರ ತಂಡ ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ಈ ಕುರಿತು ಸೋಮವಾರ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




