Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಳೆ ಮಧು ಜಿ.ಮಾದೇಗೌಡ ಷಷ್ಟ್ಯಬ್ಧಿ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ಹಿರಿಯ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರಿಗೆ 60 ವರ್ಷಗಳು ಸಂದಿರುವ ಸಂಭ್ರಮಕ್ಕಾಗಿ ಅವರ ಹಿತೈಷಿಗಳು ಹಾಗೂ ಭಾರತಿ ಎಜುಕೇ‍ಷನ್ ಟ್ರಸ್ಟ್ ವತಿಯಿಂದ ಷಷ್ಟ್ಯಬ್ಧಿ ಸಮಾರಂಭ ಆಯೋಜಿಸಲಾಗಿದೆ ಎಂದು ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗೂ ಜಿ.ಮಾದೇಗೌಡ ಅಭಿಮಾನಿ ಬಳಗದ ಮುಖಂಡ ಕೆ. ಬಸವರಾಜೇಗೌಡ ತಿಳಿಸಿದರು.

ಭಾರತಿ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಮಧು ಜಿ.ಮಾದೇಗೌಡ ಅಭಿಮಾನಿ ಬಳಗದ ಆಶ್ರಯದಲ್ಲಿ ಮಂಡ್ಯ ನಗರದ ಎ & ಎ ಕನ್ವೆನ್ಷನ್ ಹಾಲ್ ನಲ್ಲಿ ಡಿ.24ರಂದು ಮಧ್ಯಾಹ್ನ 1 ಗಂಟೆಗೆ ಷಷ್ಟ್ಯಬ್ಧಿ ಸಮಾರಂಭ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ವಿಶ್ವ ಮಾನವ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜನೆಗೊಡ್ಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸಲಿದ್ದಾರೆಂದು ತಿಳಿಸಿದರು.

ವಾರಪೂರ್ತಿ ಸಮಾಜಮುಖಿ ಸೇವಾ ಕಾರ್ಯ
ಮಧು ಜಿ.ಮಾದೇಗೌಡರ ಷಷ್ಟ್ಯಬ್ಧಿ ಸಮಾರಂಭದ ಅಂಗವಾಗಿ ವಾರಪೂರ್ತಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಡಿ.26ರಂದು ಭಾರತೀನಗರದ ಭಾರತೀ ಕಾಲೇಜು(ಕಲ್ಲು ಕಟ್ಟಡದ ಒಳಾಂಗಣ)ವಿನಲ್ಲಿ ಬೃಹತ್ ಉದ್ಯೋಗ ಮೇಳ, ಡಿ.27ರಂದು ಮದ್ದೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮದ್ದೂರು ಪುರಸಭೆ, ಆಸ್ಟರ್ ಜಿ.ಮಾದೇಗೌಡ ಹಾಸ್ಪಿಟಲ್, ಶಂಕರ್ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಡಿ.28 ಮತ್ತು 29ರಂದು ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಎಂ.ಜಿ.ಎಂ ಕಪ್ ಪಂದ್ಯಾವಳಿಯನ್ನು ಭಾರತೀನಗರದ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್‌ಗೌಡ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಮಧು ಮಾದೇಗೌಡ ಹಾಗೂ ಶ್ರೀಮತಿ ಬಿಂದು ಮಧುಮಾದೇಗೌಡ ಅವರನ್ನು ಅಭಿನಂದಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶ್‌ಗೌಡ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಜಿಲ್ಲೆಯ ಹಿರಿಯ ರಾಜಕಾರಣಿ ಡಾ.ಜಿ.ಮಾದೇಗೌಡರ ಕುರಿತು ಡಾ.ಮ.ರಾಮಕೃಷ್ಣ ಅವರು ಹಿನ್ನೋಟ ನುಡಿಗಳನ್ನಾಡಲಿದ್ದು, ಮಧು ಜಿ.ಮಾದೇಗೌಡ ಅವರ ಕುರಿತು ಡಾ.ಎಸ್.ಬಿ.ಶಂಕರಗೌಡರು ಮುನ್ನೋಟದ ನುಡಿಗಳನ್ನು ನುಡಿಯಲಿದ್ದು, ಮಧು ಜಿ.ಮಾದೇಗೌಡ ಅವರ ಜೀವನ ಮತ್ತು ಸಾಧನೆ ಕುರಿತು ಡಾ.ಕೆಂಪಮ್ಮ ಅವರು ರಚಿಸಿರುವ `ಮಕರಂದ’ ಕೃತಿ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದ್ದು, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆಂದು ತಿಳಿಸಿದರು.

ಮಧು ಜಿ.ಮಾದೇಗೌಡ ದಂಪತಿಗಳನ್ನು ಗೌರವಿಸಿ, ವಿಧಾನ ಪರಿಷತ್ ವ್ಯಾಪ್ತಿಯ 4 ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾಗಿರುವ 20 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ನೇಗಿಲಯೋಗಿ ಸಂಘಟನೆಯ ಅಧ್ಯಕ್ಷ ರಮೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷರಾದ ತಿಮ್ಮೇಗೌಡ, ಕೆ.ಸಿ.ರವೀಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಕೃಷ್ಣ, ಎಸ್.ನಾರಾಯಣ್, ನಾಗರಾಜ್ ಸ್ವರೂಪ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ