Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಲಾಟರ್ ಹೌಸ್ ಶ್ರಮಿಕ (ಸ್ಲಂ) ನಿವಾಸಿಗಳ ಸಮಸ್ಯೆ ಬಗೆಹರಿಸದ ಕೊಳಗೇರಿ ಅಭಿವೃದ್ಧಿ ಮಂಡಳಿ ವಿರುದ್ಧ ಪ್ರತಿಭಟನೆ

ಮಂಡ್ಯ ನಗರದ ಸಂತೆಮಾಳ ಪಕ್ಕದ ಸ್ಲಾಟರ್‌ ಹೌಸ್‌ (ಸ್ಲಂ) ಶಂಕರಪುರದ ಕೊಳಗೇರಿ ಪ್ರದೇಶದಲ್ಲಿ ಅರ್ಧ ಶತಮಾನಕ್ಕೆ ಹೆಚ್ಚು ವರ್ಷಗಳಿಂದ, ವಾಸ ಮಾಡುತ್ತಿರುವ ಬಡಜನರ ಜಾಗದ ಸಮಸ್ಯೆಯನ್ನು ಬಗೆಹರಿಸದ ಮಂಡ್ಯ ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಧೋರಣೆ ಖಂಡಿಸಿ ಶುಕ್ರವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಯಿತು.

ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಮಂಡ್ಯನಗರ ವಿನೋಬ ರಸ್ತೆಯಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟಿಸಿದ ನೂರಾರು ಶ್ರಮಿಕ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸ್ಲಂನಲ್ಲಿ ಸುಮಾರು 65 ಕುಟುಂಬಗಳು ವಾಸ ಮಾಡುತ್ತಿದ್ದು, ಈ ಜಾಗ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1979 ರಲ್ಲಿ ಎಂದು ಘೋಷಣೆಯಾಗಿದೆ. ಅಲ್ಲದೇ ಫಲಾನುಭವಿಗಳಿಗೆ ಪರಿಚಯ ಪತ್ರವನ್ನು ನೀಡಲಾಗಿದ್ದರೂ ಕೊಳಚೆ ಅಭಿವೃದ್ಧಿ ಮಂಡಳಿ ಸ್ಲಂ ಅನ್ನು ಅಭಿವೃದ್ಧಿಪಡಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸ್ಲಂ ನಲ್ಲಿ 30 ವರ್ಷಗಳ ಹಿಂದೆ ಅಂಬೇಡ್ಕ‌ರ್ ವಸತಿ ಯೋಜನೆಯಡಿ 40 ಮನೆಗಳನ್ನು ನಿರ್ಮಾಣ ಮಾಡಿದ್ದು, ಇವು ಸಂಪೂರ್ಣ ಕಳಪೆಯಾಗಿವೆ, ಮನೆ ನಿರ್ಮಾಣ ಸಮಯದಲ್ಲಿ ಜಾಗದ ಕೊರತೆಯಿಂದ 5 ಕುಟುಂಬಗಳನ್ನು ಪಕ್ಕದ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಅವರಿಗೂ ಮನೆ ನಿರ್ಮಾಣ ಮಾಡಿಕೊಡುತ್ತೇವೆಂದು ತಿಳಿಸಲಾಗಿತ್ತು. ಆದರೆ 25 ವರ್ಷಗಳು ಕಳೆದಿವೆ. ಇತ್ತೀಚೆಗೆ ಭೂ ಮಾಲೀಕರು ದಿಢೀರ್ ಪ್ರತ್ಯಕ್ಷವಾಗಿ ನಗರಸಭೆ ವತಿಯಿಂದ 4 ಗುಂಟೆ ಜಾಗವನ್ನು ಅಲ್ಲಿ ಇದ್ದ ಜನರು ವಾಸವಿರುವಾಗಲೇ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ಅಲ್ಲದೇ ಭೂ ಮಾಲೀಕರು, ವಕೀಲರ ಮೂಲಕ ನೋಟೀಸ್‌ ಜಾರಿಗೊಳಿಸಿ 5 ಕುಟುಂಬಗಳಿಗೆ ಜಾಗ ತೆರವು ಮಾಡುವಂತೆ ಕಿರುಕುಳ, ಬೆದರಿಕೆ ಹಾಕುತ್ತಿದ್ದಾರೆ, ಈ ವಿಚಾರವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯ ಗಮನಕ್ಕೆ ತಂದರೂ ಸ್ಲಂ ಜನರನ್ನು ರಕ್ಷಿಸಬೇಕಾದ ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಅವರಿಗೆ ಬೆಂಬಲವಾಗಿ ನಿಂತು ಸ್ಲಂ ನಿವಾಸಿಗಳಿಗೆ ಅನ್ಯಾಯ ಎಸಗಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಅಧಿಕಾರಿಗಳು ನಿಮ್ಮನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ, ಹಾಗಾದರೆ ಫಲಾನುಭವಿಗಳ ಪಟ್ಟಿಯಲ್ಲಿ ಇವರ ಹೆಸರುಗಳು ಹೇಗೆ ಬಂದವು ? ಮತ್ತು ಪರಿಚಯ ಪತ್ರವನ್ನು ಹೇಗೆ ನೀಡಿದ್ದೀರಿ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ಬಿಚ್ಚಿಟ್ಟರು.

ಈ 5 ಕುಟುಂಬಗಳು ತಮಗೆ ಬಂದ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಜೀವನ ಸಾಗಿಸೋಣ ಎಂದು ಕೆಲವು ದಾಖಲಾತಿಗಳನ್ನು ಕೇಳಿದರೆ, ಇಂದು ಬನ್ನಿ, ನಾಳೆ ಬನ್ನಿ, ಎರಡು ದಿನ ಬಿಟ್ಟು ಬನ್ನಿ ಎಂದು ದಿನನಿತ್ಯವು ಕೂಲಿ ನಾಲಿ ಮಾಡುವ ಜನರನ್ನು ಅಲೆದಾಡಿಸುತ್ತಿದ್ದಾರೆ. ಆದ್ದರಿಂದ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ, ಶಿಸ್ತು ಕ್ರಮ ಕೈಗೊಳ್ಳಬೇಕು. ಬಡ ಸ್ಲಂ ಜನರಿಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಸಂಚಾಲಕಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ವಿದ್ಯಾರ್ಥಿ ಸಂಘಟನೆಯ ಅಂಜಲಿ ಸೇರಿದಂತೆ ಹಲವು ಶ್ರಮಿಕ ನಗರದ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!