✍️ ಶಿವಸುಂದರ್
ಜಸ್ಟ್ ಆಸ್ಕಿಂಗ್
“ಖಾದರ್ ಅವರ ರಾಜಿಕೋರ ರಾಜಕೀಯವನ್ನು ತರಾಟೆಗೆ ತೆಗೆದುಕೊಂಡವರು… ಮೃದು ಹಿಂದುತ್ವ ಮತ್ತು ಮನುವಾದಿ ಸಾಮಾಜಿಕ ಧೋರಣೆಗಳನ್ನು ಸಮರ್ಥಿಸುವ ಮತ್ತು ಪ್ರತಿಪಾದಿಸುತ್ತಿರುವ ಡಿಕೆ ಶಿವಕುಮಾರ್ ಅವರ ಬಗ್ಗೆ ಮೌನ ತಾಳಬಾರದಲ್ಲವೇ?”
ಖಾದರ್ ಅವರು ಮಾಡಿದ ತಪ್ಪು ಅವರ ವೈಯಕ್ತಿಕ ನೆಲೆಯದ್ದಲ್ಲ.
– ಕಾಂಗ್ರೆಸ್ಸು ಅನುಸರಿಸುತ್ತಾ ಬಂದಿರುವ ಮೃದು ಹಿಂದುತ್ವವಾದಿ ರಾಜಕೀಯದಲ್ಲಿ ಖಾದರ್ ಅವರ ತಪ್ಪುಗಳ ಬೇರುಗಳಿವೆ.
– ಹಿಂದುತ್ವದ ವಿರುದ್ಧ ಸಂಘರ್ಷ ಮಾಡದೆ ಅದನ್ನು ಓಲೈಸುತ್ತಾ ಹಿಂದೂ ಓಟುಗಳನ್ನು ಪಡೆದುಕೊಳ್ಳಬೇಕೆಂದೂ ಎಂಥಾ ರಾಜಿಗೂ ಸಿದ್ಧವಾಗುವ ಕಾಂಗ್ರೆಸ್ಸಿನ ರಾಜಿ ರಾಜಕೀಯದಲ್ಲಿ ಖಾದರ್ ಅವರ ತೀರ್ಮಾನದ ನೆಲೆಗಳಿವೆ.
– ಹಿಂದೂ ಓಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಮುಚ್ಚಿದ್ದ ರಾಮಮಂದಿರದ ಬೀಗವನ್ನು ತೆಗೆದು ಹಿಂದುತ್ವದ ಕೈಗಿತ್ತ ರಾಜೀವ್ ಗಾಂಧಿ ಯವರ ನೇತೃತ್ವದ ಮೃದು ಹಿಂದುತ್ವ ಹಾಗೂ ಅವಕಾಶವಾದಿ ರಾಜಕೀಯದಲ್ಲಿ ಅದರ ಬೇರುಗಳಿವೆ.

-1992 ರಲ್ಲಿ ಬಾಬ್ರಿ ಮಸೀದಿ ಕೆಡವಿದ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಸಂವಿಧಾನ ದ್ರೋಹಿ ಮತ್ತು ಜನವಿರೋಧಿ ಹಿಂದುತ್ವವನ್ನು ಹಿಂದುಗಳ ನಡುವೆ ಬಯಲುಗೊಳಿಸದೆ ಹಿಂದೂ ಓಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಆರೆಸ್ಸೆಸ್ಸಿನ ಮೇಲೆ ನಿಷೇಧವು ತಾನಾಗಿಯೇ ರದ್ದಾಗುವಂತೆ ಮಾಡಿದ ಪಿವಿ ನರಸಿಂಹರಾವ್ ಅವರ ನೇತೃತ್ವದ ಮೃದು ಹಿಂದುತ್ವದ ರಾಜಕೀಯದಲ್ಲಿ ಅದರ ಬೇರುಗಳಿವೆ…
– ಸುಪ್ರೀಂ ತೀರ್ಮಾನದ ನಂತರ ರಾಮಂದಿರಕ್ಕೆ ಶಿಲಾನ್ಯಾಸವಾದ ನಂತರ, ಇತರ ಎಲ್ಲಾ ವಿರೋಧ ಪಕ್ಷಗಳಂತೆ ಕಾಂಗ್ರೆಸ್ ಕೂಡ ಬಾಬ್ರಿ ಮಸೀದಿ ಕೆಡವಿದ್ದು ತಪ್ಪು ಎಂದು ಹೇಳುವುದನ್ನೇ ಕೈಬಿಟ್ಟು 2020 ರಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಹಣಸಂಗ್ರಹ ಮಾಡಿದ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
– ಭಾರತ್ ಜೋಡೋ ಅಭಿಯಾನದಲ್ಲಿ ಶ್ರೀರಂಗಪಟ್ಟಣದಲ್ಲಿ ಮೂರು ದಿನ ತಂಗಿದ್ದರೂ ಹಿಂದುತ್ವದ ಬಾಯಿಗೆ ಬಲಿಯಾಗುತ್ತೇವೆನ್ನುವ ಅಳುಕಿನಲ್ಲಿ ಟಿಪ್ಪು ಮಸೀದಿಗೆ ಭೇಟಿ ನೀಡದ ರಾಹುಲ್ ಗಾಂಧಿಯವರ ನಡೆಯಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
– ಇದೀಗ ಛತ್ತೀಸ್ ಘಡ ದಲ್ಲಿ ಕಾಂಗ್ರೆಸ್ಸ ಸರ್ಕಾರವೇ ಬಿಜೆಪಿಯೂ ನಾಚುವಂತೆ ಸರ್ಕಾರಿ ಹಣದಲ್ಲಿ ನೂರಡಿ ಎತ್ತರದ ರಾಮ, ಹನುಮ , ಕೌಸಲ್ಯಾರ ಪ್ರತಿಮೆ ಮತ್ತು ದೇವಸ್ಥಾನಗಳನ್ನು ಕಟ್ಟುತ್ತಾ ಹಿಂದುತ್ವ ರಾಜಕಾರಣದ ನಕಲು ಮಾಡುತ್ತಿರುವ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
– ಮಧ್ಯಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದೂ ಓಟುಗಳನ್ನು ಆಕರ್ಷಿಸುವ ಸಲುವಾಗಿ ಬಾಬಾಗಳನ್ನು ಓಲೈಸುವುದರಲ್ಲಿ ಬಿಜೆಪಿಗೆ ಸಡ್ಡು ಹೊಡೆಯುತ್ತಿರುವ ಕಾಂಗ್ರೆಸ್ಸಿನ ಮೃದು ಹಿಂದುತ್ವದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
ಈ ತಪ್ಪುಗಳ ಮೂಲದಲ್ಲಿರುವುದು ಶತ್ರುವನ್ನು ಶತ್ರುವೆಂದು ಭಾವಿಸದ ಅವಕಾಶವಾದಿ ರಾಜಕೀಯದಲ್ಲಿ
ಹೀಗಾಗಿ ನೈಜ ಪ್ರಜಾತಂತ್ರವಾದಿಗಳಿಗೆ ಇವು ಮತ್ತು ಖಾದರ್ ಆಹ್ವಾನಿಸಿದಂತವರು ಎಷ್ಟು ಶತ್ರುಗಳು ಅನಿಸುತ್ತದೋ ಅಷ್ಟು ಕಾಂಗ್ರೆಸ್ಸಿಗೆ ಅನಿಸುವುದೇ ಇಲ್ಲ.
ಏಕೆಂದರೆ ಕಾಂಗ್ರೆಸ್ ಬಿಜೆಪಿ ಗಿಂತ ಭಿನ್ನವಾದರೂ ಅವುಗಳ ನಡುವಿನ ಅಂತರವೇನೂ ಜಾಸ್ತಿ ಇಲ್ಲ.
ಆದ್ದರಿಂದ ಕಾಂಗ್ರೆಸ್ಸಿನ ಈ ಮೃದು ಹಿಂದುತ್ವವಾದಿ ತಪ್ಪುಗಳು ಕೇವಲ ಕಾಂಗ್ರೆಸ್ಸನ್ನು ದುರ್ಬಲಗೊಳಿಸಿಲ್ಲ. ಇಡೀ ದೇಶದ ಅಡಿಪಾಯವನ್ನೇ ಅಸ್ಥಿರಗೊಳಿಸಿವೆ.
ಹೀಗಾಗಿ ಖಾದರ್ ತಪ್ಪುಗಳನ್ನು ಮಾತ್ರ ಟೀಕಿಸುತ್ತಾ ಅದರ ಬೇರಿನಲ್ಲಿರುವ ಕಾಂಗ್ರೆಸ್ಸಿನ ಮೃದು ಹಿಂದುತ್ವದ ಅಡಿಪಾಯವನ್ನು ಮರೆತರೆ ಕಾಂಗ್ರೆಸ್ಸಿಗೂ ಒಳ್ಳೆಯದಾಗುವುದಿಲ್ಲ. ದೇಶಕ್ಕೂ ಒಳ್ಳೆಯದಾಗುವುದಿಲ್ಲ.
ಅಂದಹಾಗೆ ಈ ಮೃದು ಹಿಂದುತ್ವದ ಕಾಂಗ್ರೆಸ್ ರಾಜಕೀಯ ಹೇಗೆ ಆಂತರ್ಯದಲ್ಲಿ ಮನುವಾದ ದ ಸಮರ್ಥಕ ವಾಗಿರುತ್ತದೆ ಎಂಬುದಕ್ಕೆ ಡಿಕೆ ಶಿವಕುಮಾರ್ ಅತ್ಯುತ್ತಮ ಉದಾಹರಣೆ.
ಮೊನ್ನೆ Week End With Ramesh ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತನಗೆ ಮಾರ್ಗ ದರ್ಶನ ಮಾಡುತ್ತಿರುವರಲ್ಲಿ ಜ್ಯೋತಿಷಿಗಳೂ ಇದ್ದಾರೆ ಎಂದು ಹೇಳಿದರು. ಅಷ್ಟು ಮಾತ್ರವಲ್ಲ. ಭಾರತದ ಭವಿಷ್ಯ ಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ ಎಂದು ಪ್ರತಿಪಾದಿಸಿದರು.
ಮುಂದುವರೆದು ಸಂಸ್ಕೃತಿಯ ಭಾಗವಾಗಿ ಒಂದು ಸಂಸ್ಕೃತ ಶ್ಲೋಕವನ್ನು ಉದ್ಧರಿಸಿದರು ಹಾಗೂ ಅದರ ತಾತ್ಪರ್ಯವನ್ನು ವಿವರಿಸಿದರು . ಅದೇನೆಂದರೆ :
” ಹೆಣ್ಣು, ರಾಜ್ಯ ಮತ್ತು ವಿದ್ಯೆಯನ್ನು ಗೆಲ್ಲಬೇಕು. ಹೆಣ್ಣು ತಾಯಿಯೇ ಆಗಿದ್ದರೂ, ಹೆಂಡತಿಯೇ ಆಗಿದ್ದರೂ , ಮಗಳೆ ಆಗಿದ್ದರೂ ಪುರುಷ ಅವರ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು” ಎಂದು ಪ್ರತಿಪಾದಿಸಿದರು!
ಹಿಂದುತ್ವವಾದಿಗಳದ್ದೂ ಹೆಣ್ಣಿನ ಬಗ್ಗೆ ಇದೆ ತಿಳವಳಿಕೆಯಲ್ಲವೇ?
ಇಂಥಾ ಗ್ರಹಿಕೆಯಿಂದಾಗಿಯೇ ಅಲ್ಲವೇ ಹಿಂದುತ್ವದ ಪ್ರತಿಪಾದಕರು ಕಾಂಗ್ರೆಸ್ಸಿನ ನಾಯಕರಿಗೆ ತಪ್ಪು ಎನಿಸದೆ ಹೋಗುವುದು?
ಮನುವಾದಿಗಳನ್ನು ತಮ್ಮ ವೇದಿಕೆಗಳಿಗೂ ಕರೆಯುವುದು ತಪ್ಪು ಎನಿಸದಿರುವುದು ಇದೆ ಕಾರಣಕ್ಕೆ ಅಲ್ಲವೇ?
ಖಾದರ್ ಅವರನ್ನು ಯಾವ ಕಾರಣಕ್ಕಾಗಿ ಖಂಡಿಸುತ್ತಿದ್ದೇವೆಯೋ ಅದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರ ನಿಲುವನ್ನೂ ಖಂಡಿಸಬೇಕಲ್ಲವೇ?
ಅದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸಿನ ಮೃದು ಹಿಂದುತ್ವವಾದಿ ರಾಜಕೀಯವನ್ನು ವಿರೋಧಿಸಬೇಕಲ್ಲವೇ?




