Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೂರ್ಯಗ್ರಹಣ : ವೈಜ್ಞಾನಿಕ ಹಾದಿಯಲ್ಲಿ ಮುನ್ನಡೆಯೋಣ

ಇಂದು ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದೆ. ಕರ್ನಾಟಕದಲ್ಲಿ ಸಂಜೆ 5.12 ರಿಂದ ಸೂರ್ಯಗ್ರಹಣ ಪ್ರಾರಂಭವಾಗಿ 5.49 ಕ್ಕೆ ಮುಕ್ತಾಯವಾಗಲಿದೆ.

ಸೂರ್ಯ ಗ್ರಹಣ ಎಂದ ಕೂಡಲೇ ಕೆಲವರು ಈಗಲೂ ಭಯ, ಆತಂಕಕ್ಕೆ ಒಳಗಾಗುತ್ತಾರೆ. ಗ್ರಹಣದ ಸಮಯದಲ್ಲಿ ಆಹಾರ ತಿನ್ನಬಾರದು, ಆಹಾರ ಪದಾರ್ಥಗಳನ್ನು ಮಾಡಬಾರದು ಎಂದು ಈಗಲೂ ಮೌಢ್ಯವೆಂಬ ಕೂಪದಲ್ಲಿ ಬಿದ್ದು ಒದ್ದಾಡುವವರ ಸಂಖ್ಯೆಯೇ ಹೆಚ್ಚು. ಹಾಗೆಯೇ ಗ್ರಹಣದ ದಿನ ಬಹುತೇಕ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ, ನಿಮಿಷಾಂಭ ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ದೇವಸ್ಥಾನಗಳನ್ನು ಮುಚ್ಚಲಾಗಿದೆ. ಮಂಡ್ಯ ನಗರದ ಚಾಮುಂಡೇಶ್ವರಿ, ವಿದ್ಯಾ ಗಣಪತಿ ದೇವಸ್ಥಾನ ಬೆಳಿಗ್ಗೆಯೇ ಮುಚ್ಚಲಾಗಿತ್ತು. ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ ಬಾಗಿಲಿಗೆ ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು. ಇದೆಂತಹ ಮೌಢ್ಯಾಚರಣೆ ಎಂಬುದನ್ನು ಬಟ್ಟೆ ಮುಚ್ಚಿದ ಪೂಜಾರಿಯನ್ನು ಕೇಳಬೇಕು. ಪುರೋಹಿತಶಾಹಿ ವರ್ಗ ಇನ್ನೂ ಜನರನ್ನು ಮೌಢ್ಯದಲ್ಲಿ ಮುಳುಗಿಸಿ ತಮ್ಮ ವೈದಿಕಶಾಹಿ ಮೂಢನಂಬಿಕೆಯನ್ನು ಹೇರುತ್ತಿದೆ.

ಇಂದು ಬೆಳಿಗ್ಗೆಯಿಂದಲೇ ಬಹುತೇಕ ವಾಹಿನಿಗಳು ದಂಡಪಿಂಡ ಸ್ವಾಮೀಜಿಗಳನ್ನು ಗುಡ್ಡೆ ಹಾಕಿಕೊಂಡು ಗ್ರಹಣದಿಂದ ಆ ರಾಶಿಯವರಿಗೆ ಏನು ಸಮಸ್ಯೆ, ಈ ರಾಶಿಯವರಿಗೆ ಏನು ನಷ್ಟ, ದೇಶಕ್ಕೆ ಕಂಟಕ ಎಂದು ಬುರುಡೆ ಬಿಡಿಸಿ ಜನರನ್ನು ಮತ್ತಷ್ಟು ಅಜ್ಞಾನದ ಕೂಪಕ್ಕೆ ತಳ್ಳುವ ಕೆಲಸವನ್ನು ಮಾಡಿದವು. ದಂಡ ಪಿಂಡ ಸ್ವಾಮೀಜಿಗಳು ಕೊಡುವ ಹಣವನ್ನು ಸ್ವೀಕರಿಸಿ ಸಮಾಜದಲ್ಲಿ ಮೌಢ್ಯ ತುಂಬುವ ಈ ಕಾರ್ಯಕ್ರಮ ಮಾಡಿದ್ದು ಎಷ್ಟು ಸರಿ ? ಮೌಢ್ಯದ ಪರಮಾವಧಿಯ ಈ ಸಮಾಜದಲ್ಲಿ ವೈಚಾರಿಕತೆ ಬಿತ್ತುವ ಮಾಧ್ಯಮಗಳು ಕಳ್ಳ, ಸುಳ್ಳ ಸ್ವಾಮೀಜಿ ಎನ್ನಲು ನಾಲಾಯಕ್ ಆದವರನ್ನು ಕಟ್ಟಿಕೊಂಡು ಮೌಢ್ಯ ಬಿತ್ತಿದ್ದು ನಾಚಿಕೆಗೇಡಿನ ಸಂಗತಿ.

ಅದರೂ ಒಂದಷ್ಟು ವಿಚಾರವಾದಿಗಳು ಸಮಾಜದಲ್ಲಿರುವ ಮೌಢ್ಯ ತೊಲಗಿಸಲು ಪಣ ತೊಟ್ಟು, ಗ್ರಹಣದ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನಗಳನ್ನು ಮಾಡಿರುವುದು ಸ್ವಾಗತಾರ್ಹ.

ಗ್ರಹಣದ ವೈಜ್ಞಾನಿಕ ಹಿನ್ನೆಲೆ ತಿಳಿದಿದ್ದರೂ ಶಾಲಾ ಪಠ್ಯಪುಸ್ತಕದಲ್ಲಿಯೂ ಈ ಬಗ್ಗೆ ಮಾಹಿತಿ ಇದ್ದರೂ ಗ್ರಹಣದ ಬಗ್ಗೆ ಜನರಲ್ಲಿ ಭಯ, ಆತಂಕ ಬೇರುಬಿಟ್ಟಿದೆ. ಆಗಿಂದಾಗ್ಗೆ ಸಂಭವಿಸುವ ಗ್ರಹಣಗಳು ಜನರಲ್ಲಿ ಜಾಗೃತಿ ಹಾಗೂ ವೈಜ್ಞಾನಿಕ ದೃಷ್ಟಿಕೋನ ಮೂಡಿಸುವುದು ಅಗತ್ಯ.

ಖ್ಯಾತ ಚಿಂತಕ,ವಿಚಾರವಾದಿ ಪ್ರೊ.ಜಿ‌.ಟಿ.ವೀರಪ್ಪ ಅವರು, ಸೂರ್ಯಗ್ರಹಣ ವೈಜ್ಞಾನಿಕ ನೆಲೆಯಲ್ಲಿ ನಡೆಯುವ ಒಂದು ಕ್ರಿಯೆ. ಗ್ರಹಣದ ಸಮಯದಲ್ಲಿ ಪೂಜೆ ಮಾಡಬಾರದು, ಆಹಾರ ಸೇವಿಸಬಾರದು ಎಂದೆಲ್ಲಾ ಹೇಳುವ ಮೂಲಕ ಅಜ್ಞಾನದ ಎಡೆಗೆ ಕರೆದೊಯ್ಯುತ್ತಿದ್ದಾರೆ. ವೈಜ್ಞಾನಿಕ ಯುಗದಲ್ಲೂ ಈ ಅವೈಜ್ಞಾನಿಕ ನಡೆ ನಾಚಿಕೆಗೇಡು. ಸೂರ್ಯಗ್ರಹಣ ಇಷ್ಟ ಇದ್ದವರು ಸುರಕ್ಷಿತ ಕನ್ನಡಕಗಳನ್ನು ಹಾಕಿಕೊಂಡು ನೋಡಲಿ, ನೋಡದಿರುವವರು ಮನೆಯಲ್ಲಿರಲಿ. ಅದೂ ಬಿಟ್ಟು ಗ್ರಹಣದಿಂದ ಸಮಸ್ಯೆ,ನಷ್ಟ ಎಂದೆಲ್ಲಾ ಜನರನ್ನು ಭಯ-ಭೀತರನ್ನಾಗಿ ಮಾಡಬಾರದು ಎನ್ನುತ್ತಾರೆ.

ಮಹಿಳಾ ಮುನ್ನಡೆಯ ಪೂರ್ಣಿಮಾ, ಸೂರ್ಯಗ್ರಹಣವನ್ನು ವೈಜ್ಞಾನಿಕ ಮನೋಭಾವದಲ್ಲಿ ನೋಡುವ ದೃಷ್ಟಿಕೋನವನ್ನು ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಬೆಳಸಬೇಕು. ಗ್ರಹಣ ಎಂಬುದು ಒಂದು ಬಾಹ್ಯಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಕ್ರಿಯೆ. ಆದರೆ ಇದನ್ನು ವೈಜ್ಞಾನಿಕವಾಗಿ ನೋಡುವುದನ್ನು ಬಿಟ್ಟು ಜ್ಯೋತಿಷ್ಯ, ಶಾಸ್ತ್ರ ಅಂತೆಲ್ಲಾ ಹೇಳಿ ಆ ರಾಶಿಯವರು ಈ ಪೂಜೆ ಮಾಡಬೇಕು, ಆ ದಾನ ಕೊಡಬೇಕು ಎಂಬುದೆಲ್ಲಾ, ಬ್ರಾಹ್ಮಣ್ಯವಾದದ ಬಂಡವಾಳವಷ್ಟೆ.

ಜೊತೆಗೆ ಮನೆಯಲ್ಲಿ ಮಾಡಿದ ಅಡುಗೆಯನ್ನು ಆಚೆ ಹಾಕಬೇಕು, ನೀರನ್ನು ಸಹಾ ಆಚೆ ಸುರಿಯ ಬೇಕೆಂದು ಹೇಳುವವರು ನದಿಯ ನೀರನ್ನೂ ಆಚೆ ಹಾಕಲು ಸಾಧ್ಯವೇ? ಮನೆಯಲ್ಲಿರುವ ದವಸ-ಧಾನ್ಯಗಳನ್ನು ಆಚೆ ಹಾಕಲು ಸಾಧ್ಯವೇ? ಮನೆಯಲ್ಲಿ ಸಂಪಾದಿಸಿದ ಹಣ ಒಡವೆಗಳನ್ನು ಆಚೆ ಹಾಕಲು ಸಾಧ್ಯವೇ?
ಜನರಲ್ಲಿ ಮೌಢ್ಯ ತುಂಬಿ ಬಂಡವಾಳ ಮಾಡಿಕೊಳ್ಳುವುದನ್ನು ಅರ್ಥ ಮಾಡಿಕೊಂಡು ಜನರನ್ನು ಮೌಢ್ಯದಿಂದಾಚೆಗೆ ಕರೆತರಬೇಕು. ನಭೋಮಂಡಲದಲ್ಲಿ ನಡೆಯುವ ಈ ಬೆಳಕಿನಾಟವನ್ನು ಮಿಸ್ ಮಾಡದೆ ಜನರು ನೋಡುವಂತಾಗಬೇಕು, ಪ್ರಕೃತಿಯ ಹಲವು ಮನೋಹರ ದೃಶ್ಯಗಳಲ್ಲಿ ಇದು ಕೂಡಾ ಒಂದು ಎಂದು ಅಭಿಪ್ರಾಯ ಪಡುತ್ತಾರೆ.

ಗ್ರಹಣದ ಸಂದರ್ಭದಲ್ಲಿ ಆಹಾರ, ವಿಷಮಯವಾಗುತ್ತದೆ. ಆದಕಾರಣ ಆಹಾರ ಹಾಗೂ ನೀರನ್ನು ಹೊರಗೆ ಚೆಲ್ಲಬೇಕೆಂದು ಹೇಳುವವರು ಇದ್ದಾರೆ. ಅಂಥವರಿಗೆ ಕೆರೆ, ಟ್ಯಾಂಕ್‌ಗಳ ನೀರಿನ ಬಗ್ಗೆ ವಿವರಿಸಿದರೆ ತಿಳುವಳಿಕೆ ಮೂಡಬಹುದು.

ಪಾರ್ಶ್ವವಿರಲಿ, ಪೂರ್ಣವಿರಲಿ, ಕಂಕಣ ಸೂರ್ಯ ಗ್ರಹಣವಿರಲಿ, ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ತಿಳಿದುಕೊಂಡು, ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಮೂಲಕ ಅಂಧಕಾರದಿಂದ ಹೊರತರಬೇಕಿದೆ. ವಿಜ್ಞಾನದ ಮೂಲಕ ವೈಚಾರಿಕತೆಯ ಹಾದಿಯಲ್ಲಿ ಸಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ.ಮೌಢ್ಯದಿಂದ ಹೊರಬರೋಣ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!