ಯಾವುದೇ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದರೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು
ನಿವೃತ್ತ ಮುಖ್ಯ ಪರಿಸರ ಅಧಿಕಾರಿ ಡಾ. ಕುಮಾರಸ್ವಾಮಿ ಸಲಹೆ ನೀಡಿದರು.
ಮಂಡ್ಯ ನಗರದ ಪಿಇಎಸ್ ಕಾನೂನು ಕಾಲೇಜು, ಕಾನೂನು ವಿಶ್ವವಿದ್ಯಾಲಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾನೂನು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸುಮಾರು ನೂರು ಕೆ.ಜಿ. ಘನತ್ಯಾಜ್ಯ ಸಂಗ್ರಹವಾದರೆ, ಅದರಲ್ಲಿ ಶೇ.90 ರಿಂದ 95ರಷ್ಷು ಮರುಬಳಕೆ ಮಾಡಿಕೊಳ್ಳಬಹುದು. ಇದರಿಂದ ಪರಿಸರ ಮಾಲಿನ್ಯವು ಸಾಕಷ್ಟು ಕಡಿಮೆಯಾಗುತ್ತದೆ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಸರಿಯಾಗಿ ಸಂಗ್ರಹಿಸಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು.ಆದರೆ ಇಂದು ಕೆರೆ, ಸಣ್ಣ ನದಿ, ಕಾವೇರಿ ನದಿಗೆ ಸೇರಿಸುವ ಮೂಲಕ ನದಿಯ ನೀರನ್ನು ಕಲುಷಿತ ಮಾಡಬಾರದು ತಂದು ತಿಳಿಸಿದರು.
1974ರಲ್ಲಿ ಜಾರಿಗೊಳಿಸಿದ ಜಲ ಕಾಯ್ದೆ ಪ್ರಕಾರ ದೇಶದ ಯಾವುದೇ ಜಲ ಮೂಲಗಳನ್ನು ಕಲುಷಿತಗೊಳಿಸಬಾರದು. ಆದರೆ ನಮ್ಮಲ್ಲಿ ಕಾರ್ಖಾನೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಜಲ ಮೂಲಗಳು ಕಲುಷಿತವಾಗುತ್ತಿವೆ. ನಗರಸಭೆ ಸೇರಿದಂತೆ ಎಲ್ಲಾ ಸಂಸ್ಥೆಗಳು ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಕೆರೆ ಮತ್ತು ನದಿಗಳಿಗೆ ಬಿಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿದೆ.ರಾಜ್ಯದಲ್ಲಿ ಸುಮಾರು 14 ನದಿಗಳು ಮಾಲಿನ್ಯ ಗೊಂಡಿವೆ ತಂದು ಎಂದು ಆತಂಕ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಕನಕಪುರ ಸೇರಿದಂತೆ ರಾಜ್ಯದ ಎಲ್ಲೆಡೆ ನದಿ ನೀರು ಮಾಲಿನ್ಯಗೊಂಡಿದೆ. ಅಂಕಿ ಅಂಶಗಳ ಪ್ರಕಾರ ಸುಮಾರು 14 ನದಿಗಳು ಮಲಿನವಾಗಿದೆ. ಕಲುಷಿತ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಲಂ 25ರನ್ವಯ ಜಲಮಾಲಿನ್ಯ ನಿಷೇಧಿಸಲಾಗಿದೆ. ಕಾರ್ಖಾನೆಗಳು ಉಪಯೋಗಿಸಿದ ನೀರನ್ನು ಚರಂಡಿಗಳಿಂದ ಸಣ್ಣ ಪುಟ್ಟ ಕಾಲುವೆಗಳು, ಕೆರೆಗಳು, ಹಳ್ಳಗಳ ಮೂಲಕ ನದಿಗೆ ಕಲುಷಿತ ನೀರು ಹೋಗುವಂತೆ ಮಾಡಿದ್ದೇವೆ. ಇದು ಜಲ ಮಾಲಿನ್ಯಕ್ಕೆ ಮುಖ್ಯಕಾರಣವಾಗಿದೆ ಎಂದು ಹೇಳಿದರು.
ಪ್ರತೀ ಹಂತದಲ್ಲೂ ಜಲಕಾಯಿದೆಯನ್ನು ಅನುಷ್ಠಾನಗೊಳಿಸಬೇಕು. ಪರಿಸರ ಮಾಲಿನ್ಯ ಮಂಡಳಿಯವರಿಗೆ ಅನುಷ್ಠಾನದ ಅಧಿಕಾರ ನೀಡಲಾಗಿದೆ. ಹಾಗಾಗಿ ಕಾರ್ಖಾನೆ ಸೇರಿದಂತೆ ಇತರೆ ಘಟಕಗಳ ಸ್ಥಾಪನೆಗೆ ಪರಿಸರ ಮಾಲಿನ್ಯ ಮಂಡಳಿಯ ಅನುಮತಿ ಕಡ್ಡಾಯವಾಗಿ ಬೇಕಾಗಿದೆ. ಮಿತಿಗಿಂತ ಹೆಚ್ಚಾಗಿ ಮಾಲಿನ್ಯ ಆಗದಂತೆ ಪರಿಸರ ಮಾಲಿನ್ಯ ಮಂಡಳಿ ಷರತ್ತು ವಿಧಿಸಿ ಅನುಮತಿ ನೀಡುತ್ತದೆ. ಆದರೆ ಕೆಲವರು ಮಂಡಳಿ ವಿಧಿಸಿದ ಷರತ್ತನ್ನೂ ಮೀರಿ ಮಾಲಿನ್ಯ ಉಂಟುಮಾಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
ತಂಬಾಕು ಆರೋಗ್ಯಕ್ಕೆ ಬಹಳ ಕೆಟ್ಟದ್ದು,ತಂಬಾಕಿನ ಜಮೀನಿಗೆ ಬೇರೆ ಇರುವುದಿಲ್ಲ, ಏಕೆಂದರೆ ಮನುಷ್ಯನನ್ನು ಬಿಟ್ಟರೆ ದನ, ಕತ್ತೆ ತಂಬಾಕನ್ನು ತಿನ್ನುವುದಿಲ್ಲ.ಅಂದರೆ ಇದರಲ್ಲಿರುವ ವಿಷಕಾರಕ ಅಂಶಗಳು ಎಷ್ಟು ಎಂಬುದು ಗೊತ್ತಾಗುತ್ತದೆ. ತಂಬಾಕು ಜೀವವನ್ನು ಕೊಲ್ಲುತ್ತದೆ ಎಂದರೂ ಮನುಷ್ಯ ಅದರ ದಾಸನಾಗಿರುವುದು ಸರಿಯಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಯೋಗೇಶ್, ಪ್ರಾಧ್ಯಾಪಕರಾದ ಸುಭಾಷ್, ಎಂ.ಪಿ. ಪ್ರಮೋದ್, ಜಯಕುಮಾರ್, ಯಮುನಾ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.




