ಬೆಂಗಳೂರು ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಹಲವೆಡೆಯಿಂದ ಸಮಸ್ಯೆಗಳನ್ನು ಒತ್ತು ತಂದಿದ್ದ ಜನತೆಯ ಪೈಕಿ, ಹಲವು ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೇನ್ಸ್ ನಡೆಸಿ ಸ್ಥಳದಲ್ಲೇ ಪರಿಹಾರ ನೀಡಿದರು.
ಮಂಡ್ಯ ಜಿಲ್ಲೆಯ 96 ವರ್ಷದ ಪರಂಧಾಮಯ್ಯ ಅವರು ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯದಲ್ಲಿ ಜಮೀನು ಹೊಂದಿದ್ದು, ವ್ಯವಸಾಯ ಮಾಡುವ ಜಮೀನನ್ನು ಬೈಪಾಸ್ ಗಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಜನತಾ ದರ್ಶನದಲ್ಲಿ ದೂರು ನೀಡಿದರು. ಮಂಡ್ಯ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಮಾತನಾಡಿದ ಮುಖ್ಯಮಂತ್ರಿ ಅವರು, ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. 96 ವರ್ಷದ ಪರಂದಾಮಯ್ಯ ಅವರ ಜೀವನೋತ್ಸಾಹಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಇನ್ನಷ್ಟು ಕಾಲ ಹೀಗೆಯೇ ಆರೋಗ್ಯವಾಗಿರಿ ಎಂದು ಶುಭ ಕೋರಿದರು.
ನರಸಿಂಹಮೂರ್ತಿ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬನವತಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಜೀವನ ನಿರ್ವಹಣೆಗಾಗಿ ನಂಬಿರುವ ಜಮೀನಿಗೆ ಖಾತೆ ಮಾಡಿಕೊಟ್ಟಿಲ್ಲ ಎಂದು ಇಂದಿನ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿ, ವಯೋವೃದ್ಧ ರೈತನ ಸಂಕಷ್ಟಕ್ಕೆ ನೆರವಾದರು.
ಲೀಸ್ ಮನೆ ಸಮಸ್ಯೆಗೆ ಸ್ಪಂದಿಸಿದ ಸಿಎಂ
ಮೈಸೂರು ರಸ್ತೆಯ ಬ್ಯಾಟರಾಯನಪುರದ 3ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು ಇಂದಿನ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ ನವರು ಮನೆ ಜಪ್ತಿಗೆ ಬಂದಿದ್ದಾರೆ. ನಾವು ಲೀಸ್ ಗೆ ಪಡೆದು ಮನೆಯಲ್ಲಿ ವಾಸವಿದ್ದೇವೆ ಆದರೆ ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ. ನಮ್ಮ ಲೀಸ್ ಹಣವೂ ಹೋಗುತ್ತದೆ, ವಾಸಕ್ಕೆ ಮನೆಯೂ ಇಲ್ಲದಂತಾಗುತ್ತದೆ ಎಂದು ಕಷ್ಟ ಹೇಳಿಕೊಂಡರು. ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದು ಮಾತನಾಡಿದ ಮುಖ್ಯಮಂತ್ರಿಗಳು ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು. ಪೊಲೀಸ್ ಆಯುಕ್ತ ದಯಾನಂದ್ ಅವರು ಸಮಗ್ರವಾಗಿ ಸಮಸ್ಯೆ ಕೇಳಿಸಿಕೊಂಡು ಶೀಘ್ರ ಇತ್ಯರ್ಥಪಡಿಸುವಂತೆ ಡಿಸಿಪಿ ಅವರಿಗೆ ಸೂಚಿಸಿದರು. ಈ ಮೂಲಕ ಭವಿಷ್ಯದಲ್ಲಿ ಎದುರಾಗುತ್ತಿದ್ದ ಅತಂತ್ರತೆಯಿಂದ ಕುಟುಂಬವನ್ನು ಪಾರುಮಾಡಲಾಗಿದೆ.
ಅನುಕಂಪದ ಆಧಾರದಲ್ಲಿ ಉದ್ಯೋಗ
ಬೆಳಗಾವಿಯ ಉಜ್ಮಾ ಬಾನು ಎಂಬವರು ತಮ್ಮ ತಂದೆ KUWSSB ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ. ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಮೊದಲಿಗೆ ಹುದ್ದೆಗಳು ಖಾಲಿ ಇಲ್ಲವೆಂದು ತಿಳಿಸಲಾಗಿತ್ತು. ನಂತರ ಅಪ್ರಾಪ್ತ ವಯಸ್ಕರಾದ್ದರಿಂದ ಉದ್ಯೋಗ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು. ನಿಯಮಾನುಸಾರ ಅವರು ವಯಸ್ಕರಾದ ನಂತರ ಎರಡು ವರ್ಷಗಳೊಳಗೆ ಅರ್ಜಿಸಲ್ಲಿಸಲು ಅವಕಾಶವಿರುವುದರಿಂದ ಉದ್ಯೋಗ ದೊರಕಿಸುವಂತೆ ಜನತಾ ದರ್ಶನದಲ್ಲಿ ಕೋರಿದರು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು KUWSSB ಅಧಿಕಾರಿಗಳಿಗೆ ಸೂಚಿಸಿ, ನೊಂದ ಜೀವಕ್ಕೆ ನೆರವಿನ ಹಸ್ತ ಚಾಚಿದರು.
ಶೇ. 75 ರಷ್ಟು ಅಂಗವೈಕಲ್ಯ ಹೊಂದಿರುವ ನಂದಿತಾ ಬಿ.ಎಂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಎಂ.ಕಾಂ ಪದವೀಧರೆಯಾಗಿರುವ ಇವರು ತಮಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಜನತಾ ದರ್ಶನದಲ್ಲಿ ಮನವಿ ಮಾಡಿದರು. ಯುವತಿಯ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ಅರ್ಜಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ನೊಂದ ಜೀವನಕ್ಕೆ ಮಾನವೀಯ ನೆಲೆಯಲ್ಲಿ ನೆರವಾದರು.
ಅಂಜಲಿ ಕುಂಬಾರ ಎಂಬುವರ ಆರು ತಿಂಗಳ ಮಗು ಮೇಘಾಶ್ರೀ ಎರಡು ಕಾಲುಗಳ ಅಂಗವೈಕಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯದಲ್ಲಿನ ರಂಧ್ರದ ಚಿಕಿತ್ಸೆಗೆ ನೆರವು ನೀಡುವಂತೆ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದರು. ಮಗುವಿನ ಪೋಷಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲೇ 2 ಲಕ್ಷ ರೂ. ಮಂಜೂರು ಮಾಡಿ, ಬದುಕಿ ಬಾಳಬೇಕಾದ ಎಳೆಯ ಕಂದಮ್ಮನ ಬದುಕಿಗೆ ಭರವಸೆ ತುಂಬಿದರು.




